ಮಾತ್ರೆ ಸೇವಿಸಿದ ಮಹಿಳೆ ಮೃತ್ಯು
Update: 2017-05-14 19:57 IST
ಬೆಂಗಳೂರು, ಮೇ 14: ಮಾತ್ರೆ ಸೇವಿಸಿದ ಮಹಿಳೆಯೋರ್ವರು ಮೃತಪಟ್ಟಿರುವ ಘಟನೆ ಇಲ್ಲಿನ ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಮಲನಗರದ 11ನೆ ಮುಖ್ಯರಸ್ತೆಯ ಮಂಜುಳಾ (37) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ.
ಕೆ.ಆರ್.ಪೇಟೆಯಲ್ಲಿರುವ ತನ್ನ ತವರು ಮನೆಗೆ ಹೋಗಿದ್ದ ಮಂಜುಳಾ ಶನಿವಾರ ಮನೆಗೆ ವಾಪಸ್ಸಾಗಿದ್ದರು. ಆಟೊ ಚಾಲಕರಾಗಿರುವ ಪತಿ ಸುರೇಶ್ ಮಧ್ಯಾಹ್ನ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದು, ಈ ವೇಳೆ ಮಂಜುಳಾ ಮಾತ್ರೆ ಸೇವಿಸಿ ವಾಂತಿ ಮಾಡಿ ಅಸ್ವಸ್ಥರಾಗಿದ್ದರು. ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಇಲ್ಲಿನ ಪೊಲೀಸರಿಗೆ ನೀಡಿದ ದೂರಿನಲ್ಲಿ ಸುರೇಶ್ ತಿಳಿಸಿದ್ದಾರೆ.