ಕುಮಾರಸ್ವಾಮಿ ವಿರುದ್ಧ ಗಣಿ ಲಂಚ ಆರೋಪ: ಸಿಟ್ ಎದುರು ಹಾಜರಾದ ಜನಾರ್ದನ ರೆಡ್ಡಿ
ಬೆಂಗಳೂರು, ಮೇ 19: 150 ಕೋಟಿ ರೂ. ಗಣಿ ಲಂಚ ಪ್ರಕರಣ ಸಂಬಂಧ ಸಾಕ್ಷಿ ಹೇಳಿಕೆ ನೀಡುವಂತೆ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ವಿಶೇಷ ತನಿಖಾ ತಂಡ ಸಮನ್ಸ್ ಜಾರಿಗೊಳಿಸಿದ್ದು, ಆ ಹಿನ್ನೆಲೆಯಲ್ಲಿ ರೆಡ್ಡಿ ಅವರು ಸಾಕ್ಷಿ ಹೇಳಲು ಶುಕ್ರವಾರ ಎಸ್‌ಐಟಿ ಮುಂದೆ ಹಾಜರಾಗಿದ್ದಾರೆ.
ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಇದೀಗ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ಗಣಿ ಲಂಚ ಪ್ರಕರಣದ ತನಿಖೆ ನಡೆಸುತ್ತಿದೆ.
ಈ ಸಂಬಂಧ ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿದ್ದ ಮಾಜಿ ಸಚಿವ ಜನಾರ್ದನರೆಡ್ಡಿ ಹೇಳಿಕೆ ಪಡೆಯಲು ಸಮನ್ಸ್ ಜಾರಿಗೊಳಿಸಲಾಗಿತ್ತು. ಹೀಗಾಗಿ, ಎಸ್‌ಐಟಿ ಐಜಿಪಿ ಚರಣ್‌ರೆಡ್ಡಿ ಮುಂದೆ ಜನಾರ್ದನರೆಡ್ಡಿ ಪ್ರಕರಣ ಸಂಬಂಧ ಸಾಕ್ಷಿ ಹೇಳಲು ಹಾಜರಾಗಿದ್ದಾರೆ.
ಗಣಿ ಲಂಚ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ, ಮಾಜಿ ಸಚಿವ ಸಿ.ಚೆನ್ನಿಗಪ್ಪ ಪ್ರಮುಖ ಆರೋಪಿಗಳಾಗಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಸಮ್ಮಿಶ್ರ ಸರಕಾರವಿದ್ದ ವೇಳೆ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಗಣಿ ಲಂಚ ಆರೋಪ ಕೇಳಿಬಂದಿತ್ತು. ಸಮ್ಮಿಶ್ರ ಸರಕಾರದ ಪಾಲುದಾರರ ಪಕ್ಷವಾಗಿದ್ದ ಬಿಜೆಪಿ ಸದಸ್ಯ ಜನಾರ್ದನರೆಡ್ಡಿ ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿದ್ದರು.
ನಿನ್ನೆಯಷ್ಟೇ ಕುಮಾರಸ್ವಾಮಿ ಅವರು ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದು, ಅವರು ನೀಡಿರುವ ಹೇಳಿಕೆಯ ಕುರಿತಂತೆ ಇಂದು ಜನಾರ್ದನ ರೆಡ್ಡಿ ನೀಡಿರುವ ಮಾಹಿತಿ ಏನೆಂಬುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಚಾರಣೆ ಮುಗಿಸಿ ಹೊರ ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ಎಸ್‌ಐಟಿ ಮುಂದೆ ನನ್ನ ಬಳಿ ಇದ್ದಂತಹ ಎಲ್ಲಾ ಸಾಕ್ಷಿಗಳನ್ನು ಸಲ್ಲಿಸಿದ್ದೇನೆ ಎಂದರು. ಇದೇ ವೇಳೆ ನಿಮ್ಮ ಬಳಿ ಲಂಚ ಪಡೆದ ಸಿಡಿ ಇದೆಯಾ ಎಂಬ ಪ್ರಶ್ನೆಗೆ ಮುಗುಳ್ನಗೆ ಬೀರುತ್ತಾ ಇದೆಲ್ಲಾ ಅಧಿಕಾರಿಗಳ ಮುಂದೆಯೇ ಹೇಳುತ್ತೇನೆ ಎಂದು ಹೊರಟರು.