ಹೋಟೆಲ್ ತಿಂಡಿ ತಿಂದು ದಲಿತರ ಮನೆಯೂಟ ಎಂದು ಪೋಸುಕೊಟ್ಟ ರಾಜ್ಯ ಬಿಜೆಪಿ ನಾಯಕರು

Update: 2017-05-19 15:57 GMT

ತುಮಕೂರು, ಮೇ 19: ಬಿಜೆಪಿಯ ಜನಸಂಪರ್ಕ ಅಭಿಯಾನದಲ್ಲಿ ಬಿಜೆಪಿ ಮುಖಂಡರಾದ ಬಿ.ಎಸ್. ಯಡಿಯೂರಪ್ಪ, ಕರ್ನಾಟಕ ಉಸ್ತುವಾರಿ ಮುರುಳೀಧರರಾವ್ ಸೇರಿದಂತೆ ಹಲವರು ಸೇವಿಸಿರುವ ಉಪಹಾರ, ದಲಿತ ಹನುಮಂತರಾಯಪ್ಪ ಅವರ ಮನೆಯಲ್ಲಿ ತಯಾರಿಸಿದ್ದಲ್ಲ. ಬದಲಿಗೆ ಹೊಟೇಲ್‌ವೊಂದರಿಂದ ತರಿಸಲಾಗಿದ್ದ ಆಹಾರ ಎಂದು ತಿಳಿದು ಬಂದಿದೆ.

ಮುಂಬರುವ 2018ರ ಸಾರ್ವತ್ರಿಕ ಚುನಾವಣೆಯನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಸಂಪರ್ಕಿಸುವ 45 ದಿನಗಳ ಜನಸಂಪರ್ಕ ಅಭಿಯಾನವನ್ನು ಮೇ.18ರಂದು ತುಮಕೂರು ನಗರದಿಂದ ಆರಂಭಿಸಿದ್ದರು.

ಸಿದ್ದಗಂಗಾ ಮಠದಿಂದ ತುಮಕೂರು ನಗರದ 29ನೆ ವಾರ್ಡಿಗೆ ಸೇರಿದ ಮರಳೂರು ದಿಣ್ಣೆ ದಲಿತ ಕಾಲನಿಗೆ ಭೇಟಿ ನೀಡಿದ್ದ ಯಡಿಯೂರಪ್ಪ ಮತ್ತು ತಂಡ, ಕಾಲನಿಯ ಹನುಮಂತರಾಯಪ್ಪ ಎಂಬ ಕೂಲಿ ಕಾರ್ಮಿಕರ ಮನೆಯಲ್ಲಿ ತಟ್ಟೆ ಇಡ್ಲಿ, ವಡೆ-ಚಿತ್ರಾನ್ನ ಹಾಗೂ ಕೇಸರಿ ಬಾತ್ ತಿಂದಿದ್ದರು. ಅಲ್ಲದೆ ನಂತರ ನಡೆದ "ಶೋಷಿತರೆಡೆಗೆ-ನಮ್ಮ ನಡಿಗೆ" ಎಂಬ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಆನಂತಕುಮಾರ್ ಸೇರಿದಂತೆ ಎಲ್ಲಾ ನಾಯಕರು ಬಿಜೆಪಿ ದಲಿತ ವಿರೋಧಿಯಲ್ಲ. ನಾವು ದಲಿತರ ಮನೆಯಲ್ಲಿ ಉಪಹಾರ ಸೇವಿಸಿದ್ದೇವೆ ಎಂಬಂತೆ ಭಾಷಣ ಮಾಡಿ, ನೆರೆದಿದ್ದ ಜನರ ಚಪ್ಪಾಳೆ ಗಿಟ್ಟಿಸಿದ್ದಲ್ಲದೆ, ಮಾಧ್ಯಮಗಳಲ್ಲಿಯೂ ಭರ್ಜರಿ ಪ್ರಚಾರ ಪಡೆದಿದ್ದರು.

ಅದರೆ ದಲಿತರ ಮನೆಯ ಉಪಹಾರದ ಅಸಲಿಯತ್ತು ಇಂದು ಬಹಿರಂಗಗೊಂಡಿದೆ. ಯಡಿಯೂರಪ್ಪ ಮತ್ತು ಅವರ ತಂಡ ಸೇವಿಸಿದ್ದು, ದಲಿತರ ಮನೆಯಲ್ಲಿ ತಯಾರಿಸಿದ ತಿಂಡಿಯಲ್ಲ. ಬದಲಿಗೆ ಸ್ಥಳೀಯ ಹೊಟಲೊಂದರಿಂದ ತರಿಸಿದ್ದು ಎನ್ನುವುದು ಗೊತ್ತಾಗಿದೆ. ಬಿಜೆಪಿ ಮುಖಂಡರಾಗಿರುವ ಜಿ.ಎಸ್.ಬಸವರಾಜು ಅವರ ಮನೆಯ ಸಣ್ಣ ಪುಟ್ಟ ಕಾರ್ಯಕ್ರಮಗಳಿಗೆ ನೆಂಟರಿಷ್ಟರು, ಗಣ್ಯರು ಬಂದರೆ ಇದೇ ಹೊಟೇಲ್‌ನಿಂದ ಬೆಳಗಿನ ತಿಂಡಿ ಸರಬರಾಜರಾಗುತ್ತಿದ್ದು, ಮೇ 18ರ ಗುರುವಾರ ಕೂಡ ಇದೇ ಹೊಟೇಲ್‌ನಿಂದ 500 ಜನರಿಗೆ ತಟ್ಟೆ ಇಡ್ಲಿ, ವಡೆ, ಚಿತ್ರಾನ್ನ ಸರಬರಾಜು ಮಾಡಲಾಗಿತ್ತು ಎಂಬುದನ್ನು ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ಹೊಟೇಲ್ ಮಾಲಕರು ಒಪ್ಪಿಕೊಂಡಿದ್ದಾರೆ. ಈ ಘಟನೆಯಿಂದ ರಾಜ್ಯ ಬಿಜೆಪಿ ತೀವ್ರ ಮುಜುಗರಕ್ಕೀಡಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News