×
Ad

ಮಹಿಳೆಯ ಕೊಲೆ ಪ್ರಕರಣ: ಮೂವರ ಬಂಧನ

Update: 2017-05-16 19:37 IST

ಬೆಂಗಳೂರು, ಮೇ 16: ಮನೆಯೊಂದಕ್ಕೆ ನುಗ್ಗಿ ಮಹಿಳೆಯನ್ನು ಕೊಲೆಗೈದು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಪ್ರಕರಣ ಸಂಬಂಧ ಇಲ್ಲಿನ ತಿಲಕ್‌ನಗರ ಠಾಣಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

 ಬಂಧಿತ ಆರೋಪಿಗಳನ್ನು ಗಣೇಶ್ ಯಾನೆ ಚಪ್ಪರ್ ಗಣೇಶ (19), ಆತನ ಸಹಚರರಾದ ಚಿನ್ನರಾಜು (30) ಮತ್ತು ಶಕ್ತಿವೇಲು (31) ಎಂದು ಗುರುತಿಸಿದ್ದಾರೆ.

ಘಟನೆ ವಿವರ: ಮೂಲತಃ ಆಂಧ್ರ ಪ್ರದೇಶದ ನರಸಿಂಹರಾವ್ ಎಂಬುವರು ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಂತರ 2013ರಲ್ಲಿ ಕುಟುಂಬದೊಂದಿಗೆ ಜಯನಗರಕ್ಕೆ ಬಂದು ವಾಸವಿದ್ದರು. ಅಸೌಖ್ಯದಿಂದ ಮೂರು ವರ್ಷಗಳ ಹಿಂದೆ ನರಸಿಂಹರಾವ್ ಮೃತಪಟ್ಟಿದ್ದು, ಅವರ ಪತ್ನಿ ಮಣಿ ಇಬ್ಬರು ಮಕ್ಕಳೊಂದಿಗೆ ಇಲ್ಲಿ ವಾಸವಾಗಿದ್ದರು.

ಎ. 4ರಂದು ರಾತ್ರಿ ಮಣಿ ಅವರ ನಿಗೂಢ ಕೊಲೆಯಾಗಿತ್ತು. ಮಣಿ ಅವರ ತಲೆಗೆ ದುಷ್ಕರ್ಮಿಗಳು ಆಯುಧದಿಂದ ಹೊಡೆದು ಕೊಲೆ ಮಾಡಿ ಮೈಮೇಲಿದ್ದ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು. ಅವರ ಪುತ್ರ ಶ್ರೀನಿವಾಸ್ ಕಿಶೋರ್ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

 ಸ್ಥಳಕ್ಕಾಗಮಿಸಿದ ತಿಲಕ್‌ನಗರ ಪೊಲೀಸರಿಗೆ ಮಹಿಳೆಯ ನಿಗೂಢ ಕೊಲೆ ಪ್ರಕರಣದ ಬಗ್ಗೆ ಯಾವುದೇ ಉಪಯುಕ್ತವಾದ ಸುಳಿವು ದೊರೆತಿರಲಿಲ್ಲ. ಬಹಳ ನಿಗೂಢವಾದ ಮತ್ತು ಕುತೂಹಲಕರವಾದ ಈ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸವಾಲೇ ಆಗಿತ್ತು. ತನಿಖೆಯ ವೇಳೆ ಈ ಮನೆಯ ಆಸುಪಾಸಿನಲ್ಲಿದ್ದ ಗುಮಾನಿ ವ್ಯಕ್ತಿಗಳು, ಭದ್ರತಾ ಸಿಬ್ಬಂದಿಗಳು ತಿಲಕ್‌ನಗರ ವ್ಯಾಪ್ತಿಯ ಸುತ್ತಮುತ್ತಲಿನ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದರೂ ಆರಂಭದಲ್ಲಿ ಯಾವುದೇ ಸುಳಿವು ಸಿಗದ ಕಾರಣ ಮತ್ತೊಮ್ಮೆ ವಿಧಿ-ವಿಜ್ಞಾನ ತಜ್ಞರನ್ನು ಕರೆಸಿ ಮನೆಯ ಬಾಗಿಲಿನ ಕಿಟಕಿಗಳ ಪಕ್ಕ, ಗೋಡೆಗಳ ಮೇಲೆ ಕೈನಿಂದ ಆಗಿದ್ದ ಕಲೆಗಳ ಬಗ್ಗೆ ಪರೀಕ್ಷೆಗೊಳಪಡಿಸಿದಾಗ ಜೀವಾಣುಗಳು, ಶಿಲೀಂಧ್ರಗಳು ಪತ್ತೆಯಾಗಿದ್ದವು.
ಇವು ಸಾಮಾನ್ಯವಾಗಿ ಚಿಂದಿ ಆಯುವವರ ಕೈಯಲ್ಲಿರುವುದಾಗಿ ತಜ್ಞರು ಅಭಿಪ್ರಾಯಪಟ್ಟ ಮೇರೆಗೆ ಈ ವ್ಯಾಪ್ತಿಯ ಹಾಗೂ ಇತರೆ ಠಾಣಾ ವ್ಯಾಪ್ತಿಯಲ್ಲಿನ ಚಿಂದಿ ಆಯುವವರು ಮತ್ತು ಬೀದಿಯಲ್ಲಿ ಮಲಗುವವರನ್ನು ಕರೆತಂದು ವಿಚಾರಣೆಗೊಳಪಡಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ವೇಳೆ ಒಬ್ಬ ಚಿಂದಿ ಆಯುವ ವ್ಯಕ್ತಿಯು ಪಾಳು ಮನೆಯಲ್ಲಿ ಮಲಗಿರುತ್ತಾನೆಂಬ ಮಾಹಿತಿ ಮೇರೆಗೆ ಆರೋಪಿ ಗಣೇಶ್‌ನನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಈ ಮಹಿಳೆಯ ಕೊಲೆಯನ್ನು ತಾನೇ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಎ. 4ರಂದು ಬೆಳಗ್ಗೆಯಿಂದ ಚಿಂದಿ ಆಯ್ದು ಬಂದ ಹಣದಿಂದ ಜಯನಗರದ ಮದ್ಯದಂಗಡಿಯಲ್ಲಿ ಮದ್ಯಪಾನ ಮಾಡಿ ನಂತರ ಮತ್ತೊಂದು ಅಂಗಡಿಗೆ ಹೋಗಿ ಅಲ್ಲಿಯೂ ಮದ್ಯಪಾನ ಮಾಡಿ ಜೆಪಿ ನಗರದ ಮಿನಿ ಫಾರೆಸ್ಟ್ ಬಳಿಯ ಮನೆಗೆ ಬೀಗ ಹಾಕಿದ್ದನ್ನು ಗಮನಿಸಿ ಬೀಗ ಒಡೆಯಲು ವಿಫಲ ಯತ್ನ ನಡೆಸಿದನು. ತದನಂತರ ಅಲ್ಲಿಂದ ಈಸ್ಟ್ ಎಂಡ್ ಬಿ ಮುಖ್ಯರಸ್ತೆಗೆ ಬಂದು ಮನೆಯೊಂದರಲ್ಲಿ ದೀಪ ಉರಿಯುತ್ತಿರುವುದನ್ನು ಗಮನಿಸಿ ಮನೆಯ ಹಿಂಭಾಗದಿಂದ ಕಾಂಪೌಂಡ್ ಹತ್ತಿ ಮನೆಯೊಳಗೆ ನುಗ್ಗಿ ಒಂದು ಕೋಣೆಯಲ್ಲಿ ಮಲಗಿದ್ದ ವ್ಯಕ್ತಿಯನ್ನು ನೋಡಿ ನಂತರ ಹೊರಗಿನಿಂದ ಬಾಗಿಲಿಗೆ ಚಿಲಕ ಹಾಕಿ, ಮತ್ತೊಂದು ಕೋಣೆಯಲ್ಲಿ ಮಲಗಿದ್ದ ಮಹಿಳೆಯ ಕೊರಳಲ್ಲಿದ್ದ ಸರ ಕತ್ತರಿಸಿ ನಂತರ ಕೈಯಲ್ಲಿದ್ದ ಬಳೆಗಳನ್ನು ತೆಗೆಯಲು ಯತ್ನಿಸಿದಾಗ ಆ ಮಹಿಳೆ ಎಚ್ಚರಗೊಂಡು ಕಿರುಚಿಕೊಂಡಿದ್ದರಿಂದ ತಾನು ರಾಡಿನಿಂದ ಅವರ ತಲೆಗೆ ಬಲವಾಗಿ ಒಡೆದಾಗ ಅವರು ಪ್ರಜ್ಞೆ ತಪ್ಪಿದ್ದರು. ಈ ವೇಳೆ ನಾನು ಅವರ ಕೈನಲ್ಲಿದ್ದ ನಾಲ್ಕು ಚಿನ್ನದ ಬಳೆಗಳನ್ನು ತೆಗೆದುಕೊಂಡು ಹೋಗಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಆರೋಪಿ ಬಾಯಿಬಿಟ್ಟಿದ್ದಾನೆ.

ಈತ ಕಳ್ಳತನ ಮಾಡಿದ ಒಡವೆಗಳನ್ನು ಸ್ನೇಹಿತ ಚಿನ್ನರಾಜು ಎಂಬಾತನ ಮೂಲಕ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಚಿನ್ನರಾಜು ವೃತ್ತಿಯಲ್ಲಿ ಗಾರೆ ಕೆಲಸ, ಗುಜರಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದು, ಚನ್ನಮ್ಮನಕೆರೆ ಅಚ್ಚುಕಟ್ಟು ಬಳಿ ಇರುವ ಗುಜರಿ ಅಂಗಡಿಗೆ ಆರೋಪಿ ಗಣೇಶನು ಚಿಂದಿವಸ್ತುಗಳನ್ನು ಆಯ್ದು ಚಿನ್ನರಾಜುವಿನ ಅಂಗಡಿಗೆ ಹಾಕುತ್ತಿದ್ದಾಗ ಈತನು ಪರಿಚಯವಾಗಿದ್ದನು.

ಚಿನ್ನರಾಜು ಶಕ್ತಿವೇಲು ಎಂಬಾತನನ್ನು ಗಣೇಶನಿಗೆ ಪರಿಚಯಿಸಿದ್ದನು. ಶಕ್ತಿವೇಲು, ಚಿನ್ನರಾಜು ಮತ್ತು ಗಣೇಶನಿಗೆ ನೀವು ಮನೆ ಕಳ್ಳತನ ಮಾಡಿ ಒಡವೆಗಳನ್ನು ತಂದುಕೊಡಿ, ನಿಮ್ಮನ್ನು ಪೊಲೀಸರು ಹಿಡಿದರೆ ಜಾಮೀನಿನ ಮೇಲೆ ಬಿಡಿಸುತ್ತೇನೆ. ಊಟ-ತಿಂಡಿ, ಮದ್ಯಪಾನದ ಖರ್ಚಿಗೆ ಹಣ ಕೊಡುತ್ತೇನೆಂದು ಪ್ರೇರೇಪಿಸಿದ್ದರಿಂದ ಇವರಿಬ್ಬರು ಪ್ರೇರೇಪಿತರಾಗಿ ಕೆಲವೊಮ್ಮೆ ಗಣೇಶನೊಬ್ಬನೇ, ಇನ್ನೂ ಕೆಲವು ಬಾರಿ ಇವರಿಬ್ಬರೂ ಸೇರಿ ಮನೆಗಳ್ಳತನ ಮಾಡಿದ ಒಡವೆಗಳನ್ನು ಶಕ್ತಿವೇಲುಗೆ ಮಾರಾಟ ಮಾಡುವುದಾಗಿ ಪೊಲೀಸರಿಗೆ ಮಾಹಿತಿ ದೊರಕಿದೆ.
ಆರೋಪಿ ಶಕ್ತಿವೇಲು ವೃತ್ತಿಯಲ್ಲಿ ಕಾರು ಚಾಲಕನಾಗಿ ಹಾಗೂ ಜಿಮ್ ಟ್ರೈನರ್ ಆಗಿಯೂ ಸಹ ಕೆಲಸ ಮಾಡಿಕೊಂಡಿದ್ದನು. ಗಣೇಶ ಮತ್ತು ಚಿನ್ನರಾಜು ಸೇರಿ ಮನೆಗಳ್ಳತನ ಮಾಡಿದ ಒಡವೆಗಳನ್ನು ತೆಗೆದುಕೊಂಡು ಮಣಪ್ಪುರಂ, ಮುತ್ತೂಟ್ ಫೈನಾನ್ಸ್ ಹಾಗೂ ಚಿನ್ನದ ಅಂಗಡಿಗಳಲ್ಲಿ ಗಿರವಿ ಇಟ್ಟು ಇನ್ನೂ ಕೆಲವು ಆಭರಣಗಳನ್ನು ಮಾರಾಟ ಮಾಡಿ, ಕೆಲವನ್ನು ತಾನೇ ಇಟ್ಟುಕೊಂಡಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳಿಂದ 280 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ 9 ಮನೆಗಳಲ್ಲಿ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. ಕೊಲೆ ಪ್ರಕರಣ ಭೇದಿಸಿದ ತಂಡಕ್ಕೆ ನಗರ ಪೊಲೀಸ್ ಆಯುಕ್ತ ಪ್ರವೀಣ್‌ಸೂದ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News