400 ಮಂದಿಗೆ ಸಿಕ್ಕಿದೆ ಸರಕಾರಿ, ಖಾಸಗಿ ಉದ್ಯೋಗ!

Update: 2017-05-17 16:15 GMT

ಬೆಂಗಳೂರು, ಮೇ 17: ಇತ್ತೀಚೆಗೆ ಬೆಂಗಳೂರು ಸಿಸಿಬಿ ಪೊಲೀಸರು ನಕಲಿ ಅಂಕಪಟ್ಟಿ ಪ್ರಕರಣದ ಜಾಲವನ್ನು ಭೇದಿಸಿ ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, 400 ಮಂದಿ ಈಗಾಗಲೇ ಸರಕಾರಿ ಮತ್ತು ಪ್ರತಿಷ್ಠಿತ ಖಾಸಗಿ ಕಂಪೆನಿಗಳಲ್ಲೂ ಉದ್ಯೋಗ ಪಡೆದುಕೊಂಡಿದ್ದಾರೆ ಎನ್ನುವ ಆತಂಕದ ಮಾಹಿತಿ ಬೆಳಕಿಗೆ ಬಂದಿದೆ.

ಮೇ 5 ರಂದು ಸಿಸಿಬಿ ಪೊಲೀಸರು, ಮಹಿಳೆ ಸೇರಿ ನಾಲ್ವರನ್ನು ಬಂಧಿಸಿ ಪ್ರಕರಣವನ್ನು ಭೇದಿಸಿದಾಗ ನಕಲಿ ಅಂಕಪಟ್ಟಿ ಜಾಲ ಪತ್ತೆಯಾಗಿತ್ತು. ಸುಮಾರು 400 ಮಂದಿಗೆ ಪ್ರತಿ ಅಂಕಪಟ್ಟಿಗೆ ಒಂದು ಲಕ್ಷದ ಅರವತ್ತು ಸಾವಿರ ರೂ.ಗೆ ಮಾರಾಟ ಮಾಡಲಾಗಿತ್ತೆಂದು ಆರೋಪಿಗಳು ತಪ್ಪುಒಪ್ಪಿಕೊಂಡಿದ್ದಾರೆ.

ದೇಶಾದ್ಯಂತ ಒಟ್ಟು 180 ಮಧ್ಯವರ್ತಿಗಳು ನಕಲಿ ಅಂಕಪಟ್ಟಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಸೇರಿದಂತೆ ವಿವಿಧ ಶ್ರೇಣಿಯ ಅಂಕಪಟ್ಟಿಗಳನ್ನು ತಯಾರಿಸಿ ದೇಶಾದ್ಯಂತ ಮಾರಾಟ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಂಕಪಟ್ಟಿ ಪಡೆದ ಕೆಲವರು ಈಗಾಗಲೇ ಸರಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿ ಕೆಲಸವನ್ನು ಪಡೆದಿದ್ದಾರೆ. ಅಲ್ಲದೆ, ಪ್ರತಿಷ್ಠಿತ ಐಟಿಬಿಟಿ ಹಾಗೂ ಖಾಸಗಿ ಕಂಪನಿಗಳಲ್ಲಿ ಹಲವಾರು ಮಂದಿ ಉನ್ನತ ಹುದ್ದೆಗಳನ್ನು ಪಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಬಂಧಿತರ ಇಮೇಲ್, ವಾಟ್ಸಪ್‌ಗಳನ್ನು ಪರಿಶೀಲಿಸಿದ ವೇಳೆ ಕೇವಲ ಕರ್ನಾಟಕವಲ್ಲದೆ ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ, ಪಂಜಾಬ್, ಹರಿಯಾಣ, ಬಿಹಾರ ಸೇರಿ ಸುಮಾರು 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಈ ತಂಡ ನಕಲಿ ಅಂಕಪಟ್ಟಿಗಳನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News