ರೌಡಿ ಶೀಟರ್ ವಿ.ನಾಗರಾಜ್ ಪುತ್ರರಿಂದ ಜಾಮೀನು ಕೋರಿ ಸಿಟಿ ಸಿವಿಲ್ ಕೋರ್ಟ್‌ಗೆ ಅರ್ಜಿ
ಬೆಂಗಳೂರು, ಮೇ 19: ಅಪಹರಣ, ದರೋಡೆ, ಬೆದರಿಕೆ ಮತ್ತು ಅಕ್ರಮ ನೋಟು ವಿನಿಮಯ ದಂಧೆ ಆರೋಪಗಳಡಿ ಬಂಧನಕ್ಕೆ ಒಳಗಾಗಿರುವ ವಿ.ನಾಗರಾಜ್ ಹಾಗೂ ಆತನ ಪುತ್ರರಾದ ಗಾಂಧಿ ಮತ್ತು ಶಾಸ್ತ್ರೀ ಜಾಮೀನು ಕೋರಿ ಸಿಟಿ ಸಿವಿಲ್ ಕೋರ್ಟ್ ಮೋರೆ ಹೋಗಿದ್ದು, ಶನಿವಾರ ವಿಚಾರಣೆಗೆ ಬರಲಿದೆ.
ನಾಗರಾಜ್ ಹಾಗೂ ಆತನ ಪುತ್ರನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಪೊಲೀಸರು ಹಿಂದಿನ ಯಾವುದೋ ಕೇಸುಗಳಲ್ಲಿ ಅವರ ಹೆಸರುಗಳನ್ನು ಸೇರಿಸಿದ್ದಾರೆ. ಅವುಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಹೀಗಾಗಿ, ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ ಎಂದು ಅವರ ಪರ ವಕೀಲರಾದ ರವೀಂದ್ರ ಕಾಮತ್ ತಿಳಿಸಿದ್ದಾರೆ.
ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಮಾ. 18ರಂದು ನಾಗರಾಜ್ ಮತ್ತು ಅವರ ಪುತ್ರರಿಬ್ಬರ ವಿರುದ್ಧ ಅಪಹರಣ ಪ್ರಕರಣ ದಾಖಲು ಮಾಡಲಾಗಿತ್ತು. ಆನಂತರ ಎ. 7ಕ್ಕೆ ಆ ಸಂಬಂಧ ಎಫ್‌ಐಆರ್ ದಾಖಲು ಮಾಡಲಾಗಿತ್ತು. ಆನಂತರ ನಾಗರಾಜ್ ಮತ್ತು ಅವರ ಪುತ್ರರಿಬ್ಬರು ನಾಪತ್ತೆಯಾಗಿದ್ದರು. ಈ ವೇಳೆ ಪೊಲೀಸರು, ಶ್ರೀರಾಮಪುರದಲ್ಲಿರುವ ನಾಗರಾಜ್ ಮನೆ ಮೇಲೆ ದಾಳಿ ನಡೆಸಿದಾಗ ಆತನ ಮನೆಯಲ್ಲಿ ರದ್ದಾಗಿದ್ದ ಹಳೆಯ 500 ಹಾಗೂ 1000 ರೂ. ಮುಖಬೆಲೆಯ 14 ಕೋಟಿ ನಗದು ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದರು. ಈ ಸಂದರ್ಭ ನಾಗರಾಜ್ ತಲೆಮರೆಸಿಕೊಂಡಿದ್ದನು. ನಂತರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಸುಪ್ರೀಂಕೋರ್ಟ್ ತೀರ್ಪನ್ನು ಪೊಲೀಸರು ಪಾಲಿಸುವುದಾದರೆ ತಾನು ಶರಣಾಗುತ್ತೇನೆ ಎಂದು ಹೇಳಿದ್ದ. ಆ ಬಳಿಕ ಅಧೀನ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದನಾದರೂ ಆ ಅರ್ಜಿ ತಿರಸ್ಕೃತಗೊಂಡಿತ್ತು. ಬಳಿಕ ಆತ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದಾಗ, ಪೊಲೀಸರು ಆತನನ್ನು ಬಂಧಿಸಿ ಕರೆ ತಂದು ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು.