ಸರಕಾರಿ ಶಾಲೆಗಳ ರಕ್ಷಣೆಗೆ ಪೂರ್ವ ಪ್ರಾಥಮಿಕ ಶಿಕ್ಷಣ ಅನಿವಾರ್ಯ: ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್
ಬೆಂಗಳೂರು, ಮೇ 13: ಸರಕಾರಿ ಶಾಲೆಗಳನ್ನು ಉಳಿಸಲು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸುವುದು ಅನಿವಾರ್ಯ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ದಕ್ಷಿಣ ರಾಜ್ಯಗಳ ಶಾಲಾ ಶಿಕ್ಷಣದಲ್ಲಿ ಅಳವಡಿಸಿಕೊಳ್ಳಬೇಕಾದ ಉತ್ತಮ ಮೌಲ್ಯಗಳ ವಿಷಯ ಕುರಿತ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಖಾಸಗಿ ಶಾಲೆಗಳು ಪೂರ್ವ ಪ್ರಾಥಮಿಕ ಶಿಕ್ಷಣ, ನರ್ಸರಿ ಶಿಕ್ಷಣವನ್ನು ಆರಂಭಿಸುವ ಮೂಲಕ ಜನರನ್ನು ಆಕರ್ಷಿಸುತ್ತಿವೆ. ಸರಕಾರಿ ಶಾಲೆಗಳನ್ನು ಉಳಿಸಬೇಕಾದರೆ ಖಾಸಗಿ ಶಾಲೆಗಳ ಈ ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ. ಈ ಕುರಿತು ಎಲ್ಲ ರಾಜ್ಯ ಸರಕಾರಗಳು ಇಚ್ಛಾಶಕ್ತಿ ತೋರಬೇಕು ಎಂದು ತಿಳಿಸಿದರು.
ಸರಕಾರಿ ಪ್ರಾಥಮಿಕ ಶಾಲೆಗಳ ರಕ್ಷಣೆಗೆ ಹೊಸ ಕಾಯ್ದೆ ತರುವ ಕುರಿತು ಹಲವು ರಾಜ್ಯಗಳು ಕೇಂದ್ರ ಸರಕಾರದ ಮೇಲೆ ಒತ್ತಡ ತರಲಾಗುತ್ತಿದೆ. ಈ ಬಗ್ಗೆಯೂ ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ. ಸರ್ವ ಶಿಕ್ಷಣ ಅಭಿಯಾನ ಮತ್ತು ಆರ್‌ಟಿಇನಂತಹ ಐತಿಹಾಸಿಕ ಕಾಯ್ದೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಬಿಎಡ್ ಪ್ರಮಾಣ ಪತ್ರಗಳ ಕಾಳಸಂತೆ ಮಾರಾಟಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಲಾಗಿದೆ. ಈ ಪ್ರಕರಣಗಳು ಮತ್ತೆ ಮರುಕಳಿಸಿದರೆ ತಪ್ಪಿತಸ್ಥ ಕಾಲೇಜುಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ, ಅವುಗಳ ಮಾನ್ಯತೆ ರದ್ದುಪಡಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಶಿಕ್ಷಣವೆಂದರೆ ಉತ್ತಮ ನಾಗರಿಕರನ್ನು ರೂಪಿಸುವ ವೇದಿಕೆ. ಶಿಕ್ಷಕರ ಗುಣಮಟ್ಟವನ್ನು ಸುಧಾರಿಸದಿದ್ದರೆ ಸರಕಾರಿ ಶಾಲೆಗಳಲ್ಲಿ ಗುಣಮಟ್ಟವನ್ನು ಸುಧಾರಣೆ ಕಾಣಲು ಅಸಾಧ್ಯ. ಅನರ್ಹ, ಯೋಗ್ಯರಲ್ಲದ ಹಣದ ಬಲದಿಂದ ಬಂದ ಶಿಕ್ಷಕರಿಂದ ದೇಶವನ್ನು ಮುನ್ನಡೆಸುವಂತ ಸಮರ್ಥ ಜನರನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.
ಇತ್ತೀಚೆಗೆ ಶಿಕ್ಷಣಕ್ಕಾಗಿ ಹಣ ಖರ್ಚು ಮಾಡುವುದೇ ಜನರಿಗೆ ದೊಡ್ಡ ಹೊರೆಯಾಗುತ್ತದೆ. ಆದ್ದರಿಂದ ಸರಕಾರಿ, ಕೇಂದ್ರೀಯ ಮತ್ತು ನವೋದಯ ಶಾಲೆಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ಹೆಚ್ಚು ಮಕ್ಕಳನ್ನು ಸರಕಾರಿ ಶಾಲೆಗಳತ್ತ ಸೆಳೆಯಲು ಅಗತ್ಯ ಕ್ರಮಗಳನ್ನು ರೂಪಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರ ಗುಣಮಟ್ಟವನ್ನು ಸುಧಾರಿಸಲು ರೂಪಿಸಿರುವ ರಾಷ್ಟ್ರೀಯ ಶಿಕ್ಷಕರ ವೇದಿಕೆಯನ್ನು ಉದ್ಘಾಟಿಸಿದರು. ಈ ವೇಳೆ ಶಿಕ್ಷಣ ಸಚಿವ ತನ್ವೀರ್ ಸೇಠ್‌ನ ಶಿಕ್ಷಣ ಇಲಾಖೆಯ ಆಯುಕ್ತ ಅಜಯ್ ಸೇಠ್ ಸೇರಿದಂತೆ ಇತರರು ಉಪಸ್ಥಿತರಿದ್ದರು.