ಆಹಾರದ ಕ್ಷಯ...ರೋಗ ಅಕ್ಷಯ!

Update: 2017-05-19 13:03 GMT

2017ರ ಮಾರ್ಚ್‌ನಲ್ಲಿ, ಕ್ಷಯರೋಗ ನಿರ್ಮೂಲನೆಯ ರಾಷ್ಟ್ರೀಯ ಕಾರ್ಯತಂತ್ರ ಯೋಜನೆ ಯಡಿ ಕ್ಷಯರೋಗಿಗಳ ಕುಟುಂಬಕ್ಕೆ ಚಿಕಿತ್ಸೆ ಅವಧಿಯಲ್ಲಿ ಮಾಸಿಕ ಎರಡು ಸಾವಿರ ರೂ. ನೇರ ನಗದು ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ. ಜತೆಗೆ 500 ರೂ.ಅನ್ನು ಉತ್ತೇಜಕವಾಗಿ ನೀಡಲು ಉದ್ದೇಶಿ ಸಲಾಗಿದೆ. ಈ ಯೋಜನೆ 2017ರಿಂದ 2025ರವರೆಗೆ ಜಾರಿಯಲ್ಲಿರುತ್ತದೆ. ಮುಂದಿನ ಮೂರು ವರ್ಷಗಳಲ್ಲಿ ಯೋಜನೆಯಡಿ 3,600 ರೂ. ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಇದು ಇಡೀ ಕ್ಷಯರೋಗ ನಿಯಂತ್ರಣ ಯೋಜನೆಗೆ ಕಳೆದ ಮೂರು ವರ್ಷಗಳಲ್ಲಿ ವೆಚ್ಚ ಮಾಡಿದ 3,323 ಕೋಟಿ ರೂ.ಗಿಂತ ಅಧಿಕ.

ಮೊಬೈಲ್ ಕ್ಲಿನಿಕ್ ಸೇವೆ ಒದಗಿಸುವ ದತ್ತಿ ಸಂಸ್ಥೆಯ ವೈದ್ಯ ಡಾ.ಅಶೋಕ್ ದವೆ ನೈರುತ್ಯ ರಾಜಸ್ಥಾನದ ಶಿರೋಹಿ ಜಿಲ್ಲೆಯ ಪುಟ್ಟ ಗ್ರಾಮದತ್ತ ದೃಷ್ಟಿ ಹರಿಸಲು ಪುನಿ ಗರಾಸಿಯಾ (14) ಎಂಬ ಬಾಲಕಿ ಕಾರಣ. ಎಲುಬಿನ ಹಂದರ ವಾಗಿದ್ದ ಬಾಲಕಿಯನ್ನು ನೋಡಿದ ತಕ್ಷಣ ಕ್ಷಯರೋಗದ ಸಂಶಯ ದವೆ ಅವರಲ್ಲಿ ಬಲವಾಯಿತು.

ವಿಶ್ವ ಕ್ಷಯ ದಿನಾಚರಣೆಯಂದು ಸರಕಾರ, ಭಾರತದಲ್ಲಿ ಕ್ಷಯ ರೋಗಿಗಳಿಗೆ ನೀಡಬೇಕಾದ ಪೌಷ್ಟಿಕಾಂಶ ಕಾಳಜಿ ಮತ್ತು ಬೆಂಬಲ ಕುರಿತ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಮೂಲಕ 2013ರ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯನ್ನು ರಾಷ್ಟ್ರ ಮಟ್ಟದಲ್ಲಿ ಜಾರಿಗೆ ತಂದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಕೊಬ್ಬು ಮತ್ತು ಮಾಂಸಖಂಡವನ್ನು ಕ್ಷೀಣಿಸುವಂತೆ ಮಾಡುವ ಕ್ಷಯರೋಗದ ಮುಖ್ಯ ಲಕ್ಷಣವೆಂದರೆ ತೂಕ ನಷ್ಟ.

ಅಪೌಷ್ಟಿಕತೆ ಕ್ಷಯ ರೋಗದ ತೀವ್ರತೆಯನ್ನು ಹೆಚ್ಚಿಸು ತ್ತದೆ. ರೋಗ ವಾಸಿಯಾಗುವುದನ್ನು ನಿಧಾನವಾ ಗಿಸುತ್ತದೆ. ಇಷ್ಟಲ್ಲದೇ ಔಷಧಿಯ ಅಡ್ಡ ಪರಿ ಣಾಮವೂ ಹೆಚ್ಚಾಗುತ್ತದೆ. ಅಂತಿಮವಾಗಿದೇಶದಲ್ಲಿ ಪ್ರತೀ ವರ್ಷ ಬಲಿಯಾಗುತ್ತಿ ರುವ 4.8 ಲಕ್ಷ ಕ್ಷಯರೋಗಿಗಳ ಪೈಕಿ ಒಬ್ಬರಾಗಿ ಇವರೂ ಮಾರ್ಪಡುತ್ತಾರೆ.

ಶಿರೋಹಿ ಜಿಲ್ಲೆಯ ಬೈಸಾಸಿಂಗ್ ಗ್ರಾಮದ ಬುಡಕಟ್ಟು ಜನಾಂಗದ ಬಾಲಕಿ ಈ ಮೊಬೈಲ್ ಕ್ಲಿನಿಕ್‌ಗೆ ಬಂದಾಗ ಆಕೆಯ ತೂಕ 20 ಕೆಜಿ ಇತ್ತು. ಅಂದರೆ ದೇಹ ತೂಕ ಸೂಚ್ಯಂಕ (ಬಿಎಂಐ) ಪ್ರತೀ ಚರದ ಮೀಟರ್‌ಗೆ 9.9 ಕೆ.ಜಿ ಇತ್ತು. ಅಗತ್ಯವಾಗಿ ಇದು ಚದರ ಮೀಟರ್‌ಗೆ 21 ಕೆ.ಜಿ. ಇರಬೇಕು. ಆರೋಗ್ಯವಂತ ವ್ಯಕ್ತಿಯ ಬಿಎಂಐಚದರ ಮೀಟರ್‌ಗೆ 21 ಕೆಜಿ ಎನ್ನುತ್ತಾರೆ ಹೊಸ ಮಾರ್ಗ ಸೂಚಿಯನ್ನು ಸಿದ್ಧಪಡಿಸುವಲ್ಲಿ ಪೋಷಕಾಂಶ ತಜ್ಞರ ಜತೆ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿದ ಮಂಗಳೂರು ಯೆನೆಪೊಯ ವೈದ್ಯಕೀಯ ಕಾಲೇಜಿನ ಪ್ರೊಫೆೆಸರ್ ಅನುರಾಗ್ ಭಾರ್ಗವ.

ಬಾಲಕಿಯ ಕಫ ಪರೀಕ್ಷೆಯಿಂದ ಆಕೆಯ ಜ್ವರ ಮತ್ತು ನಿರಂತರ ಕಫದ ಸಮಸ್ಯೆ ಇರುವುದು, ಕ್ಷಯ ರೋಗದ ಇತರ ಲಕ್ಷಣಗಳು ಸ್ಪಷ್ಟವಾಗಿ ಗೋಚರ ವಾದವು.

2016ರ ಅಕ್ಟೋಬರ್‌ನಲ್ಲಿ ನೀಡಿದ ಆರು ತಿಂಗಳ ಚಿಕಿತ್ಸೆಯಲ್ಲಿ ಆ ಗ್ರಾಮದ ಆರೋಗ್ಯ ಕಾರ್ಯಕರ್ತ ಜಯಂತಿಲಾಲ್, ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರ ಮದಡಿ ಸಿಗುವ ಉಚಿತ ಗುಳಿಗೆಯನ್ನು ಸ್ವತಃ ಬಾಲಕಿಗೆ ಪ್ರತೀ ದಿನ ನೀಡಿದರು. ಜತೆಗೆ ಆರು ಕೆಜಿ ಹುರಿದ ಸೋಯಾಬೀನ್ ಹಾಗೂ ಕಡಲೆಯನ್ನು ಪೌಷ್ಟಿಕಾಂಶ ಬೆಂಬಲ ಯೋಜನೆಯಡಿ ನೀಡಿದರು.

ಕ್ಷಯರೋಗಕ್ಕೆ ಔಷಧ ಅಭಿವೃದ್ಧಿಪಡಿಸುವ ಮುನ್ನ ಅಂದರೆ 20ನೆ ಶತಮಾನದ ಮಧ್ಯಭಾಗದ ಹಿಂದೆ, ಕ್ಷಯರೋಗಿ ಗಳಿಗೆ ಉತ್ತಮ ಆಹಾರ, ತೆರೆದ ಗಾಳಿ, ಒಣ ಹವೆ ಮತ್ತು ಸಂಪೂರ್ಣ ವಿಶ್ರಾಂತಿ ಯೇ ಸ್ಯಾನಿಟೋರಿಯಂಗಳಲ್ಲಿ ನೀಡುತ್ತಿದ್ದ ಪ್ರಮುಖ ಚಿಕಿತ್ಸೆ.

ಕಿಮೋಥೆರಪಿ ಚಾಲ್ತಿಗೆ ಬಂದ ಬಳಿಕ, ಸರಕಾರದ ಗಮನ ಸಾಮೂಹಿಕವಾಗಿ ಔಷಧ ನೀಡುವತ್ತ ಹರಿಯಿತು. ಏಕೆಂದರೆ ಆಗ ಭಾರತದಲ್ಲಿ 15 ಲಕ್ಷ ಕ್ಷಯರೋಗಿಗಳ ಪೈಕಿ ಕೇವಲ 23 ಸಾವಿರ ಮಂದಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಇತ್ತು. 1959 ರಲ್ಲಿ ಚೆನ್ನೈನಲ್ಲಿ ನಡೆಸಿದ ಐತಿಹಾಸಿಕ ಅಧ್ಯಯನ ದಲ್ಲಿ ರೋಗಿಯ ಕಫ ಟಿಬಿ ಬ್ಯಾಕ್ಟೀರಿಯಾದಿಂದ ಮುಕ್ತವಾಗಿದೆಯೇ ಎಂದು ಪರೀಕ್ಷಿಸುವ ಮೂಲಕ ಕ್ಷಯರೋಗ ಚಿಕಿತ್ಸೆಯ ಯಶಸ್ಸನ್ನು ವೌಲ್ಯಮಾಪನ ಮಾಡಲಾಯಿತು.

ಈ ಅಧ್ಯಯನದಲ್ಲಿ ಕಂಡುಬಂದ ಪ್ರಮುಖ ಅಂಶ ವೆಂದರೆ ಸ್ಯಾನಿಟೋರಿಯಂಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳ ತೂಕ, ಮನೆಗಳಲ್ಲಿ ಔಷಧಿ ಸೇವಿಸಿದ ರೋಗಿಗಳ ತೂಕಕ್ಕಿಂತ ಹೆಚ್ಚಾಗಿತ್ತು. ಆದರೆ ಆಹಾರ ಅಭದ್ರತೆ ರೋಗಿಗಳಿಗೆ ಮಾರಕವಾಗುತ್ತಿದೆ ಎನ್ನುವುದು ಗೊತ್ತಿದ್ದರೂ, ಈ ಅಂಶವನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಕಾರಣದಿಂದಲೇ ರೋಗಿಗಳ ಪುನಶ್ಚೇತನದಲ್ಲಿ ಸಮತೋಲಿತ ಆಹಾರಕ್ರಮದ ಪಾತ್ರವನ್ನು ಹೊಸ ನೀತಿ ಕಡೆಗಣಿಸಿದೆ.

ಅಪೌಷ್ಟಿಕತೆ ಎನ್ನುವುದು ಭಾರತದ ಶೇ.90ರಷ್ಟು ಅಂದರೆ 10 ಲಕ್ಷ ಕ್ಷಯರೋಗಿಗಳ ಪ್ರಮುಖ ಸಮಸ್ಯೆ ಎಂದು 2013ರ ಅಧ್ಯಯನದ ಆಧಾರದಲ್ಲಿ ಭಾರ್ಗವ ವಿವರಿಸು ತ್ತಾರೆ. ಕ್ಷಯ ಹಾಗೂ ಅಪೌಷ್ಟಿಕತೆ ದ್ವಿಮುಖ ಸಂಬಂಧ ಹೊಂದಿವೆ. ಕಡಿಮೆ ತೂಕದ ಸಮಸ್ಯೆ ಕ್ಷಯರೋಗದ ಕಾರಣ ಮತ್ತು ಪರಿಣಾಮವೂ ಹೌದು.

ಭಾರ್ಗವ ಅವರು 2013ರಲ್ಲಿ ಗ್ರಾಮೀಣ ಭಾರತದಲ್ಲಿ ನಡೆಸಿದ ಅಧ್ಯಯನದಲ್ಲಿ ಕಂಡು ಬಂದ ಪ್ರಕಾರ, ಚಿಕಿತ್ಸೆಯ ವೇಳೆ ಪುರುಷ ರೋಗಿಯ ಸರಾಸರಿ ತೂಕ 42.1 ಕೆಜಿ ಅಗಿತ್ತು. ಅಂದರೆ ಬಿಎಂಐ ಪ್ರತೀ ಚದರ ಮೀಟರ್‌ಗೆ 16 ಕೆ.ಜಿ ಇತ್ತು. (ಸರಾಸರಿ ತೂಕ 34.1 ಕೆಜಿ ಹಾಗೂ ಬಿಎಂಐ 15 ಕೆಜಿ). ರಾಜಸ್ಥಾನದ ಪುನಿಯಂಥ ಕೆಲ ರೋಗಿಗಳ ಬಿಎಂಐ ಅಂತೂ 10 ಕೆಜಿ ಇತ್ತು. ಶೇ.52ರಷ್ಟು ರೋಗಿಗಳು ಕುಬ್ಜತೆ ಅಥವಾ ಬೆಳವಣಿಗೆ ಕುಂಠಿತ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಭಾರ್ಗವ ವಿವರಿಸಿದ್ದಾರೆ. ಒಂದು ಯುನಿಟ್‌ನಷ್ಟು ಬಿಎಂಐ ಕಡಿಮೆಯಾದರೂ ಕ್ಷಯದಿಂದಾಗಿ ಸಾಯುವ ಸಾಧ್ಯತೆ ಶೇ.14ರಷ್ಟು ಹೆಚ್ಚುತ್ತದೆ ಎಂದು ಸಾಂಕ್ರಾಮಿಕ ರೋಗಗಳ ಕುರಿತ ನಿಯತಕಾಲಿಕ ನಡೆಸಿದ ಅಧ್ಯಯನದಲ್ಲಿ ದೃಢಪಟ್ಟಿದೆ.

ಕ್ಷಯರೋಗ ಹೆಚ್ಚಿದಂತೆಲ್ಲ ಅಪೌಷ್ಟಿಕತೆ ಹಾಗೂ ತೂಕ ನಷ್ಟದ ಸಮಸ್ಯೆ ಉಲ್ಬಣ ವಾಗುತ್ತಾ ಹೋಗುತ್ತದೆ. ಮೊದಲು ಈ ರೋಗ ಕರುಳನ್ನು ಸಂಕುಚಿತಗೊಳಿಸಿ, ಆಹಾರ ಸೇವನೆ ಕಡಿಮೆಯಾಗುವಂತೆ ಮಾಡುತ್ತದೆ. ಎರಡನೆಯದಾಗಿ ಜ್ವರದಿಂದಾಗಿ ಮೂಲ ರೋಗದರ ಹೆಚ್ಚುತ್ತದೆ. ಕ್ಷಯದಿಂದಾಗಿ ಪ್ರೊಟೀನ್ ಹಾಗೂ ಮಾಂಸಖಂಡ ಒಡೆದು ಎತ್ತರಕ್ಕೆ ಅನುಗುಣವಾದ ತೂಕ ನಷ್ಟವಾಗುತ್ತಾ ಹೋಗುತ್ತದೆ. ಇದಕ್ಕಿಂತ ಹೆಚ್ಚಾಗಿ ಚಿಕಿತ್ಸೆ ಹಂತದಲ್ಲಿ ಹಾಗೂ ನಂತರ ರೋಗಿಗಳಿಗೆ ಅಪೌಷ್ಟಿಕತೆ ದೊಡ್ಡ ಸವಾಲಾಗುತ್ತದೆ.

ಇದು ರೋಗಿಯ ಕಫದಲ್ಲಿ ಕ್ಷಯಕಾರಕ ಬ್ಯಾಕ್ಟೀರಿಯಾ ಸಾಯುವ ಅವಧಿಯನ್ನು ಕೂಡಾ ಹೆಚ್ಚಿಸುತ್ತದೆ. ತೀವ್ರ ಅಪೌಷ್ಟಿಕತೆ ಹೊಂದಿರುವ ರೋಗಿಗಳು ಸಾಯುವ ಪ್ರಮಾಣ ಇತರ ರೋಗಿಗಳಿಗಿಂತ ನಾಲ್ಕು ಪಟ್ಟು ಅಧಿಕ.

ರೋಗಿಯ ಬಿಎಂಐ 17 ಕೆಜಿಗಿಂತ ಕಡಿಮೆ ಇದ್ದರೆ, ರೋಗಿಗೆ ಲಿವರ್ ಅಸಹಜ ವಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಐದು ಪಟ್ಟು ಅಧಿಕ. ಇದು ಕ್ಷಯರೋಗ ಚಿಕಿತ್ಸೆಯ ಸಂಭಾವ್ಯ ಅಡ್ಡಪರಿ ಣಾಮ ಎಂದು ಕ್ಷಯ ಮತ್ತು ಶ್ವಾಸಕೋಶ ರೋಗಗಳ ಕುರಿತ ಅಂತಾರಾಷ್ಟ್ರೀಯ ನಿಯತಕಾಲಿಕ ನಡೆಸಿದ ಅಧ್ಯಯನ ಹೇಳುತ್ತದೆ.

ಚಿಕಿತ್ಸೆ ಪೂರ್ಣಗೊಂಡ ಬಳಿಕ, ಅಪೌಷ್ಟಿಕತೆ ಯು ರೋಗ ಮತ್ತೆ ಕಾಣಿಸಿಕೊಳ್ಳಲು ಅಥವಾ ದೈಹಿಕ ಚಟುವಟಿಕೆಗಳು ಕುಂಠಿತಗೊಳ್ಳಲು ಕಾರಣವಾಗುತ್ತದೆ.

ಭಾರತದ ಕ್ಷರಯೋಗ ನಿರ್ಮೂಲನೆ ಯೋಜನೆಯಡಿ, ರೋಗಿಗಳಿಗೆ ಪೌಷ್ಟಿಕಾಂಶಗಳಿಗಾಗಿ ನಗದು ವರ್ಗಾವಣೆ ಮಾಡಲು ಉದ್ದೇಶಿಸಿದೆ. ಒಂದು ಕುಟುಂಬದ ಆದಾಯ ಗಳಿಸುವವ್ಯಕ್ತಿ ಕ್ಷಯ ಪೀಡಿತರಾದಾ ಗ, ಕುಟುಂಬಕ್ಕೆ 83 ದಿನಗಳ ವೇತನ ನಷ್ಟವಾಗುತ್ತದೆ ಎಂದು 1999ರಲ್ಲಿ ನಡೆಸಿದ ಅಧ್ಯಯ ನದಿಂದ ಸ್ಪಷ್ಟವಾಗಿದ್ದು, ಇದು ಇಂದಿಗೂ ಪ್ರಸ್ತುತ ಎನ್ನುತ್ತಾರೆ ಡಾ.ಭಾರ್ಗವ. ಈ ಆದಾಯ ನಷ್ಟದಿಂದಾಗಿ ಕುಟುಂಬದ ಆಹಾರ ಭದ್ರತೆಗೆ ಮತ್ತಷ್ಟು ಅಪಾಯ ಒದಗುತ್ತದೆ. ಇದರಿಂದಾಗಿ ರೋಗಿಯ ತಕ್ಷಣದ ಸಂಬಂಧಿಕರು ಕ್ಷಯರೋಗಕ್ಕೆ ತುತ್ತಾಗುವ ಸಾಧ್ಯತೆ ಅಧಿಕ ಎನ್ನುವುದು ಅವರ ಅಭಿಪ್ರಾಯ.

ಹೊಸ ಮಾರ್ಗಸೂಚಿ ಅನ್ವಯ, ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ವಿತರಿಸುವ ಆಹಾರ ಧಾನ್ಯ ಪ್ರಮಾಣವನ್ನು ಕ್ಷಯರೋಗಿಗಳ ಕುಟುಂಬಕ್ಕೆ ಚಿಕಿತ್ಸೆ ಸಂದರ್ಭದ ಆರು ತಿಂಗಳು ಹಾಗೂ ನಂತರದ ಆರು ತಿಂಗಳು ಹೀಗೆ ಹನ್ನೆರಡು ತಿಂಗಳ ಅವಧಿಗೆ ದುಪ್ಪಟ್ಟು ಮಾಡಲಾಗುತ್ತದೆ. ಕ್ಷಯರೋಗಿಗೆ ವಾಸ್ತವವಾಗಿ ಬೇಳೆಕಾಳು, ಎಣ್ಣೆಬೀಜ, ಒಣಗಿದ ಹಾಲಿನ ಪುಡಿ, ನೆಲಗಡಲೆ ಹೀಗೆ ದಿನಕ್ಕೆ 30-40 ಗ್ರಾಂ ಅಧಿಕ ಪ್ರೊಟಿನ್ ಬೇಕಾಗುತ್ತದೆ ಎಂದು ಮಾರ್ಗಸೂಚಿ ಸ್ಪಷ್ಟಪಡಿಸಿದೆ.

ಆದರೆ ಕ್ಷಯರೋಗಿಗಳ ಕುಟುಂಬಕ್ಕೆ ವಿಶೇಷ ಪಡಿತರ ಆಹಾರ ವಿತರಣೆ ಪ್ರಸ್ತಾವ ವನ್ನು ಆರೋಗ್ಯ ಸಚಿವಾಲಯವು ತಳ್ಳಿಹಾಕಿದೆ. ಇದು ಆರೋಗ್ಯ ಸಚಿವಾಲಯದ ವ್ಯಾಪ್ತಿಯನ್ನು ಮೀರಿರುವ ವಿಚಾರ ಎನ್ನುವುದು ಸಚಿವಾಲಯದ ಕ್ಷಯರೋಗ ನಿಯಂತ್ರಣ ವಿಭಾಗದ ಉಪ ಪ್ರಧಾನ ನಿರ್ದೇಶಕ ಸುನೀಲ್ ಖಪರ್ಡೆ ಅವರ ಅನಿಸಿಕೆ. ಇದರ ಬದಲಾಗಿ ರೋಗಿಗಳ ಕುಟುಂಬಕ್ಕೆ ನಗದು ನೆರವು ನೀಡಲು ಉದ್ದೇಶಿಸಲಾಗಿದೆ. ಆದರೆ ಇದು ಲಭ್ಯವಿರುವ ಅನುದಾನವನ್ನು ಅವಲಂಬಿಸಿರುತ್ತದೆ ಎಂದು ಖಪರ್ಡೆ ಹೇಳುತ್ತಾರೆ.

indiaspend.com

Writer - ಚಾರು ಬಾಹ್ರಿ

contributor

Editor - ಚಾರು ಬಾಹ್ರಿ

contributor

Similar News