×
Ad

‘ಮಾಧ್ಯಮಗಳ ಋಣಾತ್ಮಕ ವರದಿಗಳಿಂದ ತೃತೀಯ ಲಿಂಗಿಗಳ ಹಕ್ಕುಗಳಿಗೆ ಧಕ್ಕೆ’

Update: 2017-05-19 23:30 IST
ವೈಷ್ಣವಿ

 ಚೆನ್ನೈ, ಮೇ 19: ‘ಮಂಗಳಮುಖಿ ಸಮುದಾಯದ ಕುರಿತ ಪ್ರಕರಣಗಳಲ್ಲಿ ಮಾಧ್ಯಮಗಳು ಬಿತ್ತರಿಸುತ್ತಿರುವ ಋಣಾತ್ಮಾಕ ವರದಿಗಳಿಂದ ತೃತೀಯ ಲಿಂಗಿಗಳ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ಇದರಿಂದ ಸಮಾಜದಲ್ಲಿ ನಾಗರಿಕ ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ಗುರುವಾರ ಚೆನ್ನೈ ನಗರದಲ್ಲಿ ವಾಲಂಟರಿ ಹೆಲ್ತ್ ಸೆಂಟರ್ (ವಿಎಚ್‌ಎಸ್) ಆಯೋಜಿಸಿದ್ದ ದಕ್ಷಿಣ ಭಾರತ ಮಂಗಳಮುಖಿ ಸಮುದಾಯದ ಮೇಲೆ ಮಾಧ್ಯಮಗಳ ಪಾತ್ರ ಮತ್ತು ಪರಿಣಾಮ ವಿಷಯ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಬಹುತೇಕ ಮಂಗಳಮುಖಿಯರ ಅಭಿಪ್ರಾಯವಿದು.

ಹೆಚ್ಚಿನ ವರದಿಗಳಲ್ಲಿ ನಮ್ಮನ್ನು ದ್ವಿತೀಯ ದರ್ಜೆ ಪ್ರಜೆಗಳಂತೆ ಮಾಧ್ಯಮಗಳು ಪ್ರತಿಬಿಂಬಿಸುತ್ತಿವೆ .ಈ ಪರಿಣಾಮ ಸಮಾಜವೂ ನಮ್ಮನ್ನು ಅಪರಾಧಿಗಳ ರೀತಿಯಲ್ಲಿ ಕಾಣುತ್ತಿದೆ. ಒಬ್ಬ ತೃತೀಯ ಲಿಂಗಿ ಮಾಡುವ ಅಪರಾಧ ಕೃತ್ಯವನ್ನು ಇಡೀ ಸಮುದಾಯದ ಹಣೆಪಟ್ಟಿಗೆ ಕಟ್ಟಲಾಗುತ್ತಿದೆ ಎಂದು ಹೈದರಾಬಾದ್ ನಗರದ ಜ್ಯೋತಿ ಬೇಸರ ವ್ಯಕ್ತಪಡಿಸಿದರು.

ಮಂಗಳಮುಖಿಯರ ಸಂಬಂಧ ಪ್ರಕರಣಗಳಲ್ಲಿ ಮಾಧ್ಯಮಗಳು, ಕೇವಲ ಪೊಲೀಸರು ಮತ್ತು ಸಂತ್ರಸ್ತರಿಂದ ಮಾತ್ರ ಮಾಹಿತಿ ಯನ್ನು ಪಡೆದು ಏಕಮುಖ ವರದಿಯನ್ನು ಸಿದ್ಧಪಡಿಸುತ್ತಾರೆ. ಈ ಪ್ರಕರಣಗಳ ಸಂಬಂಧ ಮಂಗಳಮುಖಿಯರ ಹೇಳಿಕೆ ಅಥವಾ ಸಂಘಟನೆಗಳ ಅಭಿಪ್ರಾಯವನ್ನು ಮಾಧ್ಯಮಗಳು ಸಂಗ್ರಹಿಸುವುದಿಲ್ಲ. ನಮಗೆ ಅವಕಾಶವನ್ನೇ ಕೊಡುವುದಿಲ್ಲ. ಇದರಿಂದ ಅಪರಾಧ ಪ್ರಕರಣಗಳಲ್ಲಿ ಬಹುತೇಕ ಮಂಗಳಮುಖಿಯರು ವಿಧಿಯಲ್ಲಿದೆ ಶಿಕ್ಷೆಯನ್ನು ಅನುಭವಿಸಬೇಕಾಗಿದೆ ಎಂದು ಅವರು ಅಳಲು ತೋಡಿಕೊಂಡರು.

ಬೆಂಗಳೂರಿನ ಪಯಣ ಸಂಘಟನೆಯ ಸದಸ್ಯೆ ಚಾಂದಿನಿ ಮಾತನಾಡಿ, ಬಹುತೇಕ ಮಂಗಳ ಮುಖಿಯರು ಭಿಕ್ಷಾಟಣೆ ಮತ್ತು ಲೈಂಗಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುವ ಮೂಲಕ ಜೀವನ ಸಾಗಿಸಬೇಕು. ಒಂದು ಕಡೆ ಬೀದಿಬದಿಯಲ್ಲಿ ಭಿಕ್ಷೆ ಬೇಡುವಾಗ ಜನರಿಂದ ಅನುಭವಿಸುವ ಮಾನಸಿಕ ಹಿಂಸೆ, ಲೈಂಗಿಕ ಕ್ರಿಯೆಗೆ ಕರೆಯುವವರಿಂದ ಮಂಗಳಮುಖಿಯರಿಗೆ ನೀಡುವ ದೈಹಿಕ ಕಿರುಕುಳಗಳು ಇವು ಯಾವುವು ಸಮಾಜದ ಅರಿವಿಗೆ ಬರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಭಿಕ್ಷಾಟಣೆ ಮತ್ತು ಲೈಂಗಿಕ ಕಾರ್ಯಕರ್ತೆ ಕೆಲಸ ಮಾಡುವವರಲ್ಲಿಯೂ ಮಾನವೀಯತೆಯ ಗುಣಗಳಿವೆ. ಅಲ್ಲದೆ ಈ ಕಾರ್ಯಗಳನ್ನು ಬಿಟ್ಟು ಸಮಾಜದಲ್ಲಿ ಗೌರವಯುತ ಜೀವನ ನಡೆಸುವ ತೃತಿಯ ಲಿಂಗಿಗಳೂ ಇದ್ದಾರೆ. ಇಂತಹವರನ್ನು ಗುರುತಿಸಿ, ಅವರ ಬಗೆಗಿನ ಗುಣಾತ್ಮಕ ವರದಿಗಳನ್ನು ಸಮಾಜದ ಮುಂದಿಡುವಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು. ಮಂಗಳಮುಖಿಯರ ಹಕ್ಕುಗಳ ರಕ್ಷಣೆಗೆ ಮಾಧ್ಯಮಗಳೂ ಸಹಕರಿಸಬೇಕಿದೆ ಎಂದು ಮನವಿ ಮಾಡಿದರು.

ಸ್ವಾಭಿಮಾನದ ಬದುಕು‘ಮಂಗಳಮುಖಿಯರೆಂದರೆ ಕೇವಲ ಭಿಕ್ಷಾಟನೆ ಮಾಡುವ ಮತ್ತು ಲೈಂಗಿಕ ಕಾರ್ಯಕರ್ತರೆಂಬ ಸಮಾಜದ ಕೀಳು ಮನೋಭಾವಕ್ಕೆ ಸ್ವಾಭಿಮಾನ ಮತ್ತು ಗೌರವವನ್ನು ಬೀದಿಯಲ್ಲಿ ಕಳೆದುಕೊಳ್ಳಬಾರದು. ನಾವು ಇತರರಂತೆ ದುಡಿಯುವ, ಬದುಕುವ ಮೂಲಕ ಸಮಾಜದಲ್ಲಿ ಗೌರವಯುತವಾಗಿ ಬಾಳೋಣ’ ಎಂದು ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿರುವ ಚೆನ್ನೈ ನಿವಾಸಿ, ಮಂಗಳಮುಖಿ ಆಟೋ ಚಾಲಕಿ ವೈಷ್ಣವಿ ಕರೆ ನೀಡಿದರು.

ಲೈಂಗಿಕ ಕಾರ್ಯಕರ್ತೆಯಾಗಿ ಕೆಲಸಮಾಡುವಾಗ ಅನುಭವಿಸಿದ ನೋವು, ಅನುಮಾನಗಳಿಂದ ಬೇಸತ್ತು ಈ ಕೆಲಸವನ್ನು ತ್ಯಜಿಸಿ ಹೊರಬಂದೆ. ಬಳಿಕೆ ಜೀವನ ನಡೆಸಲು ಟಾಟಾ ಮ್ಯಾಜಿಕ್ ವಾಹನವನ್ನು ಬ್ಯಾಂಕಿನ ಸಾಲದ ಮೂಲಕ ಖರೀದಿಸಿದೆ. ಆದರೆ ನಾನು ಮಂಗಳಮುಖಿ ಆದುದರಿಂದ ಗ್ರಾಹಕರು ವಾಹನದತ್ತ ಸುಳಿಯಲಿಲ್ಲ. ಇದರಿಂದ ಬ್ಯಾಂಕಿನಲ್ಲಿ ಸಾಲ ತೀರಿಸಲು ಕಷ್ಟವಾಯಿತು. ಬ್ಯಾಂಕ್ ಸಾಲ ತೀರಿಸಲು ವಾಹನವನ್ನು ಮಾರಿದೆ. ಇನ್ನು ಉಳಿದ ಹಣದಲ್ಲಿ ಆಟೋ ರಿಕ್ಷಾವನ್ನು ಖರೀದಿಸಿದೆ. ಆಗಲೂ ಜನ ಆಟೋ ಹತ್ತಲು ಹಿಂದೇಟು ಹಾಕಿದವರೆ ಹೆಚ್ಚು. ಹೀಗಾಗಿ ಜನರನ್ನು ಸೆಳೆಯಲು ಅತಿ ಕಡಿಮೆ ಬಾಡಿಗೆಯಲ್ಲಿ ಆಟೋ ಓಡಿಸುತ್ತಿದ್ದೇನೆ. ಬೆಳಗ್ಗೆ 8ರಿಂದ ರಾತ್ರಿ 11 ಗಂಟೆವರೆಗೂ ನಿರ್ಭಿತಿಯಿಂದ ಆಟೋ ಓಡಿಸುತ್ತೇನೆ. ಜನರು ಈಕೆ ಎಲ್ಲರಂತಹ ಮುಂಗಳಮುಖಿಯಲ್ಲ ಎಂದು ಖುಷಿಯಿಂದ ಈಗ ಆಟೋ ಏರುತ್ತಿದ್ದಾರೆ. ಕಾಮದ ಕಣ್ಣಿನಿಂದ ನೋಡುತ್ತಿದ್ದವರ ಬಾಯಲ್ಲಿ ‘ಅಕ್ಕ’ಎಂದು ಕರೆಸಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಿದ್ದಾಗ ಸಭೆಯಲ್ಲಿ ಚಪ್ಪಾಳೆಯ ಸುರಿಮಳೆ.

ವಾಲಂಟರಿ ಹೆಲ್ತ್ ಸೆಂಟರ್‌ನ ಪ್ರಾದೇಶಿಕ ವ್ಯವಸ್ಥಾಪಕ ಜಾನ್ಸನ್ ಮಾತನಾಡಿ, ಮಂಗಳಮುಖಿಯರ ಆರೋಗ್ಯ ಸುಧಾರಣೆ ಮತ್ತು ಹಕ್ಕುಗಳ ರಕ್ಷಣೆಗೆ ಸಂಸ್ಥೆ ಹಲವು ವರ್ಷಗಳಿಂದ ಶ್ರಮಿಸುತ್ತಿದೆ. ಮಂಗಳಮುಖಿಯರು ಮುಖ್ಯವಾಹಿನಿಗೆ ಬರಬೇಕಾದರೆ ಮಾಧ್ಯಮಗಳ ಅಗತ್ಯತೆ ಹೆಚ್ಚಿದೆ. ಈ ರೀತಿಯ ಕಾರ್ಯಾಗಾರದಿಂದ ಮಂಗಳಮುಖಿಯರ ಕುರಿತು ಸಮಾಜಕ್ಕೆ ಧನಾತ್ಮಕ ಸಂದೇಶಗಳನ್ನು ನೀಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳದ ಮಂಗಳಮುಖಿಯರು ಪಾಲ್ಗೊಂಡಿದ್ದರು. ಈ ವೇಳೆ ವಿಎಚ್‌ಎಸ್‌ನ ಉಪ ನಿರ್ದೇಶಕ ಡಾ.ವಿಜಯರಾಮನ್, ಸದಸ್ಯರಾದ ಪೀರ್ ಮಹಮದ್, ಗಿರೀಶ್‌ಕುಮಾರ್ ಸೇರಿದಂತೆ ಇತರರು ಇದ್ದರು.

Writer - ಪ್ರಭಾಕರ ಟಿ ಚೀಮಸಂದ್ರ

contributor

Editor - ಪ್ರಭಾಕರ ಟಿ ಚೀಮಸಂದ್ರ

contributor

Similar News