ಶಸ್ತ್ರ ಚಿಕಿತ್ಸೆ: ಲಿವರ್ ಮೇಲಿನ ಭಾರೀ ಗಾತ್ರದ ಗಡ್ಡೆ ತೆರವು

Update: 2017-05-13 15:13 GMT

ಬೆಂಗಳೂರು, ಮೇ 13: ವಿಶ್ವದಲ್ಲೆ ಇದೇ ಮೊದಲ ಬಾರಿಗೆ ಯಕೃತ್(ಲಿವರ್)ನ ಮೇಲೆ ಬೆಳೆದಿದ್ದ 6.2 ಕೆಜಿ ಭಾರೀ ಗಾತ್ರದ ಗಡ್ಡೆಯನ್ನು ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಗ್ಲೆನೀಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರ ತಂಡ ಹೊರ ತೆಗೆಯುವ ಮೂಲಕ ಯಶಸ್ವಿಯಾಗಿದ್ದಾರೆ.

ಈ ಸಂಬಂಧ ಮಾಹಿತಿ ನೀಡಿದ ವೈದ್ಯ ಮೊಹ್ಮದ್ ರೆಲಾ, ಬೆಂಗಳೂರಿನ 66 ವರ್ಷದ ಚಿದಂಬರ ಮರಾಠೆ 10 ವರ್ಷಗಳ ಹಿಂದೆ ಹೆಪಟೈಟಿಸ್ ‘ಬಿ’ ಇನ್ ಫೆಕ್ಷನ್‌ನಿಂದ ಬಳಲಿ ಆ್ಯಂಟಿ ವೈರಲ್ ಚಿಕಿತ್ಸೆ ಪಡೆಯುತ್ತಿದ್ದರು. 2013ರಲ್ಲಿ ಹೆಪಟೋಸೆಲ್ಯೂಲರ್ ಕಾರ್ಸಿನೋಮಾಡ್ ಪರೀಕ್ಷೆಗೆ ಒಳಪಟ್ಟಾಗ ಅವರ ಲಿವರ್‌ನಲ್ಲಿ ಗಡ್ಡೆ ಇರುವುದು ಗೊತ್ತಾಯಿತು.

ಮರಾಠೆ, ಭಾರೀ ಗಾತ್ರದ ಗಡ್ಡೆಯಿಂದ ಕಿಬ್ಬೊಟ್ಟೆಯ ನೋವಿನಿಂದ ಬಳಲುತ್ತಿದ್ದರು. ಈ ವೇಳೆ ಹಲವು ಆಸ್ಪತ್ರೆಗಳಿಗೆ ಹೋದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಭಾರೀ ಗಾತ್ರದ ಗಡ್ಡೆ ಹೊರತೆಗೆಯುವುದು ಸವಾಲಿನಿಂದ ಕೂಡಿತ್ತು ಮತ್ತು ಅವರು ವೃದ್ಧರಾಗಿದ್ದು ತಾಂತ್ರಿಕವಾಗಿ ಅದನ್ನು ತೆಗೆಯುವುದು ಕಷ್ಟಸಾಧ್ಯವಾಗಿತ್ತು.
 ಶಸ್ತ್ರಚಿಕಿತ್ಸೆ ವೇಳೆ ಮತ್ತು ನಂತರ ಅತಿಯಾದ ರಕ್ತಸ್ರಾವ ಆಗುವುದು ಮತ್ತು ಲಿವರ್ ವೈಫಲ್ಯ ಆಗುವ ಅಪಾಯಗಳಿರುತ್ತವೆ. ಈ ಹಿನ್ನೆಲೆಯಲ್ಲಿ ನಾವು ಶಸ್ತ್ರಚಿಕಿತ್ಸೆಗೂ ಮುನ್ನ ರೋಗಿಯಲ್ಲಿ ಕಾಣಿಸಿಕೊಂಡಿರುವ ರೋಗದ ಗಂಭೀರತೆಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ನಂತರ ಇದರಿಂದ ಎದುರಾಗಬಹುದಾದ ಅಪಾಯಗಳನ್ನು ರೋಗಿ ಮತ್ತು ಅವರ ಕುಟುಂಬ ಸದಸ್ಯರಿಗೆ ಮನವರಿಕೆ ಮಾಡಿ, ಅವರ ಸಮ್ಮತಿಯ ಬಳಿಕ ಶಸ್ತ್ರ ಚಿಕಿತ್ಸೆ ನಡೆಸಿ ಗಡ್ಡೆ ಹೊರತೆಗೆಯಲಾಗಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News