×
Ad

ಕಾಂಗ್ರೆಸ್ ನಾಯಕತ್ವದಲ್ಲಿ ಮುಂದಿನ ಚುನಾವಣೆ: ಮಲ್ಲಿಕಾರ್ಜುನ ಖರ್ಗೆ

Update: 2017-05-14 18:46 IST

ಬೆಂಗಳೂರು, ಮೇ 14: ಮುಂಬರುವ 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕತ್ವದಲ್ಲೆ ಎದುರಿಸಲಾಗುವುದು. ಮುಖ್ಯಮಂತ್ರಿ ಯಾರು ಆಗಬೇಕೆಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಯಾವುದೆ ಗೊಂದಲ, ಗದ್ದಲ ಇಲ್ಲ. ಅಧ್ಯಕ್ಷರು ಯಾರಾಗಬೇಕೆಂಬುದನ್ನು ಪಕ್ಷದ ವರಿಷ್ಠರು ಸೂಕ್ತ ಸಂದರ್ಭದಲ್ಲಿ ನಿರ್ಧರಿಸಲಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ನಾನು ಅರ್ಜಿಯನ್ನೂ ಹಾಕಿಲ್ಲ. ಅಧ್ಯಕ್ಷ ಸ್ಥಾನವನ್ನು ತನಗೆ ನೀಡಿ ಎಂದೂ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಸೇರಿದಂತೆ ವರಿಷ್ಠರನ್ನು ಕೇಳಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಕೇಳಿಲ್ಲ. ಅದರ ಉಸಾಬರಿಗೆ ನಾನು ಹೋಗಿಲ್ಲ ಎಂದು ವಿವರಣೆ ನೀಡಿದರು.

ಬಿಜೆಪಿಯಲ್ಲಿಯೇ ಹೇಳೋರು ಮೋದಿ ಒಬ್ಬರೆ, ಕೇಳಲಿಕ್ಕೆ ಹಲವು ಮಂದಿ ಇದ್ದಾರೆ. ಆದರೆ, ನಮ್ಮ ಪಕ್ಷದ ಹೈಕಮಾಂಡ್ ಇದೆ. ಹೈಕಮಾಂಡೆ ಎಲ್ಲವನ್ನೂ ತೀರ್ಮಾನ ಮಾಡುತ್ತದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷರ ಹುದ್ದೆ, ಮುಖ್ಯಮಂತ್ರಿ ಅಭ್ಯರ್ಥಿ ಎಲ್ಲದರಲ್ಲೂ ವರಿಷ್ಠರು ಅಂತಿಮವಾಗಿ ನಿರ್ಧರಿಸಲಿದ್ದಾರೆ ಎಂದರು.
ದೇಶದಲ್ಲಿ ಅಶಾಂತಿ: ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಅಶಾಂತಿಯ ವಾತಾವರಣ ಸೃಷ್ಠಿಯಾಗಿದೆ. ಗಡಿಯಲ್ಲಿನ ಸೈನಿಕರ ಮೇಲಿನ ದಾಳಿ ಹಿನ್ನೆಲೆಯಲ್ಲಿ ಸೈನಿಕರ ನೈತಿಕ ಶಕ್ತಿ ಕುಗ್ಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ ದೇಶದಲ್ಲಿ ಮಾತ್ರ ಇಂಧನ ಬೆಲೆ ಇಳಿದಿಲ್ಲ. ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದ ಅವರು, ಲೋಕಪಾಲ ಮಸೂದೆ ಅಂಗೀಕಾರವಾಗಿದ್ದರೂ ಲೋಕಪಾಲ ನೇಮಕವಾಗಿಲ್ಲ ಎಂದು ಆರೋಪಿಸಿದರು.

ಪ್ರಧಾನಿ ಮೋದಿಯವರ ಸಾಧನೆ ಎಂದರೆ ಕೇವಲ ಭಾಷಣ ಮಾಡುವುದು. ಮಂತ್ರಿಗಳಿಗೆ ಸ್ವತಂತ್ರ ಇಲ್ಲ. ಎಲ್ಲವೂ ಮೋದಿ ನಿಯಂತ್ರಣದಲ್ಲೆ ನಡೆಯುತ್ತಿವೆ ಎಂದು ಅವರು, ದೇಶದ ಜನರ ಸಮಸ್ಯೆ ಸಮಸ್ಯೆಗಳಿಗೆ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News