×
Ad

'ಗರುಡನಗಿರಿ ಅಗಲಿಕೆಯಿಂದ ಕನ್ನಡ ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟ'

Update: 2017-05-15 23:18 IST

ಬೆಂಗಳೂರು, ಮೇ 15: ಕನ್ನಡ ಪತ್ರಿಕೋದ್ಯಮಕ್ಕೆ ಆದರ್ಶರಾಗಿದ್ದ ಹಿರಿಯ ಪತ್ರಕರ್ತ ಗರುಡನಗಿರಿ ನಾಗರಾಜ ಅಗಲಿಕೆ ಕನ್ನಡ ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹಿರಿಯ ಪತ್ರಕರ್ತ ಟಿ.ಜಿ.ಅಶ್ವತ್ಥ ನಾರಾಯಣ ಬೇಸರ ವ್ಯಕ್ತಪಡಿಸಿದ್ದಾರೆ.

 ಸೋಮವಾರ ನಗರದಲ್ಲಿ ಕರ್ನಾಟಕ ಕಾರ್ಯನಿತರ ಪತ್ರಕರ್ತರ ಸಂಘ ಆಯೋಜಿಸಿದ್ದ ಗರುಡನಗಿರಿ ನಾಗರಾಜ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
 

ಐದು ದಶಕಗಳ ಕನ್ನಡ ಪತ್ರಿಕ ರಂಗಕ್ಕೆ ಸೇವೆ ಸಲ್ಲಿಸಿದ ಗರುಡನಗಿರಿ ನಾಗರಾಜ ಎಲ್ಲ ಕಾಲದ ಪತ್ರಕರ್ತರಿಗೆ ಆದರ್ಶಪ್ರಾಯರು. ಪತ್ರಿಕೆಗಳಲ್ಲಿ ಜನಪರ, ಸಮಾಜಪರವಾದ ವರದಿಗಳು ಸುದ್ದಿಯಾಗಲು ಗರುಡನಗಿರಿ ನಾಗರಾಜ ಅವರೇ ಕಾರಣ. ಹೋರಾಟಗಾರ ವಿನೋಬಾ ಬಾವೆ ಅವರ ಜೊತೆಗೂಡಿ ನಡೆಸಿದ ಭೂದಾನ ಚಳವಳಿಯ ವೇಳೆ ಕಂಡ ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳನ್ನು ಅದ್ಭುತವಾಗಿ ವರದಿ ಮಾಡಿ ಸರಕಾರದ ಗಮನ ಸೆಳೆದಿದ್ದರು ಎಂದು ತಿಳಿಸಿದರು.

ಹಲವು ರಾಜಕಾರಣಿ ಮತ್ತು ಸಾಹಿತಿಗಳೊಂದಿಗೆ ತೀರ ಹತ್ತಿರದ ಒಡನಾಟವನ್ನು ಇಟ್ಟುಕೊಂಡಿದ್ದರು. ರಾಜಕಾರಣಿಗಳಲ್ಲಿ ದೇವರಾಜ ಅರಸು ಅವರಿಗೆ ತುಂಬಾ ಆತ್ಮೀಯರಾಗಿದ್ದರು.ಆದರೆ ಈ ಒಡನಾಟಗಳನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡಿರಲಿಲ್ಲ. ಇವರು ವರದಿಗಳನ್ನು ತೀಕ್ಷ್ಣವಾಗಿ, ವ್ಯಂಗ್ಯಭರಿತವಾಗಿ ಬರೆಯುವ ಕೌಶಲ್ಯವನ್ನು ಕರಗತ ಮಾಡಿಕೊಂಡಿದ್ದರು ಎಂದರು.

ಹಿರಿಯ ಪತ್ರಕರ್ತ ಮನೋಹರ್ ಯಡವಟ್ಟಿ, ಪತ್ರಕರ್ತ ಸತೀಶ್ ಮಾತನಾಡಿರು.
  ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಹುಣಸವಾಡಿ ನಟರಾಜನ್, ನಾರಾಯಣ ಮೂರ್ತಿ, ದೂರದರ್ಶನದ ನಿವೃತ್ತ ನಿರ್ದೇಶಕ ಮೋಹನ್‌ರಾಂ, ಸಂಘದ ರಾಜ್ಯಾಧ್ಯಕ್ಷ ಎನ್.ರಾಜ, ಜಿಲ್ಲಾಧ್ಯಕ್ಷ ಬೈರಸಂದ್ರ ಗಂಗರಾಜ್ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News