ಭಾರತವನ್ನು ಹಿಂದೂ ರಾಷ್ಟ್ರವೆಂದು ಕರೆಯುವುದು ಸಂವಿಧಾನಬಾಹಿರ: ತೀಸ್ತಾ ಸೆಟಲ್ವಾಡ್

Update: 2017-05-15 16:42 GMT

ಬೆಂಗಳೂರು ಮೇ 15: ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನ ಒಕ್ಕೂಟ ವ್ಯವಸ್ಥೆಯನ್ನು ಭಾರತ ದೇಶ ಎಂದು ಒಪ್ಪಿಕೊಂಡಿದೆ. ಆದರೆ ಸಂಘಪರಿವಾರ ಹಿಂದೂ ರಾಷ್ಟ್ರ ಎಂದು ಜನರಲ್ಲಿ ಕೋಮು ಭಾವನೆಯನ್ನು ಕೆರಳಿಸುತ್ತಿದೆ. ದೇಶವನ್ನು ಹಿಂದೂ ರಾಷ್ಟ್ರವೆಂದು ಕರೆಯುವುದು ಸಂವಿಧಾನ ಬಾಹಿರ ಎಂದು ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಹೇಳಿದ್ದಾರೆ.

ನಗರದ ಕೆಇಬಿ ಎಂಜಿನಿಯರ್ಸ್‌ ಅಸೋಸಿಯೇಷನ್ ಸಭಾಂಗಣದಲ್ಲಿ ದೇಶಾಭಿಮಾನಿ ಬಳಗ ಆಯೋಜಿಸಿದ್ದ ‘ಫೂಟ್ ಸೋಲ್ಜರ್ ಆಫ್ ದಿ ಕಾನ್‌ಸ್ಟಿಟೂಷನ್’ ಪುಸ್ತಕ ಕುರಿತ ಚರ್ಚೆ ಹಾಗೂ ಎ.ಕೆ.ಸುಬ್ಬಯ್ಯ ಅವರ ‘ಆರ್‌ಎಸ್‌ಎಸ್ ಅಂತರಂಗ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಆರೆಸ್ಸೆಸ್ ಖಾತೆಗೆ ವಿವಿಧ ಮೂಲಗಳಿಂದ ಪ್ರತಿ ದಿನ ಹಣದ ಹೊಳೆಯೇ ಹರಿದು ಬರುತ್ತಿದೆ. ಕಾರ್ಪೋರೇಟ್ ಕಂಪೆನಿಗಳು ಆರೆಸ್ಸೆಸ್ ಕಾರ್ಯಕ್ರಮಗಳಿಗೆ ಹಣ ನೀಡುತ್ತಿರುವುದು ಹೊಸದೇನಲ್ಲ. ಸಾಮಾಜಿಕ ಜಾಲತಾಣಗಳನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಹಿಂದೂರಾಷ್ಟ್ರ ನಿರ್ಮಾಣಕ್ಕೆ ಅಗತ್ಯವಾದ ಕಾಮಗಾರಿಗಳು ಸಾಂಗವಾಗಿ ನಡೆಯುತ್ತಿವೆ ಎಂದವರು ಹೇಳಿದರು.

ದೇಶದಲ್ಲಿ ದಲಿತರ ಮೇಲಿನ ಹಲ್ಲೆಯ ಬಗ್ಗೆ ಮಾಧ್ಯಮಗಳು ಮಾತನಾಡುತ್ತಿಲ್ಲ. ತ್ರಿವಳಿ ತಲಾಖ್ ಬಗ್ಗೆ ಇಡೀ ದಿನ ಚರ್ಚೆ ಮಾಡುತ್ತಿದೆ. ಬಿಜೆಪಿ ಅಧಿಕಾರವಿರುವ ರಾಜ್ಯಗಳಲ್ಲಿ ಜನವಿರೋಧಿ ಕಾನೂನುಗಳನ್ನು ಅಸ್ತಿತ್ವಕ್ಕೆ ಬಂದರೂ ಮಾಧ್ಯಮಗಳು ತಟಸ್ಥ ಧೋರಣೆ ತಾಳುತ್ತಿವೆ. ರೈತ ವಿರೋಧಿ, ಜನವಿರೋಧಿ ಪ್ರಧಾನಿ ಮೋದಿಯನ್ನು ಮಾಧ್ಯಮಗಳು ಇಂದು ದೈವಸ್ಥಾನದಲ್ಲಿ ಕೂರಿಸುತ್ತಿರುವ ಮರ್ಮವನ್ನು ಜನರಿಗೆ ಮನವರಿಕೆ ಮಾಡಬೇಕಿದೆ ಎಂದು ತಿಳಿಸಿದರು.

ಇಡೀ ದೇಶ ಸಂಘಪರಿವಾರದ ಕೈವಶವಾಗುವ ಮುನ್ನ ರಾಜಕೀಯ ಶಕ್ತಿ ಮತ್ತು ಸಾಮಾಜಿಕ ಕಳಕಳಿ ಇರುವ ಸಂಘಟನೆಗಳು ಒಂದುಗೂಡಿ ಕ್ರಾಂತಿಕಾರಿ ಚಳವಳಿ ರೂಪಿಸಬೇಕಿದೆ ಎಂದವರು ಹೇಳಿದ್ದಾರೆ.

ಮೋದಿಯನ್ನು ಜೈಲಿಗಟ್ಟಬೇಕು
ಭ್ರಷ್ಟಾಚಾರ ವೈದಿಕ ಸಂಸ್ಕೃತಿಯ ಕೊಡುಗೆ. ಭ್ರಷ್ಟಾಚಾರದ ಮೂಲ ದೇವಾಲಯಗಳು. ದೇಶದಲ್ಲಿ ಅತ್ಯಂತ ಭ್ರಷ್ಟಾಚಾರಿಯೆಂದರೆ ಪ್ರಧಾನಿ ಮೋದಿಯವರು. ಕೋಮುವಾದದ ವಿರುದ್ಧ ಹೋರಾಡುವ ಶಕ್ತಿಗಳು ಮತ್ತು ದೇಶಾಭಿಮಾನಿಗಳು ಒಂದಾದರೆ ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿ ಮೋದಿಯನ್ನು ಜೈಲಿಗಟ್ಟಬಹುದು ಎಂದು ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ಹೇಳಿದರು.

ಒಂದು ಕಾಲದಲ್ಲಿ ಆರೆಸ್ಸೆಸ್ಸೇ ಸತ್ಯ, ಇದೇ ಜೀವನ, ಇದಕ್ಕಿಂತ ಮಿಗಿಲಾದ ಮತ್ತೊಂದು ಇಲ್ಲ ಎಂದು ನಂಬಿದವನು ನಾನು. ಆದರೆ ಕಾಲ ಕಳೆದಂತೆ ಈ ಸಂಘಟನೆಯ ನೈಜ ಬಣ್ಣ ಗೊತ್ತಾಯಿತು. ನಂತರ ಆರೆಸ್ಸೆಸ್‌ನಿಂದ ಹೊರ ಬಂದು ಆರೆಸ್ಸೆಸ್ ನಿಜವಾದ ಸ್ವರೂಪವನ್ನು ಜನರಿಗೆ ಮನದಟ್ಟು ಮಾಡಲು ಈ ಕೃತಿಯನ್ನು ರಚಿಸಿದೆ ಎಂದು ತಿಳಿಸಿದರು.

ಕೋಮುವಾದವೇ ನಿಜವಾದ ದೇಶದ್ರೋಹಿ. ನಕಲಿ ದೇಶ ಭಕ್ತರೆ ದೇಶದ್ರೋಹಿಗಳು. ಕೋಮುವಾದಿ ಶಕ್ತಿಗಳ ವಿರುದ್ಧ ದೇಶ ಪ್ರೇಮಿಗಳು, ಸಾಮಾಜಿಕ ಸಂಘಟನೆಗಳು ಒಂದಾಗಿ ಹೋರಾಟ ಮಾಡಿ ದೇಶವನ್ನು ರಕ್ಷಿಸಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಮಾತನಾಡಿ, ವಿಶ್ವದಲ್ಲಿ ಫ್ಯಾಶಿಸಂ ಬಹುಕಾಲ ಬಾಳಿದ ಉದಾಹರಣೆಗಳಿಲ್ಲ. ದೇಶದಲ್ಲೂ ಇದನ್ನು ಹೆಚ್ಚು ಕಾಲ ಉಳಿಯಲು ಬಿಡಬಾರದು. ಕೋಮುವಾದದ ವಿರುದ್ಧ ಹೋರಾಟ ಮಾಡಲು ತೀಸ್ತಾ ಅವರನ್ನು ದೇಶಕ್ಕೆ ಮಾದರಿಯಾಗಿ ಸ್ವೀಕರಿಸಬೇಕು. ಕೋಮುವಾದದ ವಿರುದ್ಧ ಹುಟ್ಟು ಹಾಕುವ ಕ್ರಾಂತಿಗೆ ತೀಸ್ತಾ ಮುಂದಿನ ನಾಯಕಿಯಾಗುವ ಎಲ್ಲ ಗುಣಗಳಿವೆ ಎಂದರು.

ಕಾರ್ಯಕ್ರಮದಲ್ಲಿ ಎ.ಕೆ.ಸುಬ್ಬಯ್ಯ ಅವರ ಆರ್‌ಎಸ್‌ಎಸ್ ಅಂತರಂಗ ಕೃತಿಯನ್ನು ಸಾಹಿತಿ ಗಿರೀಶ್ ಕಾರ್ನಾಡ್ ಲೋಕಾರ್ಪಣೆಗೊಳಿಸಿದರು. ಪುಸ್ತಕದ ಕುರಿತು ಲೇಖಲಿ ಡಾ.ವಸುಂಧರಾ ಭೂಪತಿ ಮಾತನಾಡಿದರು. ಈ ವೇಳೆ ಚಿಂತಕ ಪ್ರೊ.ಜಿ.ಕೆ.ಗೋವಿಂದ್‌ರಾವ್, ನಿವೃತ್ತ ಐಪಿಎಸ್ ಅಧಿಕಾರಿ ಶ್ರೀಕುಮಾರ್ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News