×
Ad

ಕುಡಿಯಲು ಯೋಗ್ಯವೆಂಬುದು ಖಾತರಿಯಾದ ಬಳಿಕ ‘ಪಾತಾಳ ಗಂಗೆ ಯೋಜನೆ’: ಎಚ್.ಕೆ.ಪಾಟೀಲ್ ಸ್ಪಷ್ಟಣೆ

Update: 2017-05-13 20:48 IST

ಬೆಂಗಳೂರು, ಮೇ 13: ಕುಡಿಯಲು ಯೋಗ್ಯ ನೀರು ಎಂಬುದು ಖಾತರಿ ಆದ ಬಳಿಕವಷ್ಟೇ ‘ಪಾತಾಳ ಗಂಗೆ’ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಬರೆದಿರುವ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸಚಿವರು, ಯಾವುದೇ ನೀರಿನ ಮೂಲ ಇಲ್ಲದಿರುವ ಕಡೆಗಳಲ್ಲಿ 300 ರಿಂದ 800 ಮೀಟರ್‌ವರೆಗೆ ದೊರಕುವ ಜಲ ಮೂಲವನ್ನು ಗುರುತಿಸಿ ಅನುಷ್ಠಾನಗೊಳಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

ಜನ ಸಾಮಾನ್ಯರಿಗೆ ಕುಡಿಯುವ ನೀರು ಪೂರೈಕೆ ದೃಷ್ಟಿಯಿಂದ ವಿದೇಶಿ ಪ್ರಯತ್ನಗಳನ್ನು ಒಳಗೊಂಡಂತೆ ಎಲ್ಲ ಮಾಹಿತಿಯನ್ನು ಕ್ರೋಡೀಕರಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವುದು ಎಂದು ಅವರು ಪತ್ರದಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ಭೂಮಿಯ ಒಳಭಾಗದಲ್ಲಿರುವ ನೀರನ್ನು ವಿಶೇಷ ತಂತ್ರಜ್ಞಾನದಿಂದ ಗುರುತಿಸಿ ಮೇಲೆತ್ತುವ ಯೋಜನೆಯನ್ನು ಸರಕಾರ ಹಮ್ಮಿಕೊಳ್ಳಲು ಉದ್ದೇಶಿಸಿದೆ. ಪಾತಾಳ ಗಂಗೆ ಬಗ್ಗೆ ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಅವರಿಗೂ ಲಭ್ಯವಿರುವ ವೈಜ್ಞಾನಿಕ ಹಾಗೂ ತಾಂತ್ರಿಕ ಮಾಹಿತಿಯ ವಿವರಗಳನ್ನು ಒದಗಿಸಿ ತಪ್ಪು ಕಲ್ಪನೆಯನ್ನು ದೂರ ಮಾಡುವ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿನ ಸತತ ಬರ, ಅಂತರ್ಜಲ ತೀವ್ರ ಸ್ವರೂಪದಲ್ಲಿ ಕುಸಿತದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆಯಿಂದ ಆಪತ್ಕಾಲದಲ್ಲಿ ಜನರ ಭವಣೆ ನೀಗಿಸಲು ಸರಕಾರ ಅಂತಿಮವಾಗಿ ಪಾತಾಳ ಗಂಗೆ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಿದೆ ಎಂದು ಪಾಟೀಲ್ ತಿಳಿಸಿದ್ದಾರೆ.

ಕುಡಿಯುವ ನೀರಿನ ಪರಿಸ್ಥಿತಿ ದಿನದಿಂದ-ದಿನಕ್ಕೆ ಬಿಗಡಾಯಿಸುತ್ತಿದ್ದು, ಮಳೆಯೇ ಬಾರದಿದ್ದಾಗ ಜಲ ಮರುಪೂರಣ ಸಾಧ್ಯವಿಲ್ಲ. ಆದರೂ ನಿರಂತರವಾಗಿ ಅಂತರ್ಜಲ ಹೆಚ್ಚಿಸಲು ಜಲ ಮರುಪೂರಣ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪತ್ರದಲ್ಲಿ ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News