ಮಿತಿಮೀರುತ್ತಿರುವ ಡೊನೇಷನ್ ಹಾವಳಿ

Update: 2017-05-19 18:51 GMT

ಮಾನ್ಯರೆ,
ರಾಜ್ಯದಲ್ಲಿ ಈ ವರ್ಷ ಸಂಭವಿಸಿದ ಭೀಕರ ಬರಗಾಲದ ನಡುವೆಯೂ ಅದೆಷ್ಟೋ ಬಡ ರೈತರು ಹೊರ ರಾಜ್ಯಗಳಿಗೆ ಗುಳೆ ಹೋಗಿ ಕೂಲಿ ನಾಲಿ ಮಾಡಿ ಸಾಲದಕ್ಕೆ ಬೇರೆಯವರ ಹತ್ತಿರ ಕೈ ಸಾಲ ಮಾಡಿಕೊಂಡು ತಮ್ಮ ಮಕ್ಕಳನ್ನು ಓದಿಸಿದ್ದಾರೆ. ಇದರ ಫಲವಾಗಿ ಸಾವಿರಾರು ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳು ಈ ಬಾರಿ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಕಷ್ಟಪಟ್ಟು ಓದಿಸಿದ ಪಾಲಕರ ಮುಖದಲ್ಲಿ ಸಂತಸವನ್ನುಂಟು ಮಾಡಿದ್ದಾರೆ.
ಆದರೆ ಸಂತಸದಲ್ಲಿರುವ ಈ ಪೋಷಕರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಕಾಲೇಜುಗಳಿಗೆ ಕಳಿಸುವುದೋ ಬೇಡವೋ ಎಂಬ ಸಂಕಷ್ಟದಲ್ಲಿದ್ದಾರೆ. ಕಾರಣ ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭರಣಿ ಮಳೆ ಸದ್ದು ಮಾಡುತ್ತಿದ್ದು, ರೈತರು ತಮ್ಮ ಭೂಮಿ ಉಳುಮೆ ಮಾಡಲು ಸಾಕಷ್ಟು ಹಣ ಸಂಗ್ರಹಿಸಿಕೊಳ್ಳಬೇಕಾಗುತ್ತದೆ. ಇನ್ನೊಂದೆಡೆ ತಮ್ಮ ಮಕ್ಕಳನ್ನು ಕಾಲೇಜುಗಳಿಗೆ ಕಳುಹಿಸಬೇಕೆಂದರೆ ಪ್ರತಿಷ್ಠಿತ ಖಾಸಗಿ ಕಾಲೇಜುಗಳು ಮಿತಿಮೀರಿ ಡೊನೇಷನ್ ತಗೆದುಕೊಳ್ಳುತ್ತಿವೆ. ಇದರಿಂದಾಗಿ ಸಾಕಷ್ಟು ಸಾಲ ಮಾಡಿಕೊಂಡಿರುವ ಬಡ ರೈತರು ಆತಂಕದಲ್ಲಿದ್ದಾರೆ. ಹಾಗಾಗಿ ಸರಕಾರ ಖಾಸಗಿ ಕಾಲೇಜುಗಳಲ್ಲಿ ಮಿತಿಮೀರಿ ಪಡೆದುಕೊಳ್ಳುತ್ತಿರುವ ಡೊನೇಷನ್ ಬಗ್ಗೆ ತನಿಖೆಮಾಡಿ ಈ ಹಾವಳಿ ತಪ್ಪಿಸಲು ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ಪ್ರತಿಭಾವಂತ ಬಡ ಮಕ್ಕಳು ಮುಂದಿನ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಿ ಕೊಡಬೇಕು. ಈ ನಿಟ್ಟಿನಲ್ಲಿ ಸರಕಾರ ಗಂಭೀರವಾಗಿ ಚಿಂತಿಸಲಿ.
 

Writer - -ಮೌಲಾಲಿ ಕೆ.ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ.ಬೋರಗಿ, ಸಿಂದಗಿ

contributor

Similar News