×
Ad

ಎಲೆಕ್ಟ್ರಾನಿಕ್ಸ್ ಶಾಪ್‌ಗಳಲ್ಲಿ ಕಳವು: ಆರೋಪಿಗಳ ಬಂಧನ

Update: 2017-05-13 20:14 IST

ಬೆಂಗಳೂರು, ಮೇ 13: ನಗರದ ಪ್ರತಿಷ್ಠಿತ ಎಲೆಕ್ಟ್ರಾನಿಕ್ಸ್ ಶೋ ರೂಂಗಳಿಗೆ ರಾತ್ರಿ ವೇಳೆಯಲ್ಲಿ ನುಗ್ಗಿ ಅಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ಆರೋಪದ ಮೇಲೆ ಇಲ್ಲಿನ ಜಾಲಹಳ್ಳಿ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ದೊಡ್ಡಬಳ್ಳಾಪುರದ ರಾಜು (23), ಹೊಸಕೋಟೆ ಮೂಲದ ಗಣೇಶ್ (24) ಹಾಗೂ ಹೆಸರಘಟ್ಟದ ರವಿ ಪ್ರಕಾಶ್ ಯಾನೆ ರವಿ (58) ಎಂದು ಗುರುತಿಸಲಾಗಿದೆ.

ಆರೋಪಿಗಳು ಇಲ್ಲಿನ ಗೋಕುಲ ಮುಖ್ಯರಸ್ತೆಯ ಗಿರಿಯಾಸ್ ಶೋ ರೂಂನ ಟೆರೇಸ್ ಮೇಲಿನ ಕಿಟಕಿಯ ಸರಳುಗಳನ್ನು ಮುರಿದು ಒಳ ನುಗ್ಗಿ ಅಲ್ಲಿದ್ದ ನಗದು, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ದೋಚಿದ್ದರು ಎಂದು ದೂರಲಾಗಿತ್ತು.

ಬಂಧಿತ ಆರೋಪಿಗಳಿಂದ 7.62 ಲಕ್ಷ ರೂ. ಮೊತ್ತದ 22 ಮೊಬೈಲ್‌ ಫೋನ್‌ಗಳು, 6 ಎಲ್‌ಇಡಿ ಟಿವಿಗಳು, 12 ಟ್ಯಾಬ್‌ಗಳು, 1ಲ್ಯಾಪ್‌ಟಾಪ್‌, ಐರನ್ ಬಾಕ್ಸ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಮೋಜಿನ ಜೀವನಕ್ಕಾಗಿ ಕಳ್ಳತನ ಕೃತ್ಯ ನಡೆಸುತ್ತಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

ಈ ಸಂಬಂಧ ಜಾಲಹಳ್ಳಿ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News