×
Ad

​ 'ಭಾಸ್ಕರ ಪ್ರಶಸ್ತಿ'ಗೆ ಪ್ರೊ.ಯು.ಆರ್.ರಾವ್ ಆಯ್ಕೆ: ಅರುಣ ಶಹಾಪೂರ

Update: 2017-05-15 21:10 IST

ಬೆಂಗಳೂರು, ಮೇ 15: ಗಣಿತ ತಜ್ಞ, ಖಗೋಳ ತಜ್ಞ ಭಾಸ್ಕರಾಚಾರ್ಯರ ಹೆಸರಿನಲ್ಲಿ ಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನ ಪ್ರತಿ ವರ್ಷ ಕೊಡ ಮಾಡುವ ‘ಭಾಸ್ಕರ ಪ್ರಶಸ್ತಿ’ಯನ್ನು ಈ ಬಾರಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್.ರಾವ್ ಅವರಿಗೆ ಪ್ರದಾನ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಹೇಳಿದ್ದಾರೆ.

ಸೋಮವಾರ ಶಾಸಕರ ಭವನದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ ಭಾಸ್ಕರ ಪ್ರಶಸ್ತಿಯನ್ನು ಭಾರತ ರತ್ನ ಪ್ರೊ.ಸಿ.ಎನ್.ಆರ್.ರಾವ್ ಅವರಿಗೆ ಪ್ರದಾನ ಮಾಡಲಾಗಿತ್ತು. ಈ ಬಾರಿ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್.ರಾವ್ ಅವರನ್ನು ಭಾಸ್ಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
   

ಸಿಂದಗಿಯ ಸಾರಂಗಮಠದ ಚೆನ್ನವೀರ ಮಹಾಸ್ವಾಮೀಜಿ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ (1994) ಈ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದ್ದು, ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದಾಗಿ ಪ್ರತಿಷ್ಠಾನವು ರಾಷ್ಟ್ರಮಟ್ಟದ ಒಬ್ಬ ಮಹಾನ್ ವಿಜ್ಞಾನಿಗೆ ಭಾಸ್ಕರ ಪ್ರಶಸ್ತಿಯನ್ನು ಕಳೆದ ವರ್ಷದಿಂದ  ಕೊಡಲು ನಿರ್ಧರಿಸಿದೆ. ಪ್ರಶಸ್ತಿಯು ಒಂದು ಲಕ್ಷ ರೂ. ನಗದು, ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದು ತಿಳಿಸಿದರು.
     
  ಭಾಸ್ಕರಾಚಾರ್ಯರು ತಮ್ಮ 36ನೆ ವಯಸ್ಸಿನಲ್ಲಿಯೇ ಸಿದ್ಧಾಂತ ಶಿರೋಮಣಿ ಎಂಬ ಮಹತ್ವದ ಗ್ರಂಥವನ್ನು ರಚಿಸಿದರು. ಇದರಲ್ಲಿ ಲೀಲಾವತಿ, ಬೀಜಗಣಿತಂ, ಗೋಳಾಧ್ಯಾಯ, ಗ್ರಹಗಣಿತ ಎಂಬ ನಾಲ್ಕು ಭಾಗಗಳಿವೆ ಹಾಗೂ ಕಲನಶಾಸ್ತ್ರದಲ್ಲಿ ಅವಕಲನಾಂಶವು ಗರಿಷ್ಠ ಬಿಂದುವಿನಲ್ಲಿ ಶೂನ್ಯವಾಗಿರುತ್ತದೆ ಎಂಬ ಬಹು ಮುಖ್ಯವಾದ ಫಲಿತಾಂಶವನ್ನು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಕಳೆದ ವರ್ಷ ಸಿಂದಗಿಯ ಸಾರಂಗಿ ಮಠದಲ್ಲೇ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಲಾಗಿತ್ತು. ಈ ವರ್ಷ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು, ಮೇ 16ರ ಸಂಜೆ 6ಕ್ಕೆ ವಿಜಯನಗರದ ಕಾಸಿಯಾ ಸಭಾಂಗಣದಲ್ಲಿ ಈ ಸಮಾರಂಭ ನಡೆಯುತ್ತದೆ ಎಂದು ತಿಳಿಸಿದರು.
 ಈ ಸಮಾರಂಭದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿ, ಸಿಂದಗಿ ಮಠದ ಪ್ರಭುಸಾರಂಗದೇವ ಶಿವಾಚಾರ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
    ಸುದ್ದಿಗೋಷ್ಠಿಯಲ್ಲಿ ಸಿಂದಗಿ ಮಠದ ಪ್ರಭುಸಾರಂಗದೇವ ಶಿವಾಚಾರ್ಯರು, ಕನ್ನೊಳ್ಳಿ ಮಠದ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News