ಗಲ್ಫ್ ದೇಶಗಳ ಅತ್ಯಂತ ಯಶಸ್ವಿ ಭಾರತೀಯ ಉದ್ಯಮಿಗಳ ಫೋರ್ಬ್ಸ್ ಪಟ್ಟಿ: ಟಾಪ್ 12ರಲ್ಲಿ ಬಿ.ಆರ್.ಶೆಟ್ಟಿ, ತುಂಬೆ ಮೊಯ್ದಿನ್

Update: 2017-05-13 07:37 GMT
ಡಾ.ಬಿ.ಆರ್.ಶೆಟ್ಟಿ                ತುಂಬೆ ಮೊಯ್ದಿನ್

ರಿಯಾದ್, ಮೇ 13: ಗಲ್ಫ್ ದೇಶಗಳ ಅತ್ಯಂತ ಯಶಸ್ವಿ ಭಾರತೀಯ ಉದ್ಯಮಿಗಳ ಪಟ್ಟಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಮೂಲದ ಇಬ್ಬರು ಖ್ಯಾತ ಉದ್ಯಮಿಗಳು ಟಾಪ್ 12ರಲ್ಲಿ ಸ್ಥಾನ ಪಡೆದುಕೊಂಡು ಕರಾವಳಿಗೆ ಕೀರ್ತಿ ತಂದಿದ್ದಾರೆ. ಎನ್‌ಎಂಸಿ ಹೆಲ್ತ್ ಕೇರ್ ಹಾಗೂ ಯುಎಇ ಎಕ್ಸ್ ಚೇಂಜ್ ಸಂಸ್ಥೆಯ ಸ್ಥಾಪಕರೂ ಅಧ್ಯಕ್ಷರೂ ಆಗಿರುವ ಡಾ.ಬಿ.ಆರ್.ಶೆಟ್ಟಿ ಈ ಪಟ್ಟಿಯಲ್ಲಿ ಮೂರನೆ ಸ್ಥಾನ ಪಡೆದಿದ್ದರೆ, ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷ ತುಂಬೆ ಮೊಯ್ದಿನ್ 12ನೆ ಸ್ಥಾನ ಗಳಿಸಿದ್ದಾರೆ.

ಫೋರ್ಬ್ಸ್ ಮಿಡ್ಲ್ ಈಸ್ಟ್ ಬಿಡುಗಡೆಗೊಳಿಸಿದ ಟಾಪ್ 100 ಇಂಡಿಯನ್ ಬಿಸಿನೆಸ್ ಲೀಡರ್ಸ್‌ ಆಫ್ ದಿ ಅರಬ್ ವರ್ಲ್ಡ್ 2017 ಇದರಲ್ಲಿ ಪ್ರಥಮ ಸ್ಥಾನವನ್ನು ಲುಲು ಗ್ರೂಪ್ ಇಂಟರ್ ನ್ಯಾಷನಲ್ ಸಂಸ್ಥೆಯ ಆಡಳಿತ ನಿರ್ದೇಶಕ ಯೂಸುಫ್ ಅಲಿ ಎಂ.ಎ. ಗಳಿಸಿದ್ದರೆ, ಎರಡನೆ ಸ್ಥಾನವನ್ನು ಸ್ಟಾಲಿಯನ್ ಗ್ರೂಪ್ ಅಧ್ಯಕ್ಷ ಸುನಿಲ್ ವಾಸ್ವಾನಿ ಪಡೆದಿದ್ದಾರೆ.

ಫೋರ್ಬ್ಸ್ ಬಿಡುಗಡೆಗೊಳಿಸಿದ 50 ಯಶಸ್ವಿ ಭಾರತೀಯ ಎಕ್ಸಿಕ್ಯೂಟಿವ್ ಪಟ್ಟಿಯಲ್ಲಿ ಪ್ರಥಮ ಸ್ಥಾನವನ್ನು ಪೆಪ್ಸಿಕೋ ಇಂಟರ್ ನ್ಯಾಷನಲ್ ಇದರ ಮಧ್ಯಪೂರ್ವ ಹಾಗೂ ಆಫ್ರಿಕಾ ಪ್ರಾಂತದ ಸಿಇಒ ಸಂಜೀವ್ ಛಡ್ಡಾ ಪಡೆದಿದ್ದಾರೆ. ಆದರೆ ಹಿಂದಿನ ವರ್ಷಗಳಂತೆ ಈ ಬಾರಿ ಫೋರ್ಬ್ಸ್ ಟಾಪ್ ಉದ್ಯಮಿಗಳ ಒಟ್ಟು ಆಸ್ತಿಯ ಮೌಲ್ಯವನ್ನು ಪ್ರಕಟಿಸಿಲ್ಲ.
ಬುಧವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದುಬೈಯಲ್ಲಿ ಭಾರತದ ಕಾನ್ಸುಲ್-ಜನರಲ್ ಆಗಿರುವ ವಿಪುಲ್ ಭಾಗವಹಿಸಿದ್ದರು.

ಈ ವರ್ಷದ ಫೋರ್ಬ್ಸ್ ಮಿಡ್ಲ್ ಈಸ್ಟ್ ಪಟ್ಟಿಯಲ್ಲಿ 28 ಯುವ ಹಾಗೂ ನೆಕ್ಸ್ಟ್ ಜನರೇಶನ್ ಬಿಸಿನೆಸ್ ಲೀಡರ್ ಗಳೂ ಸ್ಥಾನ ಪಡೆದಿದ್ದಾರೆ. ಇವರು 25 ಕುಟುಂಬ ಒಡೆತನದ ಹಾಗೂ 27.5 ಬಿಲಿಯನ್ ಡಾಲರ್ ಮೌಲ್ಯದ ಉದ್ಯಮವನ್ನು ಮುನ್ನಡೆಸಲಿದ್ದಾರೆ.

ಫೋರ್ಬ್ಸ್ ಪಟ್ಟಿಯಲ್ಲಿ ಈ ಬಾರಿ ಸ್ಥಾನ ಪಡೆದಿರುವ ಭಾರತೀಯ ಉದ್ಯಮಿಗಳು ವಿವಿಧ ಕಂಪೆನಿಗಳ ಮಾಲಕರಾಗಿದ್ದು, ರಿಟೇಲ್ ರಿಯಲ್ ಎಸ್ಟೇಟ್, ನಿರ್ಮಾಣ ಮುಂತಾದ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದವರಾಗಿದ್ದಾರೆ.

ಟಾಪ್ 100 ಉದ್ಯಮಿಗಳ ಪೈಕಿ 27 ಮಂದಿ ಕೇರಳ ಮೂಲದವರಾಗಿದ್ದರೆ, 23 ಮಂದಿ ಸಿಂಧಿಗಳಾಗಿದ್ದು, 16 ಮಂದಿ ಗುಜರಾತಿಗಳಾಗಿದ್ದಾರೆ.

ಟಾಪ್ ಟೆನ್ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಇತರ ಉದ್ಯಮಿಗಳ ಹೆಸರುಗಳು ಇಂತಿವೆ-

ಆರ್.ಪಿ. ಗ್ರೂಪ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ರವಿ ಪಿಳ್ಳೈ, ಜೆಮ್ಸ್ ಎಜುಕೇಶನ್ ಅಧ್ಯಕ್ಷ ಸನ್ನಿ ವರ್ಕಿ, ಜಾಯ್ ಅಲುಕ್ಕಾಸ್ ಸಮೂಹದ ಅಧ್ಯಕ್ಷ ಜಾಯ್ ಅಲುಕ್ಕಾಸ್, ವಿಪಿಎಸ್ ಹೆಲ್ತ್ ಕೇರ್ ಆಡಳಿತ ನಿರ್ದೇಶಕ ಶಂಶೀರ್ ವಯಲಿಲ್, ದೊಡ್ಸಲ್ ಗ್ರೂಪ್ ಅಧ್ಯಕ್ಷ ರಾಜೆನ್ ಕಿಲಾಚಂದ್, ಮುಲ್ಕ್ ಹೋಲ್ಡಿಂಗ್ಸ್ ಅಧ್ಯಕ್ಷ ಶಾಜಿ ಉಲ್ ಮುಲ್ಕ್ ಹಾಗೂ ಡೇನ್ಯೂಬ್ ಗ್ರೂಪ್ ಅಧ್ಯಕ್ಷ ರಿಜ್ವಾನ್ ಸಾಜನ್.

ಟಾಪ್ ಉದ್ಯಮಿಗಳ ಪೈಕಿ 11 ಮಂದಿ ಪಿಎಚ್‌ಡಿ ಪದವೀಧರರಾಗಿದ್ದರೆ, ಐವರು ವೈದ್ಯರಾಗಿದ್ದು, ಈ ಪೈಕಿ ಮೂವರು ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಆಸ್ಪತ್ರೆಗಳನ್ನು ಸ್ಥಾಪಿಸಿದ್ದಾರೆ. ಟಾಪ್ ಟೆನ್ ಉದ್ಯಮಿಗಳ ಒಟ್ಟು ಆದಾಯ 28.9 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.

ಟಾಪ್ 50 ಎಕ್ಸಿಕ್ಯೂಟಿವ್ ಗಳಲ್ಲಿ 15 ಮಂದಿ ಬ್ಯಾಂಕಿಂಗ್ ಮತ್ತು ಹಣಕಾಸು ಸೇವಾರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡವರಾಗಿದ್ದಾರೆ. ಪ್ರಥಮ ಸ್ಥಾನ ಪಡೆದ ಛಡ್ಡಾ ಅವರ ನಂತರದ ಸ್ಥಾನಗಳು ದೋಹಾ ಬ್ಯಾಂಕ್ ಸಿಇಒ ರಾಘವನ್ ಸೀತಾರಾಮನ್ ಹಾಗೂ ದುಬೈ ಇಸ್ಲಾಮಿಕ್ ಬ್ಯಾಂಕ್ ಸಿಇಒ ಅದ್ನಾನ್ ಚಿಲ್ವನ್ ಪಾಲಾಗಿದೆ.

ಬಿಎ ಗ್ರೂಪ್‌ನ ಸ್ಥಾಪಕ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್‌ರ ಪುತ್ರರಾಗಿರುವ ತುಂಬೆ ಮೊಯ್ದಿನ್‌ರವರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿ.1998ರಲ್ಲಿ ತುಂಬೆ ಮೊಯ್ದಿನ್ ಅವರಿಂದ ಸ್ಥಾಪಿಸಲ್ಪಟ್ಟ ತುಂಬೆ ಸಮೂಹವು ಇಂದು ಶಿಕ್ಷಣ, ಆರೋಗ್ಯ ರಕ್ಷಣೆ, ವೈದ್ಯಕೀಯ ಸಂಶೋಧನೆ, ಔಷಧಿ ಮಾರಾಟ ಇತ್ಯಾದಿಗಳು ಸೇರಿದಂತೆ 18 ವಿವಿಧ ಕ್ಷೇತ್ರಗಳಲ್ಲಿ 18 ಬ್ರಾಂಡ್‌ಗಳನ್ನು ನಿರ್ವಹಿಸುತ್ತಿದೆ. ಡಿಐಎಫ್‌ಸಿ-ದುಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ತುಂಬೆ ಸಮೂಹವು ಅಂತಾರಾಷ್ಟ್ರೀಯ ವಾಣಿಜ್ಯ ಸಂಸ್ಥೆಯಾಗಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News