ಸ್ವತಃ ಸಾವಿನ ಹೊಸ್ತಿಲಲ್ಲಿದ್ದರೂ ಜೀವ ಉಳಿಸುವ ಸಂಶೋಧನೆ ಮಾಡಿದ ಬೆಳ್ತಂಗಡಿಯ ಪ್ರೆಸಿಲ್ಲಾ

Update: 2017-05-18 18:29 GMT

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಪ್ರೆಸಿಲ್ಲಾ(ವೇಗಸ್) ಡಿಸೋಝಾ ಅವರು ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಜೀವಗಳನ್ನುಳಿಸಲು ಮಾಡಿರುವ ಸಂಶೋಧನೆ ಯನ್ನು ಗುರುತಿಸಿ ಕೆನಡಾದ ಟೊರೆಂಟೋ ವಿವಿಯು ವಿಶೇಷ ಘಟಿಕೋತ್ಸವವೊಂದನ್ನು ಆಯೋಜಿಸಿ ಅವರಿಗೆ ಪಿಎಚ್‌ಡಿ ಪದವಿಯನ್ನು ಪ್ರದಾನಿಸಿದೆ. ಸ್ವತಃ ಸಾವಿನ ಹೊಸ್ತಿಲ ಲ್ಲಿರುವ ಪ್ರೆಸಿಲ್ಲಾರ ಈ ಸಾಧನೆ ಅನನ್ಯವಾಗಿದೆ. ಹೌದು, ಅವರು ಕ್ಯಾನ್ಸರ್ ಮಾರಿಗೆ ತುತ್ತಾಗಿದ್ದಾರೆ.

ಬೆಳ್ತಂಗಡಿಯ ಅರ್ಬನ್ ವೇಗಸ್ ಮತ್ತು ಯೂಜಿನ್ ಮಾಡ್ತಾ ದಂಪತಿಗಳ ಆರನೆಯ ಮಗುವಾಗಿ ಪ್ರೆಸಿಲ್ಲಾ ಜನಿಸಿದ್ದು 1972,ಜುಲೈ 13ರಂದು. ಮಧ್ಯಮ ವರ್ಗದ ಈ ಕುಟುಂಬ ತನ್ನ ಎರಡು ಬೆಡ್‌ರೂಮ್‌ಗಳ ಮನೆಯಲ್ಲಿ ನೆಮ್ಮದಿಯಾಗಿದ್ದು, ಅರ್ಬನ್ ಮತ್ತು ಯೂಜಿನ್ ಸರಕಾರಿ ಉದ್ಯೋಗದಲ್ಲಿದ್ದರು.

ಪ್ರೆಸಿಲ್ಲಾಗೆ ಐದು ವರ್ಷವಾಗಿದ್ದಾಗ ಈ ಕುಟುಂಬ ಕಾರ್ಕಳಕ್ಕೆ ಸ್ಥಳಾಂತರಗೊಂಡಿತ್ತು. ಜಯಂತಿನಗರ ಸರಕಾರಿ ಶಾಲೆ ಮತ್ತು ಕ್ರೈಸ್ಟ್ ದಿ ಕಿಂಗ್ ಎಲಿಮೆಂಟರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದ ಪ್ರೆಸಿಲ್ಲಾ ಆರನೇ ತರಗತಿಯಲ್ಲಿದ್ದಾಗ ತಂದೆ ಅರ್ಬನ್ ಮಿದುಳು ರಕ್ತಸ್ರಾವದಿಂದ ತೀರಿಕೊಂಡಿದ್ದರು ಮತ್ತು ಕುಟುಂಬದ ಜವಾಬ್ದಾರಿಯೆಲ್ಲ ತಾಯಿ ಯೂಜಿನ್‌ರ ಮೇಲೆಯೇ ಬಿದ್ದಿತ್ತು ಮತ್ತು ಅವರು ತುಂಬ ಕಷ್ಟಪಟ್ಟು ಅದನ್ನು ನಿಭಾಯಿಸಿದ್ದರು.

ಬಾಲಕಿಯರ ಪ್ರೌಢಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪೂರೈಸಿದ ಪ್ರೆಸಿಲ್ಲಾ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಸಸ್ಯಶಾಸ್ತ್ರ, ಜೀವಶಾಸ್ತ್ರ ಮತ್ತು ರಸಾಯನಿಕ ಶಾಸ್ತ್ರಗಳಲ್ಲಿ ಉನ್ನತ ಶ್ರೇಣಿಯಲ್ಲಿ ಅಂಡರ್‌ಗ್ರಾಜ್ಯುಯೇಟ್ ಪದವಿಯನ್ನು ಮುಗಿಸಿದ್ದರು. ಬಳಿಕ ಮಣಿಪಾಲ ಅಕಾಡಮಿ ಆಫ್ ಹೈಯರ್ ಎಜ್ಯುಕೇಶನ್‌ಗೆ ಸೇರ್ಪಡೆಗೊಂಡು 1996ರಲ್ಲಿ ಮೆಡಿಕಲ್ ಮೈಕ್ರೋಬಯಾಲಜಿಯಲ್ಲಿ ಪದವಿಯನ್ನು ಮುಗಿಸಿದ್ದರು.

 1997ರಲ್ಲಿ ಪ್ರೆಸಿಲ್ಲಾರ ಮದುವೆ ನೆರವೇರಿದ್ದು, ಆ ಬಳಿಕ ಪತಿಯೊಡನೆ ದುಬೈನಲ್ಲಿ ಸಂಸಾರ ಹೂಡಿದ್ದರು. ಅದೇ ವೇಳೆ ಕ್ಷಯರೋಗ ಸಂಶೋಧನೆಯಲ್ಲಿ ಪಿಎಚ್‌ಡಿ ಮಾಡುವ ಅವಕಾಶ ಅವರನ್ನು ಅರಸಿಕೊಂಡು ಬಂದಿತ್ತಾದರೂ ಆಗಷ್ಟೇ ಮದುವೆಯಾಗಿದ್ದರಿಂದ ಭಾರತಕ್ಕೆ ಮರಳಲು ಅವರಿಗೆ ಸಾಧ್ಯವಾಗಿರಲಿಲ್ಲ. ಬದಲಿಗೆ ಅವರು ದುಬೈನ ಆಸ್ಪತ್ರೆಯೊಂದರಲ್ಲಿ ಕ್ವಾಲಿಟಿ ಕಂಟ್ರೋಲ್ ಟೆಕ್ನಾಲಜಿಸ್ಟ್ ಮತ್ತು ಲ್ಯಾಬ್ ಟೆಕ್ನಾಲಜಿಸ್ಟ್ ಆಗಿ ಉದ್ಯೋಗಕ್ಕೆ ಸೇರಿಕೊಂಡಿದ್ದರು.

ಪತಿ ತನ್ನ ಉದ್ಯೋಗರಂಗದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದರೂ ಪ್ರೆಸಿಲ್ಲಾರನ್ನು ಅಸಂತೋಷ ಕಾಡುತ್ತಿತ್ತು. ಪಿಎಚ್‌ಡಿ ಮಾಡುವ ಕನಸನ್ನು ನನಸಾಗಿಸಿಕೊಳ್ಳುವ ಬಗ್ಗೆಯೇ ಸದಾ ಅವರು ಚಿಂತಿಸುತ್ತಿದ್ದರು. ಮಗಳು ಜೇಡಿನ್ ಜನಿಸಿದ ಎರಡು ವರ್ಷಗಳ ಬಳಿಕ, 2003ರಲ್ಲಿ ಈ ಕುಟುಂಬ ಕೆನಡಾಕ್ಕೆ ವಲಸೆ ಹೋಗಲು ನಿರ್ಧರಿಸಿ ಅರ್ಜಿಯನ್ನು ಸಲ್ಲಿಸಿತ್ತು. ಅದೃಷ್ಟಕ್ಕೆ ಕೆನಡಾಕ್ಕೆ ವಲಸೆ ಹೋಗುವ ಮುನ್ನವೇ ಅಲ್ಲಿಯ ಉದ್ಯೋಗವೊಂದು ಪ್ರೆಸಿಲ್ಲಾರ ಪತಿಯನ್ನು ಅರಸಿಕೊಂಡು ಬಂದಿತ್ತು. ಹೀಗಾಗಿ ಬಹಳಷ್ಟು ಕೆನೆಡಿಯನ್ನರು ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆ ಈ ಕುಟುಂಬವನ್ನು ಕಾಡಿರಲಿಲ್ಲ.

2005ರಲ್ಲಿ ಟೊರೊಂಟೋದ ನಾರ್ಥ್ ಯಾರ್ಕ್‌ಗೆ ಬಂದಿಳಿದಿದ್ದ ಕುಟುಂಬ ಕಾಯಂ ವಾಸದ ಪರವಾನಿಗೆಗಾಗಿ ಕಾಯುತ್ತಿರುವಾಗಲೇ ಪ್ರಾಯೋಗಿಕ ಯೋಜನೆ ಯೊಂದರಡಿ ದುಡಿಯಲು ಪ್ರೆಸಿಲ್ಲಾರಿಗೆ ಅನುಮತಿ ಲಭಿಸಿತ್ತು. ಕೆನಡಾದಲ್ಲಿ ಉದ್ಯೋಗದ ಅನುಭವವನ್ನು ಪಡೆಯುವ ಜೊತೆಗೆ ತನ್ನ ಸಂವಹನ ಮತ್ತು ಜನರೊಂದಿಗೆ ಬೆರೆಯುವ ಕೌಶಲವನ್ನು ಅಭಿವೃದ್ಧಿಗೊಳಿಸಿಕೊಳ್ಳುವ ಅವಕಾಶ ಒದಗಿಸುವ ಉದ್ಯೋಗವೊಂದು ಅವರಿಗೆ ಅಲ್ಲಿಯ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ದೊರಕಿತ್ತು. ಕ್ಲಿನಿಕಲ್ ಸಂಶೋಧನಾ ಸಂಸ್ಥೆಯೊಂದರಲ್ಲಿ ಸ್ವಯಂಸೇವೆಯ ಅವಕಾಶವೂ ಅವರಿಗೆ ಸಿಕ್ಕಿತ್ತು. ಅವರಿಗೆ ಪೂರ್ಣಕಾಲಿಕ ಉದ್ಯೋಗದ ಕೊಡುಗೆಯಿತ್ತಾದರೂ ಕ್ಲಿನಿಕಲ್ ರೀಸರ್ಚ್‌ನಲ್ಲಿ ವ್ಯಾಸಂಗ ವನ್ನು ಮುಂದುವರಿಸುವ ಉದ್ದೇಶದಿಂದ ಅದನ್ನು ಅವರು ನಿರಾಕರಿಸಿದ್ದರು.

ಇದೇ ವೇಳೆ ಅವರಿಗೆ ವ್ಯಾಸಂಗವನ್ನು ಮುಂದುವರಿಸುವ ಅವಕಾಶ ಒದಗಿ ಬಂದಿತ್ತು. ಕ್ಲಿನಿಕಲ್ ರೀಸರ್ಚ್‌ನಲ್ಲಿ ಸ್ನಾತಕೋತ್ತರ ಸರ್ಟಿಫಿಕೇಟ್‌ಗಳನ್ನು ಪಡೆಯಲು ಒಂಟಾರಿಯೊದ ಹ್ಯಾಮಿಲ್ಟನ್‌ನ ಮೆಕ್‌ಮಾಸ್ಟರ್ ವಿವಿ ಮತ್ತು ಟೊರೊಂಟೋದ ಹಂಬರ್ ಕಾಲೇಜು....ಹೀಗೆ ಎರಡೂ ಕಡೆಗಳಲ್ಲಿ ಪ್ರೆಸಿಲ್ಲಾ ಪ್ರವೇಶ ಪಡೆದಿದ್ದರು. ಎಳೆಯ ಪುತ್ರಿಯನ್ನು ಪೋಷಿಸುವ ಜೊತೆಗೆ ಸಾರ್ವಜನಿಕ ಸಾರಿಗೆಯಲ್ಲಿ ಮೂರು ಗಂಟೆಗಳ ಕಾಲ ಎರಡೂ ಕಡೆಗಳಿಗೆ ಪ್ರಯಾಣಿಸಿ ತರಗತಿಗಳಿಗೆ ಹಾಜರಾಗುತ್ತಿದ್ದರು.

75ಕ್ಕೂ ಅಧಿಕ ಆಸ್ಪತ್ರೆಗಳನ್ನೊಳಗೊಂಡ ಬೃಹತ್ ಕ್ಲಿನಿಕಲ್ ಅಧ್ಯಯನ ಕಾರ್ಯಕ್ರಮ ದಲ್ಲಿ ಸಹ-ಸಮನ್ವಕಿಯಾಗಿ ನೇಮಕಗೊಂಡಿದ್ದು ಪ್ರೆಸಿಲ್ಲಾರ ವೃತ್ತಿಜೀವನದಲ್ಲಿ ಪ್ರಮುಖ ತಿರುವನ್ನು ನೀಡಿತ್ತು. ಇಲ್ಲಿ ಅವರು ನಿರ್ವಹಿಸಿದ್ದ ಕಾರ್ಯ ಡಾ.ಸಾಂಡ್ರೋ ರೊರೊಲಿ ಅವರ ಮೇಲೆ ಪರಭಾವ ಬೀರಿತ್ತು ಮತ್ತು 2012ರಲ್ಲಿ ಅವರು ಟೊರೊಂಟೋ ವಿವಿಯ ಮೆಡಿಸಿನ್ ಫ್ಯಾಕಲ್ಟಿಯಲ್ಲಿ ಪಿಎಚ್‌ಡಿ ಅಭ್ಯರ್ಥಿಯಾಗಿ ಪ್ರೆಸಿಲ್ಲಾರನ್ನು ಸೇರಿಸಿಕೊಂಡಿ ದ್ದರು. ರಿರೆಲಿ ಟೊರೊಂಟೋದ ಸೈಂಟ್ ಮೈಕೇಲ್ಸ್ ಆಸ್ಪತ್ರೆಯಲ್ಲಿ ಟ್ರಾಮಾ ಕೇರ್ ವಿಭಾಗದ ಮುಖ್ಯಸ್ಥರಾಗಿದ್ದರು. ಕೊನೆಗೂ ಪಿಎಚ್‌ಡಿ ಅಧ್ಯಯನದ ಪ್ರೆಸಿಲ್ಲಾರ ಕನಸು ನನಸಾಗಿತ್ತು. ಅವರ ಗಮ್ಯ ಸನಿಹದಲ್ಲಿತ್ತು.

ಆದರೆ ಇದೇ ವೇಳೆ ಪ್ರೆಸಿಲ್ಲಾರ ಬದುಕಿನಲ್ಲಿ ಬರಸಿಡಿಲು ಬಡಿದಿತ್ತು. ಅವರಿಗೆ ಪಿತ್ಥರಸ ನಾಳದ ಕ್ಯಾನ್ಸರ್ ಇರುವುದು 2015ರಲ್ಲಿ ಪತ್ತೆಯಾಗಿತ್ತು. ಅದು ಶೀಘ್ರವೇ ಅಂಡಾಶಯ ಗಳು, ಯಕೃತ್ತು ಮತ್ತು ಶ್ವಾಸಕೋಶಗಳಿಗೆ ಹರಡಿತ್ತು. ಹೆಚ್ಚೆಂದರೆ ಇನ್ನು ಆರು ತಿಂಗಳು ಬದುಕಿರಬಹುದೆಂದು ವೈದ್ಯರು ಸ್ಪಷ್ಟಪಡಿಸಿದ್ದರು.

ಈ ವೇಳೆಗಾಗಲೇ ಪ್ರೆಸಿಲ್ಲಾ ಶೇ.80ರಷ್ಟು ಪಿಎಚ್‌ಡಿ ಅಧ್ಯಯನವನ್ನು ಪೂರ್ಣಗೊಳಿ ಸಿದ್ದರು. ಹೀಗಾಗಿ ಅಧ್ಯಯನವನ್ನು ಮುಂದುವರಿಸಲು ಅವರು ದೃಢನಿಶ್ಚಯವನ್ನು ಮಾಡಿದ್ದರು. ಕಿಮೊಥೆರಪಿಯಂತಹ ಯಾತನೆಗಳ ನಡುವೆಯೇ ಪ್ರಯೋಗಶಾಲೆ ಮತ್ತು ಗ್ರಂಥಾಲಯಗಳ ನಡುವೆ ಓಡಾಡುತ್ತಲೇ 20 ತಿಂಗಳ ಅವಧಿಯಲ್ಲಿ ಪ್ರಬಂಧಗಳನ್ನು ಪ್ರಕಟಿಸುತ್ತಿದ್ದರು ಮತ್ತು ಅವುಗಳನ್ನು ಮಂಡಿಸುತ್ತಿದ್ದರು. ನಡೆದಾಡಲೂ ತುಂಬ ನೋವಾಗುತ್ತಿದ್ದರೂ ತನ್ನ ಗುರಿಸಾಧನೆಯ ಮಾರ್ಗದಲ್ಲಿ ಅವರು ಹಿಂದಡಿಯನ್ನು ಇಟ್ಟಿರಲಿಲ್ಲ.

 ಪಿಎಚ್‌ಡಿ ಪದವಿಯನ್ನು ಮುಗಿಸಿದ ಪ್ರೆಸಿಲ್ಲಾರಿಗೆ ಅದನ್ನು ಪಡೆಯಲು ಜೂನ್‌ನಲ್ಲಿ ನಡೆಯಲಿರುವ ಘಟಿಕೋತ್ಸವದವರೆಗೆ ನಾಲ್ಕು ವಾರಗಳ ಕಾಲವಾದರೂ ಬದುಕಿರುತ್ತೇನೋ ಇಲ್ಲವೋ ಎಂಬ ಭೀತಿ ಕಾಡಿತ್ತು. ಅವರ ಮನವಿಯ ಮೇರೆಗೆ ಮೇ 9ರಂದು ವಿವಿ ಕ್ಯಾಂಪಸ್‌ನಲ್ಲಿ ವಿಶೇಷ ಘಟಿಕೋತ್ಸವವನ್ನು ಆಯೋಜಿಸಿ ಅವರ ಸಾಧನೆಯನ್ನು ಗುರುತಿಸಿ ಪಿಎಚ್‌ಡಿ ಪದವಿಯನ್ನು ಪ್ರದಾನಿಸಲಾಗಿದೆ. ಹಲವಾರು ಕುಟುಂಬ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾರತದಿಂದಲೂ ಕೆಲವು ಬಂಧುಗಳು ಈ ಘಟಿಕೋತ್ಸವದಲ್ಲಿ ಹಾಜರಿರಲೆಂದೇ ಕೆನಡಾಕ್ಕೆ ಹಾರಿದ್ದರು.

ಪ್ರೆಸಿಲ್ಲಾರ ಸಂಶೋಧನೆ ಟೊರೊಂಟೋದ ಸೈಂಟ್ ಮೈಕೇಲ್ಸ್ ಆಸ್ಪತ್ರೆಯಲ್ಲಿ ಟ್ರಾಮಾ ರೋಗಿಗಳ ರಕ್ತಸ್ರಾವವನ್ನು ನಿಯಂತ್ರಿಸಿ ಅವರ ಜೀವಗಳನ್ನುಳಿಸಲು ಅವರಿಗೆ ನೀಡಲು, ಹೋಲಿಕೆಯಾಗುವ ಅತ್ಯಂತ ಹೆಚ್ಚು ಪರಿಣಾಮಕಾರಿ ರಕ್ತ ಉತ್ಪನ್ನಗಳನ್ನು ಗುರುತಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ.

ತನ್ನ ಮಗಳು ಜೇಡಿನ್ ತನ್ನ ಸ್ವಂತ ಜೀವನದಲ್ಲಿಯ ಗುರಿಗಳನ್ನು ಸಾಧಿಸಲು ಸಮರ್ಥಳಾಗಲು ಪರಂಪರೆಯೊಂದನ್ನು ಆಕೆಗೆ ನೀಡಿ ಹೋಗುತ್ತಿದ್ದೇನೆ ಎನ್ನುವ ತೃಪ್ತಿ ಪ್ರೆಸಿಲ್ಲಾರಿಗೆ ಇದೆ. ಕಠಿಣ ಶ್ರಮದಲ್ಲಿ ತೊಡಗಿಕೊಳ್ಳಲು, ತಮ್ಮ ಕನಸುಗಳನ್ನು ನನಸಾಗಿಸಿ ಕೊಳ್ಳಲು ತಾನು ಸಹವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗುತ್ತೇನೆ ಎನ್ನುವ ಆಶಯ ಅವರದು, ಜೊತೆಗೆ ಈ ಬದುಕು ತುಂಬ ಚಿಕ್ಕದು ಎನ್ನುವುದನ್ನು ಮರೆಯಬಾರದು ಎನ್ನುತ್ತಾರೆ ಅವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News