×
Ad

ಕಾರ್ತಿಕ್ ರಾಜ್ ಕೊಲೆ ಪ್ರಕರಣ: ಯಡಿಯೂರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧಾರ

Update: 2017-05-19 21:32 IST

ಬೆಂಗಳೂರು, ಮೇ 19: ಕೊಣಾಜೆಯ ಕಾರ್ತಿಕ್ ರಾಜ್ ಕೊಲೆ ಪ್ರಕರಣದಲ್ಲಿ ಪಿಎಫ್‌ಐ ಸಂಘಟನೆ ವಿರುದ್ಧ ಆರೋಪ ಮಾಡಿದ್ಧ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಪಿಎಫ್‌ಐ ರಾಜ್ಯ ಸಮಿತಿ ತೀರ್ಮಾನಿಸಿದೆ.

ನಗರದಲ್ಲಿ ಮೇ 13, 14ರಂದು ನಡೆದ ಪಿಎಫ್‌ಐ ರಾಜ್ಯ ಸಮಿತಿ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದ್ದು, ಬಿಜೆಪಿ ಕಾರ್ಯಕರ್ತ ಕಾರ್ತಿಕ್ ರಾಜ್ ಕೊಲೆಯನ್ನು ಅವರ ಕುಟುಂಬಸ್ಥರೇ ಮಾಡಿರುವುದರ ಕುರಿತು ಪೊಲೀಸರು ತನಿಖೆ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಹೀಗಾಗಿ ಯಾವುದೇ ಆಧಾರವಿಲ್ಲದೆ ಪಿಎಫ್‌ಐ ಮೇಲೆ ಆರೋಪ ಮಾಡಿದ ಬಿ.ಎಸ್.ಯಡಿಯೂರಪ್ಪ ಹೇಳಿಕೆಯನ್ನು ಪಿಎಫ್ಐ ಖಂಡಿಸಿದೆ.

ಬಾಬಾಬುಡನ್‌ಗಿರಿ ಪ್ರಕರಣವನ್ನು ಒಂದೂವರೆ ದಶಕಗಳಿಂದ ಸಂಘಪರಿವಾರದ ಶಕ್ತಿಗಳು ವಿವಾದದ ಕೇಂದ್ರವನ್ನಾಗಿಸಲು ಪ್ರಯತ್ನಿಸುತ್ತಿದೆ. ಈ ವಿವಾದವನ್ನು ರಾಜ್ಯ ಸರಕಾರ ಮಧ್ಯಸ್ಥಿಕೆ ವಹಿಸಿ ಬಗೆಹರಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಆದರೆ, ರಾಜ್ಯ ಸರಕಾರ ಈ ಬಗ್ಗೆ ಚಿಂತನೆ ನಡೆಸಿಲ್ಲ. ಮುಂದಿನ ದಿನಗಳಲ್ಲಾದರೂ ಈ ವಿವಾದವನ್ನು ತ್ವರಿತಗತಿಯಲ್ಲಿ ಬಗೆಹರಿಸಬೇಕೆಂದು ಪಿಎಫ್‌ಐ ಒತ್ತಾಯಿಸಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನ ವಿತರಣೆಯಲ್ಲಿ ವಿಳಂಬ ಮಾಡಿರುವುದು ಸಾವಿರಾರು ಅರ್ಹ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರಿದ್ದು, ಸರಕಾರ ಕೂಡಲೇ ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಿ ಸಮಸ್ಯೆಯನ್ನು ಪರಿಹರಿಸಬೇಕೆಂದು ರಾಜ್ಯ ಸಮಿತಿ ಆಗ್ರಹಿಸಿದೆ.

ಮಂಗಳೂರಿನ ಸಿಸಿಬಿ ಪೋಲೀಸರ ದೌರ್ಜನ್ಯಕ್ಕೆ ಒಳಗಾಗಿ ತನ್ನ ಎರಡು ಕಿಡ್ನಿ ವೈಫಲ್ಯಕ್ಕೆ ಒಳಗಾಗಿರುವ ಅಹ್ಮದ್ ಖುರೇಷಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಒಡಿ ತನಿಖಾ ವರದಿಯನ್ನು ವಿಳಂಬ ಮಾಡದೆ ಆದಷ್ಟು ಶೀಘ್ರ ಬಿಡುಗಡೆಗೊಳಿಸಬೇಕು. ಹಾಗೂ ಪ್ರಕರಣದಲ್ಲಿ ತಪ್ಪಿತಸ್ಥ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಪಿಎಫ್‌ಐ ರಾಜ್ಯ ಸಮಿತಿ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News