ಎರಡು ವರ್ಷಗಳಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ: ಸಚಿವ ಬಂಡಾರು ದತ್ತಾತ್ರೇಯ
ಬೆಂಗಳೂರು, ಮೇ 16: ಮುಂದಿನ ಎರಡು ವರ್ಷಗಳಲ್ಲಿ ಕಾರ್ಮಿಕ ಇಲಾಖೆಯಿಂದ ಒಂದು ಕೋಟಿ ಜನರಿಗೆ ಉದ್ಯೋಗ ಸೃಷ್ಟಿಸುವಲ್ಲಿ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಬಂಡಾರು ದತ್ತಾತ್ರೇಯ ಭರವಸೆ ನೀಡಿದ್ದಾರೆ.
ಮಂಗಳವಾರ ಇಲ್ಲಿನ ಇಂದಿರಾನಗರದಲ್ಲಿ ಇಎಸ್‌ಐ ನರ್ಸಿಂಗ್ ಕಾಲೇಜು ಮತ್ತು ಆಡಿಟೋರಿಯಂ ಉದ್ಘಾಟನೆ ಮಾಡಿ ಮಾತನಾಡಿದ ಅವರು, ನಾನು ಬಡವ, ನನ್ನ ಖಾತೆಯೂ ಬಡವರಿಗೆ ಸೇವೆ ಮಾಡಲು ಇರುವ ಖಾತೆ. ಮೋದಿ ಸರಕಾರದಲ್ಲಿ ತಾನು ಕಾರ್ಮಿಕ ಸಚಿವನಾಗಿ ಕಾರ್ಯ ನಿರ್ವಹಿಸುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದರು.
ಕಾರ್ಮಿಕ ಕಲ್ಯಾಣಕ್ಕಾಗಿ ನಮ್ಮ ಸರಕಾರ ಸಾಕಷ್ಟು ಕೆಲಸ ಮಾಡುತ್ತಿದೆ. ಈಗಾಗಲೇ ಮೋದಿ ಸರಕಾರ ದೇಶದಲ್ಲಿ ಅಸ್ತಿತ್ವಕ್ಕೆ ಬಂದು ಮೂರು ವರ್ಷಗಳಾಗಿದೆ. ಇಡೀ ಪ್ರಪಂಚದಲ್ಲೇ ಭಾರತ ಖ್ಯಾತಿ ಪಡೆದಿದೆ ಎಂದ ಅವರು, ಸ್ವಚ್ಛ ಭಾರತ್, ಜನ್‌ಧನ್, ಅನಿಲ ಸಬ್ಸಿಡಿ, ಜನರಿಕ್ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ರೂಪಿಸಿದೆ ಎಂದು ಉಲ್ಲೇಖಿಸಿದರು.
ಮೋದಿ ಸರಕಾರ, ರೈತರು ಮತ್ತು ಬಡವರ ಸರಕಾರ. ಮೋದಿ ಸರಕಾರ ಮಹಿಳೆಯರು ಮತ್ತು ಕಾರ್ಮಿಕರಿಗೆ ಗೌರವ ನೀಡುವ ಸರಕಾರ ಎಂದ ಅವರು, ಮುಂದಿನ ಎರಡು ವರ್ಷಗಳಲ್ಲಿ ಭಾರತ ಪ್ರಪಂಚದಲ್ಲೆ ಜನಪ್ರಿಯತೆಗಳಿಸಲಿದೆ ಎಂದರು.
ವೇತನ ಕೆಟಗರಿ: ಕರ್ನಾಟಕ ರಾಜ್ಯದಲ್ಲಿ ಕನಿಷ್ಟ ವೇತನ ಪ್ರತಿನಿತ್ಯ 350 ರೂ. ನೀಡಬೇಕು.(ಸಿ-ಕೆಟಗರಿ), ಬಿ-ಕೆಟಗರಿ-400 ರೂ., ಎ-ಕೆಟಗರಿ-500 ರೂ. ನಿಗದಿ ಮಾಡಿದ್ದೇವೆ. ಈ ಹಿಂದಿನ ಸರಕಾರ ಕನಿಷ್ಠ ವೇತನ ನಿಗದಿ ಮಾಡಲು ವಿಫಲವಾಗಿತ್ತು. ಇದೀಗ ಅದನ್ನು ನಾವು ಕಾರ್ಯಗತಗೊಳಿಸಿದ್ದೇವೆ ಎಂದು ಹೇಳಿದರು.
ಗುಣಮಟ್ಟದ ಆರೋಗ್ಯ ಸೇವೆ: ಬೊಮ್ಮನಹಳ್ಳಿ, ಶಿವಮೊಗ್ಗ, ಬಳ್ಳಾರಿ, ಹಾರೋಹಳ್ಳಿ, ಹುಬ್ಬಳ್ಳಿ, ನರಸಾಪುರದಲ್ಲಿ ಸೇರಿ ವಿವಿಧೆಡೆ ಒಟ್ಟು 800 ಹಾಸಿಗೆಗಳ ಸಾಮರ್ಥ್ಯದ ಇಎಸ್‌ಐ ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು ಎಂದ ಅವರು, ಎಲ್ಲಾ ಕಾರ್ಮಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲಾಗುವುದು ಎಂದರು.
ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ರಾಜ್ಯದ ಎಲ್ಲ ಇಎಸ್‌ಐ ಆಸ್ಪತ್ರೆಗಳಲ್ಲಿ ಜನೌಷಧ ಮಳಿಗೆಗಳನ್ನು ಒದಗಿಸಲು ಕೇಂದ್ರ ಸರಕಾರ ಸಿದ್ಧ. ಇದರಿಂದ ಕಾರ್ಮಿಕರಿಗೆ ಅಗ್ಗದ ದರದಲ್ಲಿ ಅಗತ್ಯ ಔಷಧಗಳು ದೊರೆಯಲಿವೆ ಎಂದು ಇದೇ ವೇಳೆ ತಿಳಿಸಿದರು.
ದೇಶದಲ್ಲಿ ಕೇವಲ 88 ಜನೌಷಧ ಕೇಂದ್ರಗಳಿದ್ದವು. ಇದೀಗ ಅವುಗಳ ಸಂಖ್ಯೆ 1320ಕ್ಕೆ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ 100 ರೂ.ಗಳಿಗೆ ಸಿಗುವ ಔಷಧಿ ಜನೌಷಧ ಕೇಂದ್ರಗಳಲ್ಲಿ ಕೇವಲ 30 ರೂ.ಗಳಿಗೆ ಸಿಗಲಿದೆ. ಇದರಿಂದ ಬಡವರಿಗೆ ಅನುಕೂಲವಾಗಲಿದೆ ಎಂದರು. ಸಂಸದ ಪಿ.ಸಿ.ಮೋಹನ್, ಕಾರ್ಮಿಕ ಸಚಿವ ಸಂತೋಷ್ ಲಾಡ್ ಸೇರಿದಂತೆ ಇನ್ನಿತರರು ಹಾಜರಿದ್ದರು.