×
Ad

ಮಡಿ ಮೈಲಿಗೆ ಇರುವ ಧರ್ಮ ತ್ಯಜಿಸಿ: ಮೂಡ್ನಾಕೂಡು ಕರೆ

Update: 2017-05-14 18:50 IST

ಬೆಂಗಳೂರು, ಮೇ 14: ಅಸ್ಪಶ್ಯತೆ ಎನ್ನುವುದು ಹಿಂದೂಧರ್ಮದ ಸಮಸ್ಯೆಯೆ ಹೊರತು ಅದು ದಲಿತರದಲ್ಲ. ಮಡಿ-ಮೈಲಿಗೆ-ಮೇಲು, ಕೀಳಿರುವ ಧರ್ಮವನ್ನು ಬಿಟ್ಟು ಬೌದ್ಧಧಮ್ಮದ ಕಡೆ ದಲಿತರು ಸಾಗಬೇಕೆಂದು ಹಿರಿಯ ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಕರೆ ನೀಡಿದ್ದಾರೆ.

   ರವಿವಾರ ನಗರದ ಪುರಭವನದಲ್ಲಿ ಕರ್ನಾಟಕ ಬೌದ್ಧ ಸಮಾಜ ಬುದ್ಧ ಪೂರ್ಣಿಮೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಿದ್ದ ಬುದ್ಧ ಬೆಳದಿಂಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 ದೇಶದಲ್ಲಿ ದಲಿತರನ್ನು ಕುಷ್ಠರೋಗದವರಿಗಿಂತ ಕಡೆಯಾಗಿ ಅಸಹ್ಯವಾಗಿ ಕಾಣುತ್ತಿದ್ದಾರೆ.ಸ್ವಾತಂತ್ರ ಬಂದು 69 ವರ್ಷಗಳೇ ಕಳೆದರೂ ಸಮಾಜ ದಲಿತರನ್ನು ‘ಏಡಿ ’ದೃಷ್ಠಿಯಿಂದ ಕಾಣುವುದನ್ನು ಬಿಟ್ಟಿಲ್ಲ. ಅಸ್ಪಶ್ಯತೆ ಹಿಂದೂಗಳ ಸಮಸ್ಯೆಯೇ ಹೊರತು ದಲಿತರದಲ್ಲ. ಮಡಿ ಮೈಲಿಗೆ ಇರುವ ಹಿಂದೂ ಧರ್ಮದಿಂದ ಹೊರ ಬಂದು ಸ್ವಾಭಿಮಾನದ ಜೀವನ ಸಾಗಿಸಲು ಬುದ್ಧ ಧರ್ಮವನ್ನು ಸ್ವೀಕರಿಸಬೇಕು ಎಂದು ಹೇಳಿದರು.

  ತಮಗೆ ತಾವೇ ಹಾಕಿಕೊಂಡಿರುವ ಬೇಲಿಯಿಂದ ದಲಿತರು ನಾಶ ಆಗುತ್ತಿದ್ದಾರೆ. ಹಿಂದೂವಾಗಿ ಸಾಯಲಾರೆ ಎಂಬ ಅಂಬೇಡ್ಕರ್‌ಮಾತು ಪ್ರತಿಯೊಬ್ಬ ದಲಿತರಲ್ಲಿ ರಕ್ತಗತವಾಗಬೇಕು.ದಲಿತರು ಸಂವೇದನಶೀಲವಂತರಾಗಿ ಬುದ್ಧನ ಮಾರ್ಗದಲ್ಲಿ ಸಾಗಿದಾಗ ಜಾತಿಯತೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಹೇಳಿದರು.

ಆಳುವ ವರ್ಗದಿಂದಲ್ಲೆ ಪ್ರಜಾಪ್ರಭುತ್ವವನ್ನು ಮುಗಿಸುವ ಪ್ರಯತ್ನ ನಡೆಯುತ್ತಿದೆ. ಕೇವಲ ತೋರಿಕೆಗೆ ಮಾತ್ರ ಪ್ರಜಾಪ್ರಭುತ್ವವನ್ನು ಆಚರಣೆ ಮಾಡುತ್ತಿದ್ದಾರೆ. ನಾವು ದಿನಗಳು ಕಳೆದಂತೆ ವೈರುದ್ಯ ಸಮಾಜವನ್ನು ಪ್ರವೇಶಿಸುತ್ತಿದ್ದೇವೆ. ಸಾಮರಸ್ಯ ಸಮಾಜ ನಿರ್ಮಾಣವಾಗುವವರೆಗೆ ದೇಶದಲ್ಲಿ ಶೋಷಿತರು ಮೇಲೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದರು.

  ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ ಮಾತನಾಡಿ, ಜಾತಿ ಎನ್ನುವುದು ಕ್ಷಯ ಮತ್ತು ಏಡ್ಸ್ ಇದ್ದ ಹಾಗೆ. ಈ ರೋಗಗಳು ಇಡೀ ದೇಹವನ್ನು ನಾಶ ಮಾಡುವ ಹಾಗೆ ಜಾತಿಯತೆ ಇಡೀ ದೇಶವನ್ನು ಸಂಪೂರ್ಣವವಾಗಿ ನಾಶ ಮಾಡುತ್ತದೆ ಎಂದು ಹೇಳಿದರು.

 ಜಾತಿಯತೆ ಮತ್ತು ಅಸ್ಪಶ್ಯತೆ ಬೇರೆ. ಮಹಾತ್ಮ ಗಾಂಧೀಜಿ ಎಡವಿದ್ದು ಇಲ್ಲೆ. ಗಾಂಧೀಜಿ ಅಸ್ಪಶ್ಯತೆ ವಿರುದ್ಧ ಹೋರಾಟ ಮಾಡಿದ್ದರೇ ಹೊತರು ಜಾತಿಯತೆ ವಿರುದ್ಧವಲ್ಲ. ಸಮಾಜದಲ್ಲಿ ಅಸ್ಪಶ್ಯತೆಯನ್ನು ಕಡಿದು ಹಾಕುವ ಚಿಂತನೆಯಷ್ಟೇ ಅವರಲ್ಲಿ ಇತ್ತು. ಆದರೆ ಎಲ್ಲಿಯೂ ಜಾತಿಯತೆ ತೊಲಗಬೇಕು ಎಂದು ವಾದಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

 ಹಿಂದೂ ಧರ್ಮದಲ್ಲಿ ದಲಿತರಿಗೆ ಮಾರ್ಯಾದೆ, ಪ್ರೀತಿ,ಸ್ನೇಹ ಸಿಗುವುದಿಲ್ಲ. ವೈದಿಕ ಧರ್ಮ ದಲಿತರ ನೆಲೆಯಲ್ಲ.ನಮ್ಮದು ಮೂಲ ಮನೆ, ತವರು ಮನೆ ಬೌದ್ಧ ಧರ್ಮ. ಮೂಲ ಮನೆಯತ್ತ ಸಾಗಿದಾಗ ಮಾತ್ರ ಜಾತಿ ಪದ್ದತಿಯಿಂದ ಬಿಡುಗಡೆ ಹೊಂದಲು ಸಾಧ್ಯ ಎಂದು ತಿಳಿಸಿದರು.
 ಕಾರ್ಯಕ್ರಮದಲ್ಲಿ ಬಿಎಸ್‌ಪಿ ಮುಖಂಡ ಮಾರಸಂದ್ರ ಮುನಿಯಪ್ಪ, ಚಲನಚಿತ್ರ ನಿರ್ದೇಶಕ ಎಸ್.ಮಹೇಂದರ್, ಸಮತಾ ಸೈನಿಕ ದಳದ ಅಧ್ಯಕ್ಷ ವೆಂಕಟಸ್ವಾಮಿ, ಪತ್ರಕರ್ತ ಲಕ್ಷ್ಮಣ್ ಹೂಗಾರ್, ಸಮಾಜ ಸೇವಕ ಸಾಕೆ ಶಾಮು ಬೋಧ್, ಬೌದ್ಧ ಭಿಕ್ಕುಗಳಾದ ವಿನಯ ರಖ್ಖತ ಭಂತೇಜಿ,ಮನೋರಖ್ಖಿತ ಭಂತೇಜಿ ಸೇರಿದಂತೆ ಇತರರು ಇದ್ದರು.

ವೈದಿಕ ಧರ್ಮದ ಹುನ್ನಾರ
‘ಅಂಧಕಾರದಿಂದ ಜಗತ್ತಿನ ಕಣ್ಣನ್ನು ತೆರೆಸಿದ ಗುರುಗಳಾದ ಬುದ್ಧ ಮತ್ತು ಬಸವಣ್ಣನವರನ್ನು ವೈದಿಕ ಧರ್ಮದ ಹುನ್ನಾರದಿಂದ ವಿಷ್ಣುವಿನ ಅವತಾರ ಎಂದು ಬಿಂಬಿಸುವ ಮೂಲಕ ‘ಭಗವಾನೀಕರಣ’ ಮಾಡಲಾಗುತ್ತಿದೆ’
-ಪ್ರೊ.ಚಂದ್ರಶೇಖರ್ ಪಾಟೀಲ ಹಿರಿಯ ಸಾಹಿತಿ

ಬ್ರಾಹ್ಮಣರಗಿಂತ ಬೌದ್ಧರು ಹೆಚ್ಚು ಗೌರವಸ್ಥರು

 ‘ಮಾನವೀಯತೆ, ಸೋದರತೆಯಲ್ಲಿ ಬ್ರಾಹ್ಮಣರಿಗಿಂದ ಬೌದ್ಧರು ಒಂದು ಪಾಲು ಹೆಚ್ಚು. ಅಲ್ಲದೆ ಅವರಿಗಿಂತ ಬೌದ್ಧರು ಹೆಚ್ಚು ಗೌರವಸ್ಥರು.ದಲಿತರು ಬೌದ್ಧ ಧರ್ಮವನ್ನು ಪಾಲಿಸುವ ಮೂಲಕ ಗೌರವದಿಂದ ಬಾಳಬೇಕು’

-ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಹಿರಿಯ ಸಾಹಿತಿ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News