×
Ad

ಅಕ್ರಮ ಗಣಿಗಾರಿಕೆ ಪ್ರಕರಣ: ಎಸ್‌ಐಟಿ ಅಧಿಕಾರಿಗಳಿಂದ ಗಂಗಾರಾಂ ಬಡೇರಿಯಾ ತೀವ್ರ ವಿಚಾರಣೆ

Update: 2017-05-16 22:50 IST

ಬೆಂಗಳೂರು, ಮೇ 16: ಜಂತಕಲ್ ಎಂಟರ್ ಪ್ರೈಸಸ್‌ಗೆ ಅಕ್ರಮವಾಗಿ ಅದಿರು ಸಾಗಿಸಲು ಅನುಮತಿ ನೀಡಿದ ಆರೋಪದ ಮೇಲೆ ಹಿರಿಯ ಐಎಎಸ್ ಅಧಿಕಾರಿ ಗಂಗಾರಾಂ ಬಡೇರಿಯಾ ಅವರನ್ನು ಬಂಧಿಸಿರುವ ವಿಶೇಷ ತನಿಖಾ ದಳ(ಎಸ್‌ಐಟಿ)ದ ಅಧಿಕಾರಿಗಳು ಮಂಗಳವಾರ ತೀವ್ರ ವಿಚಾರಣೆಗೆ ಒಳಪಡಿಸಿ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

ಜಂತಕಲ್ ಕಂಪೆನಿಗೆ ಅನುಮತಿ ನೀಡುವಂತೆ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಕಚೇರಿಯಿಂದ ಭಾರಿ ಒತ್ತಡವಿತ್ತು. ಹೀಗಾಗಿ, ಜಂತಕಲ್ ಕಂಪೆನಿಗೆ ಅದಿರು ಸಾಗಿಸಲು ಅನುಮತಿ ನೀಡಬೇಕಾಯಿತು ಎಂದು ಬಡೇರಿಯಾ ಎಸ್‌ಐಟಿ ಅಧಿಕಾರಿಗಳ ವಿಚಾರಣೆ ವೇಳೆಯಲ್ಲಿ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

 ಬಡೇರಿಯಾ ಅವರ ಪುತ್ರ ಗಗನ್ ಬಡೇರಿಯಾ ಖಾತೆಗೆ ಚೆಕ್ ಮೂಲಕ ಹಣ ವರ್ಗಾವಣೆಯಾಗಿರುವ ಬಗ್ಗೆಯೂ ಎಸ್‌ಐಟಿ ಅಧಿಕಾರಿಗಳು ಗಂಗಾರಾಂ ಬಡೇರಿಯಾರಿಂದ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.

ಪರವಾನಗಿ ವರ್ಗಾವಣೆ: 1965ರಲ್ಲಿ ರಾಘವೇಂದ್ರರಾವ್ ಎಂಬುವವರು ಹೊಳಲ್ಕೆರೆ ತಾಲೂಕಿನ ಹಿರೇಕಂದವಾಡಿ ಹಾಗೂ ತನಿಗೇಹಳ್ಳಿಯಲ್ಲಿ ಗಣಿಗಾರಿಕೆ ನಡೆಸಲು ಪರವಾನಗಿ ಪಡೆದಿದ್ದರು. 1967ರಲ್ಲಿ ಗಣಿ ಪರವಾನಗಿಯನ್ನು ಜಂತಕಲ್ ಎಂಟರ್ ಪ್ರೈಸಸ್ ಖರೀದಿಸಿ, ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿತ್ತು.

 2007ರಲ್ಲಿ ಎರಡೂ ಗಣಿ ಗುತ್ತಿಗೆ ಪರವಾನಗಿಯನ್ನು 40 ವರ್ಷಗಳವರಗೆ ಎರಡು ಆದೇಶಗಳಲ್ಲಿ ನವೀಕರಿಸಲಾಗಿತ್ತು. ಅಂದರೆ, 1985ರಿಂದ 2005ರವರೆಗೆ ಇದ್ದ ಗುತ್ತಿಗೆ ಪರವಾನಗಿಯನ್ನು 2025ರವರೆಗೆ ನವೀಕರಿಸಲಾಗಿತ್ತು. ಅಲ್ಲದೆ, ಅದಿರು ಸಾಗಣೆ ಅನುಮತಿಯನ್ನೂ ಜಂತಕಲ್ ಎಂಟರ್ ಪ್ರೈಸಸ್ ಪಡೆದುಕೊಂಡಿತ್ತು.
 

 ಚೆಕ್ ಮಾಹಿತಿ ನೀಡಲು ವಿಫಲ: ಖಾತೆಗೆ ಚೆಕ್ ಮೂಲಕ ವರ್ಗಾವಣೆಯಾಗಿರುವ ಬಗ್ಗೆ ಸ್ಪಷ್ಟ ಮಾಹಿತಿ ನೀಡದೇ ಇರುವ ಕಾರಣಕ್ಕೆ ಗಂಗಾರಾಂ ಬಡೇರಿಯಾ ಅವರನ್ನು ಬಂಧಿಸಲು ಎಸ್‌ಐಟಿ ನಿರ್ಧರಿಸಿತು ಎಂದು ಮೂಲಗಳು ತಿಳಿಸಿವೆ.
     ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೀಡಿದ್ದ ನೋಟಿಸನ್ನು ಬಡೇರಿಯಾ 15 ದಿನಗಳಿಂದ ನಿರ್ಲಕ್ಷಿಸಿದ್ದರು. ಸೋಮವಾರ ವಿಚಾರಣೆಗೆ ಹಾಜರಾದ ಅವರು, ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ನನ್ನದೇನೂ ತಪ್ಪಿಲ್ಲ, ನಾನು ಭಾಗಿಯಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಖಾತೆಗೆ 10 ಲಕ್ಷ ಜಮೆಯಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಅವರು ನಿರುತ್ತರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News