ವಿವಿಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸಲು ಶ್ರಮಿಸಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಮೇ 16: ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಪರಿಪೂರ್ಣ ವ್ಯಕಿತ್ವ ರೂಪಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ 2015-16ನೆ ಸಾಲಿನ ಎನ್ನೆಸೆಸ್ಸ್ ರಾಜ್ಯ ಪ್ರಶಸ್ತಿ ಪ್ರದಾನ ಮತ್ತು ಯುವ ಸ್ಪಂದನ ಹಾಗೂ ಜೀವನ ಕೌಶಲ್ಯ ವರ್ಷದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುವಂತಹ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಕೊಳ್ಳಬೇಕು. ವ್ಯಕ್ತಿತ್ವವನ್ನು ಪರಿಪೂರ್ಣ ಗೊಳಿಸುವಂತಹ ಪಠ್ಯಕ್ರಮ ಸಿಗುತ್ತಿಲ್ಲ. ಆದುದರಿಂದಲೆ, ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯಾದರೂ ಸಮಾಜದಲ್ಲಿ ಇಂದಿಗೂ ಮತಾಂಧತೆ, ಅಸಹನೆ ಜೀವಂತ ವಾಗಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.
ರಾಷ್ಟ್ರಕವಿ ಕುವೆಂಪು ಪ್ರಕಾರ ‘ಹುಟ್ಟುವಾಗ ಪ್ರತಿಯೊಬ್ಬರು ವಿಶ್ವಮಾನವ ರಾಗಿರುತ್ತಾರೆ. ಆದರೆ, ಬೆಳೆಯುತ್ತ ಹೋದಂತೆ ಅಲ್ಪ ಮಾನವರಾಗುತ್ತಾರೆ’. ಯಾರೂ ಇಂತಹ ಜಾತಿಯಲ್ಲೆ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡಿರುವುದಿಲ್ಲ. ಆದರೆ, ಪ್ರತಿಯೊಬ್ಬರೂ ಸಮಾಜದಲ್ಲಿ ಮನುಷ್ಯರಾಗಿ ಬಾಳಿದರೆ ಸಾಕು ಎಂದು ಮುಖ್ಯಮಂತ್ರಿ ಹೇಳಿದರು.
ಸಂವಿಧಾನದ ಮೂಲ ಆಶಯವಾಗಿರುವ ಸ್ವಾತಂತ್ರ, ಸಮಾನತೆ ಹಾಗೂ ಭಾತೃತ್ವವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ನಮ್ಮ ಬೆಳವಣಿಗೆಯಲ್ಲಿ ಸಮಾಜದ ಕೊಡುಗೆ ಅಪಾರವಾದದ್ದು. ಆ ಸಮಾಜಕ್ಕೆ ನಾವು ಏನು ನೀಡಿದ್ದೇವೆ ಎಂಬುದರ ಕುರಿತು ಆಲೋಚನೆ ನಡೆಸಬೇಕು ಎಂದು ಅವರು ಕರೆ ನೀಡಿದರು.
ರಾಷ್ಟ್ರೀಯ ಸೇವಾ ಯೋಜನೆ(ಎನ್ನೆಸ್ಸೆಸ್) ವಿದ್ಯಾರ್ಥಿಗಳಲ್ಲಿ ಜಾತ್ಯತೀತ, ವೈಚಾರಿಕ ಮನೋಭಾವನೆಯನ್ನು ಬೆಳೆಸಬೇಕು. ವೈಚಾರಿಕತೆ ಇಲ್ಲದಿದ್ದರೆ ವೌಢ್ಯಗಳ ಸಂಕೋಲೆಗೆ ನಾವು ಸಿಲುಕಿಕೊಳ್ಳುತ್ತೇವೆ. ತನಗಾಗಿ ಜೀವಿಸಿದರೆ ಸ್ವಾರ್ಥ, ಮತ್ತೊಬ್ಬರಿಗಾಗಿ ಜೀವಿಸಿದರೆ ಅದು ನಿಸ್ವಾರ್ಥ. ವಿದ್ಯಾರ್ಥಿಗಳಿಗೆ ಎನ್ನೆಸ್ಸೆಸ್ ನಿಸ್ವಾರ್ಥದ ಬೋಧನೆ ಮಾಡುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯ ಸರಕಾರವು ಪ್ರಾಥಮಿಕ, ಪ್ರೌಢ ಹಾಗೂ ಉನ್ನತ ಶಿಕ್ಷಣಕ್ಕೆ 25 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ವಿದ್ಯಾರ್ಥಿಗಳು ರಾಜಕೀಯ ಪ್ರೇರಿತವಾದ ಸಂಘಟನೆಗಳತ್ತ ಆಕರ್ಷಿತವಾಗಬಾರದು. ಈ ಸಂಘಟನೆಗಳು ವಿದ್ಯಾರ್ಥಿಗಳಿಗೆ ಶಿಕ್ಷಣದ ಹೊರತುಪಡಿಸಿ ಬೇರೆ ವಿಷಯಗಳತ್ತ ಕೊಂಡೊಯ್ಯುತ್ತಾರೆ. ಆದುದರಿಂದ, ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದರು.
ವೈವಿದ್ಯತೆ, ಏಕತೆ, ಸಹನೆ, ಸಹಿಷ್ಣುತೆ ಬೆಳೆದಂತೆ ಸಮಾಜದಲ್ಲಿ ಅನ್ಯೋನ್ಯತೆ ಬೆಳೆಯುತ್ತದೆ. ಬಸವಾದಿ ಶರಣರು 850 ವರ್ಷಗಳ ಹಿಂದೆಯೆ ಸಮಾಜದಿಂದ ಜಾತಿ ವ್ಯವಸ್ಥೆಯನ್ನು ಕಿತ್ತೊಗೆಯುವ ಸಂದೇಶ ನೀಡಿದ್ದರು. ಆದರೆ, ಇಂದಿಗೂ ಅದನ್ನು ನಿರ್ಮೂಲನೆಗೊಳಿಸಲು ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿ ಬೇಸರ ವ್ಯಕ್ತಪಡಿಸಿದರು.
ಯಾರು ಚರಿತ್ರೆಯನ್ನು ಅಧ್ಯಯನ ಮಾಡುವುದಿಲ್ಲವೋ, ಅಂತಹವರು ಚರಿತ್ರೆ ನಿರ್ಮಿಸಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ನಿಜವಾದ ಅರ್ಥದಲ್ಲಿ ಯುವಜನ ಸಬಲೀಕರಣವಾಗಬೇಕಿದೆ. ಎನ್ನೆಸ್ಸೆಸ್‌ನ ನೈಜ್ಯ ಧ್ಯೇಯವನ್ನು ವಿದ್ಯಾರ್ಥಿಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ರಾಜ್ಯದ 32 ವಿಶ್ವವಿದ್ಯಾಲಯಗಳಲ್ಲಿ 3 ಲಕ್ಷ ಸದಸ್ಯರನ್ನು ಎನ್ನೆಸ್ಸೆಸ್ ಹೊಂದಿತ್ತು. ಈಗ ಅದು 5 ಲಕ್ಷಕ್ಕೆ ಏರಿಕೆಯಾಗಿದ್ದು, ಇನ್ನು ಒಂದು ವರ್ಷದಲ್ಲಿ 10 ಲಕ್ಷ ಸದಸ್ಯತ್ವದ ಗುರಿಯನ್ನು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎನ್ನೆಸ್ಸೆಸ್ ಚಟವಟಿಕೆಗಳನ್ನು ಪ್ರೌಢಶಾಲಾ ಮಟ್ಟದಿಂದಲೆ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಯುವ ಸ್ಪಂದನ ಕಾರ್ಯಕ್ರಮವನ್ನು ಹೊಂದಿರುವ ದೇಶದ ಏಕೈಕ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕ್ರೀಡಾ ಇಲಾಖೆಗೆ ಶಿಕ್ಷಣ ಇಲಾಖೆಗೆ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ. ಆದುದರಿಂದ, ತಮ್ಮ ಅಧ್ಯಕ್ಷತೆಯಲ್ಲಿ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ, ಶಾಸಕ ಸಿ.ಎಸ್.ಶಿವಳ್ಳಿ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಮುನಿರಾಜು, ಕುಲಸಚಿವ ಡಾ.ಬಿ.ಕೆ.ರವಿ, ನಿಮ್ಹಾನ್ಸ್ ನಿರ್ದೇಶಕ ಪ್ರೊ.ಬಿ.ಎನ್.ಗಂಗಾಧರ್, ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ನಿರ್ದೇಶಕ ಅನುಪಮ್ ಅಗರ್ವಾಲ್ ಸೇರಿದಂತೆ ಇನ್ನಿತತರು ಉಪಸ್ಥಿತರಿದ್ದರು.