ಅಧ್ಯಕ್ಷ-ಸದಸ್ಯರ ಹೆಸರು ಘೋಷಿಸಲಿರುವ ಮುಖ್ಯಮಂತ್ರಿ

Update: 2017-05-17 15:59 GMT

ಬೆಂಗಳೂರು, ಮೇ 17: ಕೇಂದ್ರ ಸರಕಾರದ ನೂತನ ಆಹಾರ ನೀತಿ ಅನ್ವಯ ರಚನೆಯಾಗಲಿರುವ ರಾಜ್ಯ ಆಹಾರ ಆಯೋಗಕ್ಕೆ ಅಧ್ಯಕ್ಷರು ಹಾಗೂ ಸದಸ್ಯರ ಹೆಸರನ್ನು ಒಂದು ವಾರದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಲಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಆಹಾರ ಆಯೋಗಕ್ಕೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡುವ ಕುರಿತು ನಡೆದ ನೇಮಕಾತಿ ಸಮಿತಿ ಸಭೆಯಲ್ಲಿ ಈ ತೀರ್ಮಾನವನ್ನು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ.

ಕೇಂದ್ರ ಸರಕಾರದ ನೂತನ ಆಹಾರ ನೀತಿಯ ಅನ್ವಯ ಐದು ವರ್ಷಗಳ ಅವಧಿಯ ರಾಜ್ಯ ಆಹಾರ ಆಯೋಗವನ್ನು ರಚಿಸಬೇಕಿದ್ದು, ಅದಕ್ಕೆ ಓರ್ವ ಅಧ್ಯಕ್ಷ ಹಾಗೂ ಐವರು ಸದಸ್ಯರನ್ನು ನೇಮಕ ಮಾಡಬೇಕಿದೆ. ಅಧ್ಯಕ್ಷ ಹಾಗೂ ಸದಸ್ಯ ಸ್ಥಾನಕ್ಕೆ ನಿವೃತ್ತ ಐಎಎಸ್ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಅವುಗಳನ್ನು ಪರಿಶೀಲಿಸಿ ಒಂದು ವಾರದ ಬಳಿಕ ಅಧ್ಯಕ್ಷ ಹಾಗೂ ಸದಸ್ಯರ ಹೆಸರನ್ನ ಘೋಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.

ನೇಮಕಾತಿ ಸಮಿತಿ ಸಭೆಯಲ್ಲಿ ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ, ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News