ದೇವೇಗೌಡ-ಎಚ್.ವಿಶ್ವನಾಥ್ ಸಮಾಲೋಚನೆ
ಬೆಂಗಳೂರು, ಮೇ 16: ‘ಮಾಜಿ ಸಂಸದ ಎಚ್.ವಿಶ್ವನಾಥ್ ಕಾಂಗ್ರೆಸ್ ಪಕ್ಷದಲ್ಲಿ ಉಳಿಯಲಿದ್ದಾರೆ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೆ ವಿಶ್ವನಾಥ್, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಮಂಗಳವಾರ ಸಂಜೆ 5:30ರ ಸುಮಾರಿಗೆ ಇಲ್ಲಿನ ಪದ್ಮನಾಭನಗರದಲ್ಲಿನ ದೇವೇಗೌಡ ಅವರ ನಿವಾಸಕ್ಕೆ ಧಾವಿಸಿದ ಎಚ್.ವಿಶ್ವನಾಥ್ ಸುಮಾರು ಒಂದು ಗಂಟೆಗಳಷ್ಟು ಕಾಲ ಜೆಡಿಎಸ್ ಸೇರ್ಪಡೆ ಸಂಬಂಧ ಚರ್ಚಿಸಿದ್ದಾರೆಂದು ಮೂಲಗಳು ತಿಳಿಸಿವೆ.
ದೇವೇಗೌಡ ಹಾಗೂ ಎಚ್.ವಿಶ್ವನಾಥ್ ಇಬ್ಬರೆ ಸುದೀರ್ಘ ಸಮಾಲೋಚನೆ ನಡೆಸಿದ್ದು, ಜೆಡಿಎಸ್ ಸೇರ್ಪಡೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವ ವಿಚಾರ ಸಂಬಂಧ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದಲೇ ಮೈಸೂರಿನ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇರಾಧೆ ಹೊಂದಿದ್ದು, ವಿಶ್ವನಾಥ್ ಜೆಡಿಎಸ್ ಸೇರ್ಪಡೆ ಬಹುತೇಕ ಖಚಿತವಾಗಿದೆ. ಶೀಘ್ರದಲ್ಲೆ ಅವರು ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.