ಶಿಕ್ಷಣ ಸಚಿವರಿಗೆ ಒಂದು ಬಹಿರಂಗ ಪತ್ರ

Update: 2017-05-16 05:39 GMT

ಸನ್ಮಾನ್ಯ ಸಚಿವರೆ,
ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳೊಂದಿಗೆ ಸ್ಪರ್ಧಿಸುವಲ್ಲಿ ಸರಕಾರಿ ಶಾಲೆಗಳು ಸಂಪೂರ್ಣ ಎಡವುತ್ತಿವೆ. ಇದರ ಪರಿಣಾಮ 'ಮಾತೃಭಾಷೆಯಲ್ಲಿ ಶಿಕ್ಷಣ' ಎಂಬ ಪರಿಕಲ್ಪನೆಗೇ ಹೊಡೆತ ಬಿದ್ದಿದೆ. ಇದೊಂದು ಸಮಸ್ಯೆಯೇ ಸರಿ.  ಶಿಕ್ಷಣ ಸಚಿವರಾಗಿ ತಾವೇನು ಪರಿಹಾರ ಕಂಡುಕೊಂಡಿದ್ದೀರಿ?

ನಿಮ್ಮ ಮುಂದೆ ಕೆಲವು ಆಯ್ಕೆಗಳಿವೆ
1. ಸರಕಾರಿ ಶಾಲೆಗಳನ್ನೆಲ್ಲಾ ಆಂಗ್ಲ ಮಾಧ್ಯಮಗಳನ್ನಾಗಿ ಮಾಡಿಬಿಡುವುದು.

2. ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡದಿರುವುದು

3. ಕನ್ನಡ ಮಾಧ್ಯಮ ಶಾಲೆಗಳಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುವುದು. ಯಶಸ್ವಿಯಾಗಿ ಕನ್ನಡ ಮಾಧ್ಯಮವನ್ನು ನಡೆಸುತ್ತಿರುವ ಖಾಸಗಿ ಸಂಸ್ಥೆಗಳನ್ನು ಪ್ರೋತ್ಸಾಹಿಸುವುದು. 

ಈ ಮೇಲಿನ  ಆಯ್ಕೆಗಳಲ್ಲಿ ಮೂರನೆಯದು ಹೆಚ್ಚು ಪ್ರಾಯೋಗಿಕ ಮತ್ತು ಪರಿಣಾಮಕಾರಿ. 
ಈ ವರ್ಷ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ನೂರು ಶೇಕಡ ಫಲಿತಾಂಶ ದಾಖಲಿಸಿರುವ ಖಾಸಗಿ ಅನುದಾನರಹಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನದ ಆಫರ್ ಘೋಷಣೆ ಮಾಡಿ. ಕನ್ನಡ ಮಾಧ್ಯಮ ಶಿಕ್ಷಣದತ್ತ ಪೋಷಕರನ್ನು ಸೆಳೆಯುವಲ್ಲಿ ಇಲಾಖೆ ಈ ವರೆಗೆ ಸಫಲವಾಗಿಲ್ಲ. ಆದುದರಿಂದಲೇ ಖಾಸಗಿ ಮ್ಯಾನೇಜ್‌ಮೆಂಟ್ ಗಳನ್ನು ಕನ್ನಡ ಮಾಧ್ಯಮದತ್ತ ಸೆಳೆಯಬೇಕು. ಅದರ ಆರಂಭವಾಗಿ ಈ ವರ್ಷ ಎಸೆಸೆಲ್ಸಿಯಲ್ಲಿ ನೂರು ಶೇಕಡ ಫಲಿತಾಂಶ ದಾಖಲಿಸಿರುವ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಘೋಷಣೆ ಮಾಡಿ. 

ಕೆಲವು ಸಂಸ್ಥೆಗಳಲ್ಲಿ ನಿಗದಿತ ಅರ್ಹತೆ ಇಲ್ಲದ ಶಿಕ್ಷಕರನ್ನು ನೇಮಿಸಿ ಕಡಿಮೆ ವೇತನ ನೀಡುತ್ತಿರುವುದಾಗಿ ಇತ್ತೀಚೆಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಇದಕ್ಕೆ ಪರಿಹಾರ ಎಂಬಂತೆ ಸೇವಾ ಪುಸ್ತಕವನ್ನು ಕಟ್ಟನಿಟ್ಟಾಗಿ ನಿರ್ವಹಿಸುವಂತೆ ಇಲಾಖೆಯು ಶಾಲೆಗಳಿಗೆ ಸೂಚಿಸಿದೆ. ವೇತನವನ್ನು ಸಂಸ್ಥೆಯ ಖಾತೆಯಿಂದ ನೇರವಾಗಿ ಶಿಕ್ಷಕರ ಖಾತೆಗೆ ಜಮೆಯಾಗುವಂತೆಯೂ ಮಾಡಬೇಕಿತ್ತು. ಆದರೂ ಖಾಸಗಿ ಸಂಸ್ಥೆಗಳು ಇದನ್ನು ಸಮರ್ಪಕವಾಗಿ ಪಾಲಿಸುತ್ತಿದೆ ಎನ್ನುವಂತಿಲ್ಲ. 

ಇದನ್ನು ಈ ಕೆಳಗಿನಂತೆ ಪರಿಹರಿಸಬಹುದು. 
1. ಖಾಸಗಿ ಅನುದಾನರಹಿತ ಸಂಸ್ಥೆಗಳ ನಿರ್ವಹಣೆಯ ನಿಗಾವಹಿಸಲೆಂದೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಟ್ಟದಲ್ಲಿ ಪ್ರತ್ಯೇಕ ಅಧಿಕಾರಿಯ‌ನ್ನು ನೇಮಿಸುವುದು

2. ಆಯಾ ಕ್ಷೇತ್ರ ವ್ಯಾಪ್ತಿಯ ಖಾಸಗಿ ಶಾಲೆಗಳ ಶಿಕ್ಷಕರ ಬ್ಯಾಂಕ್ ಖಾತೆ ಸಹಿತ ಸಂಪೂರ್ಣ ದತ್ತಾಂಶಗಳನ್ನು ಈ ಅಧಿಕಾರಿ ಪರಿಶೀಲಿಸುವುದು. ಮಾಸಿಕ ಒಟ್ಟು ವೇತನ ಮೊತ್ತವನ್ನು ಇಲಾಖೆಯ ನಿರ್ಧರಿಸಿ ಸಂಸ್ಥೆಗೆ ಸೂಚಿಸುವುದು.

3. ಪ್ರತಿ ತಿಂಗಳು ಆಯಾ ಖಾಸಗಿ ಸಂಸ್ಥೆಯವರು ತಮ್ಮ ಎಲ್ಲ ಶಿಕ್ಷಕರ ವೇತನದ ಒಟ್ಟು ಮೊತ್ತವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ  ಪ್ರತ್ಯೇಕ ಬ್ಯಾಂಕ್ ಖಾತೆಗೆ ಜಮೆ ಮಾಡುವುದು.  ಆ ಖಾತೆಯಿಂದ ನೇರವಾಗಿ ಸಂಬಂಧಪಟ್ಟ ಶಿಕ್ಷಕರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವುದು.

4. ಯಾವ ಶಿಕ್ಷಕರಿಗೆ ಎಷ್ಟು ವೇತನ ಎಂಬುದನ್ನು ಇಲಾಖೆ ನಿರ್ಧರಿಸಿ ಶಿಕ್ಷಕರ ಖಾತೆಗೆ ಜಮೆ ಮಾಡುವುದರಿಂದ ಮಾನೇಜ್ಮೆಂಟ್ ಗೆ ಈ ವಿಷಯದಲ್ಲಿ ವಂಚನೆ ಮಾಡಲಾಗದು. 

ಶಿಕ್ಷಣ ಸಚಿವರು, ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಕೊಡುವರೇ..
ವೇತನಕ್ಕೆ ಸಂಬಂಧಿಸಿದ ಈ ವಿಚಾರ ಕಷ್ಟ ಎನಿಸಿದರೂ ಲೇಖನದ ಮೊದಲು ತಿಳಿಸಿದ ಅನುದಾನದ ವಿಚಾರ ಸರಳವಾಗಿಯೇ ಇದೆ. 

Writer - -ಸುಮಾ, ಕಲ್ಲಡ್ಕ

contributor

Editor - -ಸುಮಾ, ಕಲ್ಲಡ್ಕ

contributor

Similar News