×
Ad

50 ರಸ್ತೆಗಳನ್ನು ಟೆಂಡರ್ ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿ: ಸಿದ್ದರಾಮಯ್ಯ

Update: 2017-05-16 21:43 IST

ಬೆಂಗಳೂರು, ಮೇ 16: ಪ್ರಸ್ತುತ ಪ್ರಗತಿಯಲ್ಲಿರುವ ಟೆಂಡರ್ ಶ್ಯೂರ್ ರಸ್ತೆಗಳು ಮುಗಿದ ಬಳಿಕ 700 ಕೋಟಿ ರೂ. ವೆಚ್ಚದಲ್ಲಿ ಇನ್ನೂ 50 ರಸ್ತೆಗಳನ್ನು ಟೆಂಡರ್ ಶ್ಯೂರ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ನಗರದಲ್ಲಿ ಪೂರ್ಣಗೊಂಡ ಮೊದಲನೆ ಹಂತದ 6 ರಸ್ತೆಗಳನ್ನು ಸಾರ್ವಜನಿಕರ ಬಳಕೆಗೆ ಸಮರ್ಪಿಸಿ ಮಾತನಾಡಿದ ಅವರು, ಈ ಡಿಸೆಂಬರ್ ಅಂತ್ಯದೊಳಗೆ ಬಾಕಿಯಿರುವ 5 ರಸ್ತೆಗಳ ಕಾಮಗಾರಿಯನ್ನೂ ಪೂರ್ಣಗೊಳಿಸಬೇಕೆಂದು ತಾಕೀತು ಮಾಡಿದರು.

ನಗರದಲ್ಲಿ ಉತ್ತಮ ರಸ್ತೆಗಳು ಇರಬೇಕೆಂದು 50 ರಸ್ತೆಗಳನ್ನು ವಿದೇಶಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವಂತೆ ಬಜೆಟ್‌ನಲ್ಲಿ ಘೋಷಿಸಿದ್ದೆ. ಈಗಾಗಲೇ 6 ರಸ್ತೆಗಳು ಪೂರ್ಣಗೊಂಡಿವೆ. ಮೋದಿ ರಸ್ತೆ, ಸಿದ್ದಯ್ಯ ಪುರಾಣಿಕ್ ರಸ್ತೆ, ಜಯನಗರ 11ನೆ ಮುಖ್ಯರಸ್ತೆಯನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

3ನೆ ಹಂತದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ 13 ರಸ್ತೆಗಳನ್ನು ಟೆಂಡರ್ ಶ್ಯೂರ್ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವುದು. ಈ ರಸ್ತೆಗಳು ವಿದೇಶಿ ಮಾದರಿಯಲ್ಲಿರುವ ರಸ್ತೆಗಳಾಗಿವೆ. ಹಾಗೂ ನಗರದಲ್ಲಿ ಟೆಲಿಕಾಂ, ಕೆಇಬಿ ಮತ್ತು ಜಲಮಂಡಳಿ ಮತ್ತಿತರ ಸಂಸ್ಥೆಗಳು ರಸ್ತೆಗಳನ್ನು ಅಗೆದು ಹಾಳು ಮಾಡುತ್ತಿದ್ದರು. ನಾಗರಿಕರು ಸರಕಾರಕ್ಕೆ ಶಾಪ ಹಾಕುತ್ತಿದ್ದರು. ಇದನ್ನು ತಪ್ಪಿಸಲು ವಿದೇಶಿ ಮಾದರಿಯಲ್ಲಿಯೇ ಟೆಂಡರ್ ಶ್ಯೂರ್ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಯಿತು ಎಂದು ಅವರು ಹೇಳಿದರು.

ಟೆಂಡರ್ ಶ್ಯೂರ್ ಯೋಜನೆ ಕಾಮಗಾರಿ ಸಾಕಷ್ಟು ವಿಳಂಬವಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದೆ. ಮುಂದಿನ ಹಂತದಲ್ಲಿ ಕೈಗೆತ್ತಿಕೊಳ್ಳುವ ಕಾಮಗಾರಿಗಳು ನಿಗದಿತ ಅವಧಿಯಲ್ಲೇ ಪೂರ್ಣಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಬಂಧಿಸಿದ ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.

ಮುಖ್ಯಮಂತ್ರಿ ನಗರ ಪ್ರದಕ್ಷಿಣೆ: ನಗರದಲ್ಲಿ ನಿರ್ಮಾಣಗೊಂಡಿರುವ ಟೆಂಡ್ಯೂರ್ ಶೂರ್ ರಸ್ತೆಗಳನ್ನು ವೀಕ್ಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ನಗರದ ಪ್ರದಕ್ಷಿಣೆ ನಡೆಸಿದರು. ಇವರೊಂದಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ವಸತಿ ಸಚಿವ ಎಂ.ಕೃಷ್ಣಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಪದ್ಮಾವತಿ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

ನಂತರ ನೃಪತುಂಗ ರಸ್ತೆಯಲ್ಲಿ ಕಾಲ್ನಡಿಗೆಯಲ್ಲೇ ಫುಟ್‌ಪಾತ್‌ನಲ್ಲಿ ಅಡ್ಡಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಫುಟ್‌ಪಾತ್‌ನಲ್ಲಿ ಅಳವಡಿಸಿದ್ದ ವಿದ್ಯುತ್ ದೀಪಗಳು, ಕುಳಿತುಕೊಳ್ಳುವ ಆಸನ, ಮಳೆನೀರು ಕಾಲುವೆ ಸೇರಿದಂತೆ ಎಲ್ಲವನ್ನು ಕೂಲಂಕಷವಾಗಿ ಪರಿಶೀಲಿಸಿದರು.

ಇದೇ ವೇಳೆ ವಸತಿ ಸಚಿವ ಎಂ. ಕೃಷ್ಣಪ್ಪ ಮಾತನಾಡಿ, ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಸಮೀಪ ನಡೆಯುತ್ತಿರುವ ಮಳೆ ನೀರು ಗಾಲುವೆ ಕಾಮಗಾರಿ 2 ವರ್ಷಗಳಾದರೂ ಪೂರ್ಣಗೊಂಡಿಲ್ಲ. ಈ ಹಿಂದೆ ನೀವು ಪರಿಶೀಲನೆ ನಡೆಸಿ ಬೇಗ ಪೂರ್ಣಗೊಳಿಸುವಂತೆ ಆದೇಶ ನೀಡಿದ್ದರೂ ಈವರೆಗೆ ಮುಗಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದರಿಂದ ಸಿಟ್ಟಿಗೆದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಮಗಾರಿ ಬೇಗ  ಪೂರ್ಣಗೊಳಿಸದಿದ್ದರೆ ಸಸ್ಪೆಂಡ್ ಮಾಡಬೇಕಾಗುತ್ತದೆ ಎಂದು ಮಳೆ ನೀರುಗಾಲುವೆ ಪ್ರಧಾನ ಎಂಜಿನಿಯರ್ ಸಿದ್ದೇಗೌಡರಿಗೆ ಎಚ್ಚರಿಕೆ ನೀಡಿದರು.

 ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ನಿರ್ಮಿಸಲಾದ ನಗರದಲ್ಲಿನ ನವೀಕೃತ ನೃಪತುಂಗ ರಸ್ತೆ ಹಾಗೂ 115.33 ಕೋಟಿ ರೂ. ವೆಚ್ಚದಲ್ಲಿ ನವೀಕೃತಗೊಂಡಿರುವ 9.19 ಕಿಮೀ ರೆಸಿಡೆನ್ಸಿ ರಸ್ತೆ, ರಿಚ್ಮಂಡ್ ರಸ್ತೆ, ಕುಷರೇಟ್ ರಸ್ತೆ ಮತ್ತು ಮ್ಯೂಸಿಯಂ ರಸ್ತೆಗಳನ್ನು ಲೋಕಾರ್ಪಣೆ ಮಾಡಿದರು. ಹಾಗೂ ಬ್ರಿಗೇಡ್ ರಸ್ತೆ ಹಾಗೂ ರೆಸಿಡೆನ್ಸಿ ರಸ್ತೆಯ ಜಂಕ್ಷನ್ ಬಳಿ ನಿರ್ಮಿಸಿರುವ ಯುದ್ಧ ಸ್ಮಾರಕವನ್ನು ಉದ್ಘಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News