ಸಂವಿಧಾನ ದೂರವಿರಿಸುವುದೇ ಆರೆಸ್ಸೆಸ್ ಅಜೆಂಡಾ: ಪ್ರೊ.ಚಂದ್ರಶೇಖರ ಪಾಟೀಲ್
ಬೆಂಗಳೂರು, ಮೇ 13: ಸಂವಿಧಾನವನ್ನು ದೂರವಿರಿಸಿ, ಮನುಸ್ಮೃತಿಯ ವಿಚಾರಗಳನ್ನು ಜಾರಿಗೆ ತರುವುದೇ ಆರೆಸ್ಸೆಸ್ ಸಂಘಟನೆಯ ಅಜೆಂಡಾವಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್‌ನಲ್ಲಿ "ನ್ಯಾಯಕ್ಕಾಗಿ ನಾವು" ಸಂಘಟನೆ ಆಯೋಜಿಸಿದ್ದ "ಪ್ರಸಕ್ತ ರಾಜಕಾರಣ ಮತ್ತು ಪ್ರಾದೇಶಿಕ ಹಿತ ವಿಚಾರ ಸಂಕಿರಣ" ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸಂವಿಧಾನದ ಅನುಗುಣವಾಗಿ ನಡೆದುಕೊಳ್ಳದೆ, ಆರೆಸ್ಸೆಸ್ ಅಜೆಂಡಾವನ್ನು ಮುಂದಿಟ್ಟುಕೊಂಡು ಆಡಳಿತ ನಡೆಸುತ್ತಿದೆ. ಹೀಗಾಗಿ, ನಾವು ಜನರಿಗೆ ಕೇಂದ್ರ ಸರಕಾರದ ಆರೆಸ್ಸೆಸ್ ಏನು ಎಂಬುದನ್ನು ಮನವರಿಕೆ ಮಾಡಿಕೊಡಬೇಕಾಗಿದೆ. ಹಲವರು ಸಂವಿಧಾನವನ್ನೇ ಧರ್ಮಗ್ರಂಥಗಳೆಂದು ಹೇಳುತ್ತಾರೆ. ಆದರೆ, ಧರ್ಮಗ್ರಂಥಕ್ಕೂ ಹಾಗೂ ಸಂವಿಧಾನಕ್ಕೂ ಬಹಳ ವ್ಯತ್ಯಾಸಗಳಿವೆ. ಹೀಗಾಗಿ, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಗೌರವಿಸೋಣ ಹಾಗೂ ಆ ದಾರಿಯಲ್ಲಿ ನಡೆಯೋಣ ಎಂದು ಹೇಳಿದರು.
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಕರ್ನಾಟಕಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಜಾತ್ಯತೀತ ಪಕ್ಷವನ್ನು ಒಗ್ಗೂಡಿಸಿ ಕೋಮುವಾದಿಗಳ ಪಕ್ಷವನ್ನು ದೂರವಿಡಬೇಕು. ಆ ಶಕ್ತಿಯೂ ದೇವೇಗೌಡರಲ್ಲಿ ಇದೆ ಎಂದು ಹೇಳಿದರು.
ಪ್ರಗತಿಪರರು ಹಾಗೂ ಚಿಂತಕರು ಎಂದು ಗುರುತಿಸಿಕೊಂಡ ಯಾರೊಬ್ಬರೂ ಕೋಮುವಾದಿ ಪಕ್ಷಗಳ ಜೊತೆ ಕೈಜೋಡಿಸುವುದಿಲ್ಲ. ಆದರೆ, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರನ್ನು ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ಉಪಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಅಲ್ಲದೆ, ಅವರಿಗೆ ಪ್ರಗತಿಪರರನ್ನು ಹಾಗೂ ಚಿಂತಕರನ್ನು ಸೆಳೆಯುವ ಜವಾಬ್ದಾರಿ ನೀಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಮಾತನಾಡಿ, ಬ್ರಿಟಿಷರ ಜೊತೆಗೆ ಹತ್ತಿರವಾಗಿದ್ದವರು ಹಾಗೂ ಸ್ವಾತಂತ್ರ್ಯದ ಬಳಿಕ ಮಹಾತ್ಮ ಗಾಂಧಿಜೀಯನ್ನು ಕೊಂದಂತಹ ಗೋಡ್ಸೆ ಸಂಘಟನೆಯವರೇ ಈಗಲೂ ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಬಿಜೆಪಿ ಕಾಂಗ್ರೆಸ್ ಪಕ್ಷ ಗಾಂಧಿ ವಂಶಸ್ಥರ ಕೈಯಲ್ಲಿದೆ ಎಂದು ಆರೋಪಿಸುತ್ತಿದ್ದರು. ಆದರೆ, ಈಗ ಬಿಜೆಪಿ ಪಕ್ಷ ಆರೆಸ್ಸೆಸ್ ಹಿಡಿತಕ್ಕೆ ಸಿಕ್ಕು ವಂಶಪಾರಂಪರ್ಯ ಆಡಳಿತವನ್ನು ನಡೆಸುತ್ತಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಮಾತನಾಡಿ, ಕರ್ನಾಟಕವನ್ನು ಸ್ವಾಭಿಮಾನ ಕರ್ನಾಟಕವನ್ನಾಗಿ ಮಾಡಬೇಕಾದರೆ ನಾವೆಲ್ಲರೂ ಒಗ್ಗೂಡಿ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರುವ ಅವಶ್ಯಕತೆ ಇದೆ ಎಂದು ಹೇಳಿದರು.
ನರೇಂದ್ರ ಮೋದಿ ಅವರು ಮತಕ್ಕಾಗಿ ಭಾಷಣ ಮಾಡುತ್ತಿದ್ದು, ಕರ್ನಾಟಕದ ಯಾವುದೇ ಸಮಸ್ಯೆಯನ್ನು ಬಗೆ ಹರಿಸುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಕಾವೇರಿ, ಕೃಷ್ಣಾ, ಮಹಾದಾಯಿ ವಿಚಾರವನ್ನು ಮಾತನಾಡಲು ಮೋದಿ ಅವರ ಬಳಿ ಹೋದರೆ ಅವರನ್ನು ಸೌಜನ್ಯಕ್ಕೂ ಮಾತನಾಡಿಸದೆ ವಾಪಸ್ ಕಳುಹಿಸಿದ್ದಾರೆ ಎಂದು ಕಿಡಿಕಾರಿದರು.
ಕಾರ್ಯಕ್ರಮದಲ್ಲಿ ಜೆಡಿಯು ರಾಜ್ಯ ಅಧ್ಯಕ್ಷ ಡಾ.ಎಂ.ಪಿ.ನಾಡಗೌಡ, ಸಿಪಿಐ ಮುಖಂಡ ಸಿದ್ಧನಗೌಡ ಪಾಟೀಲ್, ಆರ್‌ಪಿಐ ರಾಜ್ಯ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಪತ್ರಕರ್ತರಾದ ಅಗ್ನಿಶ್ರೀಧರ್, ಇಂದೂಧರ ಹೊನ್ನಾಪುರ, ಸಿಪಿಎಂ ಮುಖಂಡ ಜಿ.ಎನ್.ನಾಗರಾಜ್, ಸ್ವರಾಜ್ ಇಂಡಿಯಾ ಮುಖಂಡ ದೊಡ್ಡಿಪಾಳ್ಯ ನರಸಿಂಹಮೂರ್ತಿ ಉಪಸ್ಥಿತರಿದ್ದರು.