ಲಂಗು ಲಗಾಮಿಲ್ಲದ ಔಷಧಿ ಸೇವನೆ ಮತ್ತು ಪ್ರತಿರೋಧಕತೆಯ ಸವಾಲುಗಳು

Update: 2017-05-19 18:54 GMT

ಇಷ್ಟು ಸುಲಭವಾಗಿ ಎಲ್ಲವನ್ನೂ ಮಾಡಬಹುದಾದರೆ ವೈದ್ಯರು 6ವರ್ಷ, 9ವರ್ಷ ಅಧ್ಯಯನ ಮಾಡುವುದೇ ವ್ಯರ್ಥವಲ್ಲವೇ....? ದೇಶದ ಎಲ್ಲಾ ವೈದ್ಯಕೀಯ ಕಾಲೇಜುಗಳನ್ನು ಬಂದ್ ಮಾಡಬಹುದಲ್ಲವೇ....? 


ಇಂದು ನೀವು ಯಾವುದೇ ಔಷಧಾಲಯಕ್ಕೆ ಹೋಗಿ ನಾಲ್ಕು ಕೆಮ್ಮಿನ ಮಾತ್ರೆ ಕೊಡಿ ಎಂದು ಕೇಳಿದರೆ ಬಹುತೇಕ ಔಷಧಾಲಯ ಗಳವರು ಅತ್ಯಂತ ಸಹಜವಾಗಿ ಸ್ವಲ್ಪವೂ ಅಳುಕದೆ ತಿಂಡಿ, ತಿನಿಸೋ, ದಿನಸಿಯೋ ನೀಡುವಂತೆ ಸೋಂಕು ನಿವಾರಕ ತೆಗೆದು ಕೊಡು ತ್ತಾರೆ. ಹೆಚ್ಚೆಂದರೆ ಜ್ವರದ (PARACETAMOL), ನೆಗಡಿಯ (CPM) ಮತ್ತು ವಿಟಮಿನ್ ಮಾತ್ರೆಗಳನ್ನು ಮಾತ್ರ ವೈದ್ಯರ ಚೀಟಿಯ ಹೊರತಾಗಿ ನೀಡಬಹುದು. ಇನ್ಯಾವುದೇ ಔಷಧಿಗಳನ್ನು ಹೀಗೆ ಮಾರಾಟ ಮಾಡುವುದು ಕಾನೂನುಬಾಹಿರ.

ಈ ಮೇಲೆ ತಿಳಿಸಿದ ಔಷಧಿಗಳ ಹೊರತಾಗಿ ಇನ್ಯಾವುದೇ ಔಷಧಿಗಳನ್ನು ವೈದ್ಯರ ಸಲಹೆಯ ಹೊರತಾಗಿ ನೀಡುವಂತೆಯೇ ಇಲ್ಲ. ಹೆಚ್ಚಿನೆಲ್ಲಾ ಔಷಧಿಗಳ ಪೊಟ್ಟಣದ ಮೇಲ್ಮೈಯಲ್ಲಿ schedule 'h' drug / hi drug warning ಎಂಬ ಶೀರ್ಷಿಕೆಯಡಿಯಲ್ಲಿ ಎಚ್ಚರಿಕೆಯನ್ನು ಮುದ್ರಿಸಲಾಗಿರುತ್ತದೆ. ಸದ್ರಿ ಎಚ್ಚರಿಕೆಯಲ್ಲಿ ‘ಈ ಔಷಧಿಯನ್ನು ವೈದ್ಯರ ಸಲಹೆಯ ಹೊರತಾಗಿ ಸೇವಿಸುವುದು ಅಪಾಯಕಾರಿ’ ಮತ್ತು ‘ವೈದ್ಯರ ಚೀಟಿಯ ಹೊರತಾಗಿ ಚಿಲ್ಲರೆ ಮಾರಾಟ ಮಾಡುವಂತಿಲ್ಲ’ ಎಂದು ಮುದ್ರಿಸಲಾಗಿರುತ್ತದೆ. ಆದರೆ ಅಂತಹ ಎಚ್ಚರಿಕೆಗಳು ಇಂದು ಕೇವಲ ಔಷಧಿ ಪೊಟ್ಟಣಗಳಿಗೆ ಮಾತ್ರ ಸೀಮಿತವಾಗಿವೆ. ಔಷಧಿಯೂ ಅಪಾತ್ರರ ಕೈಯಲ್ಲಿ ವಿಷವಾಗಬಹುದು ಎಂಬ ಮಾತನ್ನು ನೀವು ಕೇಳಿರಬಹುದು. ಇದರ ಅರ್ಥ ಇಷ್ಟೆ. ಔಷಧಿಗಳನ್ನು ಅರ್ಹ ವೈದ್ಯರ ಸಲಹೆಯ ಮೇರೆಗೆ ಸೇವಿಸಿದರೆ ಮಾತ್ರ ಅದು ಔಷಧಿ. ಅದಲ್ಲದಿದ್ದರೆ ಅದು ವಿಷ.

ಈ ಮಾತು ಯಾಕೆಂದರೆ ಜನ ಸುಶಿಕ್ಷಿತರಾಗುತ್ತಾ ತಮ್ಮನ್ನು ತಾವು ಮಹಾ ಬುದ್ಧಿವಂತರೆಂದುಕೊಂಡು ಪ್ರತಿಯೊಂದಕ್ಕೂ ವೈದ್ಯರ ಬಳಿಗೆ ಯಾಕೆ ಹೋಗಬೇಕು..... ಅಂತರ್ಜಾಲದಲ್ಲಿ ಎರಡು ಕ್ಲಿಕ್ ಕೊಟ್ಟರೆ ಅರೆ ನಿಮಿಷದೊಳಗೆ ತನ್ನ ಖಾಯಿಲೆಗೆ ಬೇಕಾದ ಔಷಧಿಯೇನೆಂದು ತಿಳಿಯುತ್ತದೆ. ಇನ್ನು ಕೆಲವರು ವೈದ್ಯರ ಕ್ಲಿನಿಕ್‌ಗಳಿಗೆ ಹೋಗಿ ಗಂಟೆಗಟ್ಟಲೆ ಸರತಿ ಸಾಲಲ್ಲಿ ಯಾಕೆ ಕಾಯಬೇಕು. ವೈದ್ಯರಿಗೇಕೆ ಸುಮ್ಮನೆ ದುಡ್ಡು ಕೊಡಬೇಕು.... ಔಷಧಾಲಯಗಳಿರುವುದು ನಮಗಾಗಿ, ಅಲ್ಲಿ ಹೋಗಿ ನನ್ನ ಸಮಸ್ಯೆಯೇನೆಂದು ಹೇಳಿದರೆ ಅವರೇ ಔಷಧಿ ಕೊಡುತ್ತಾರಲ್ಲಾ ಎಂಬ ಧೋರಣೆ.

ಇಷ್ಟು ಸುಲಭವಾಗಿ ಎಲ್ಲವನ್ನೂ ಮಾಡಬಹುದಾದರೆ ವೈದ್ಯರು 6ವರ್ಷ, 9ವರ್ಷ ಅಧ್ಯಯನ ಮಾಡುವುದೇ ವ್ಯರ್ಥವಲ್ಲವೇ....? ದೇಶದ ಎಲ್ಲಾ ವೈದ್ಯಕೀಯ ಕಾಲೇಜುಗಳನ್ನು ಬಂದ್ ಮಾಡಬಹುದಲ್ಲವೇ....? ಮೂರು ತಿಂಗಳು ಯಾವುದಾದರೂ ಔಷಧಾಲಯದಲ್ಲಿ ಕೆಲಸ ಮಾಡಿದವನಿಗೆ ಯಾವ ಖಾಯಿಲೆಗೆ ಯಾವ ಔಷಧಿ ಎಂದು ತಿಳಿಯುತ್ತದೆ. ಅವರನ್ನೇ ವೈದ್ಯರನ್ನಾಗಿ ಮಾಡಬಹುದಲ್ಲವೇ...? ಅಥವಾ ಎರಡು ವರ್ಷದ ಡಿ-ಫಾರ್ಮಾ ಕೋರ್ಸು ಕಲಿತವರಿಗೆ ವೈದ್ಯ ವೃತ್ತಿ ನಿರ್ವಹಿಸಲು ಪರವಾನಿಗೆ ನೀಡುವುದೊಳಿತಲ್ಲವೇ...? ಅಥವಾ ಒಂದು ಅಂತರ್ಜಾಲ ಸೌಲಭ್ಯವಿರುವ ಮೊಬೈಲ್ ಫೋನ್ ಖರೀದಿಸಿ ನಮಗೆ ನಾವೇ ವೈದ್ಯರಾಗಬಹುದಲ್ಲವೇ...?

ಒಬ್ಬ ರೋಗಿ ಸ್ವಯಂ ವೈದ್ಯನಾಗುವುದರಿಂದ ಆತ ತನ್ನ ಪ್ರಾಣವನ್ನು ಅಪಾಯಕ್ಕೊಡ್ಡಿಕೊಳ್ಳುತ್ತಾನೆ. ಒಂದು ಔಷಧಾಲಯ ನಿಯಮಾವಳಿಗಳನ್ನು ಯರ್ರಾಬಿರ್ರಿ ಉಲ್ಲಂಘಿಸುವುದರಿಂದ ಅದು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುತ್ತದೆ. ಇವೆರಡೂ ಕಾನೂನು ಬಾಹಿರವೇ ಆದರೂ ಎರಡನೆಯದ್ದು ಹೆಚ್ಚು ಗುರುತರವಾದುದು. ಇತ್ತೀಚಿನ ದಿನಗಳಲ್ಲಿ ಅನೇಕ ಖಾಯಿಲೆಗಳು ಮತ್ತು ಸೋಂಕುಗಳು ಔಷಧಿ ಪ್ರತಿರೋಧಕತೆಯನ್ನು ಪಡೆದುಕೊಂಡಿರುವುದಕ್ಕೆ ಬಹುಮುಖ್ಯ ಕಾರಣ ನಮ್ಮ ಔಷಧಾಲಯಗಳು ಎಂದರೆ ತಪ್ಪಲ್ಲ. ಔಷಧಿ ಪ್ರತಿರೋಧಕತೆಯೆಂದರೆ ಔಷಧಿಗಳು ಪರಿಣಾಮ ಶೂನ್ಯವಾಗುವುದು.

ಯಾವುದೇ ಒಂದು ಸೋಂಕು ನಿವಾರಕವನ್ನು ಓರ್ವ ರೋಗಿ ಸೇವಿಸಬೇಕೆಂದರೆ ಆತನನ್ನು ಓರ್ವ ವೈದ್ಯ ಪರೀಕ್ಷಿಸಿ ಆತನ ಸೋಂಕಿನ ವಿಧವನ್ನು ಪತ್ತೆ ಹಚ್ಚಬೇಕು. ಸೋಂಕು ನಿವಾರಕ ನೀಡುವಾಗ ಕೇವಲ ಆತನ ಸೋಂಕು ಏನೆಂದು ಅರಿಯುವುದು ಮಾತ್ರ ವೈದ್ಯನ ಕೆಲಸವಲ್ಲ. ಆತನ ಮೆಡಿಕಲ್ ಹಿಸ್ಟರಿ, ಆತನ ಮನೆಯವರ ಮೆಡಿಕಲ್ ಹಿಸ್ಟರಿ, ಆತನ ದೇಹ ತೂಕ, ಆಹಾರಾಭ್ಯಾಸ, ಉದ್ಯೋಗ, ಖಾಯಿಲೆಯ ತೀವ್ರತೆ, ಆತನ ಪರಿಸರ, ಚಟಗಳು ಇತ್ಯಾದಿಗಳನ್ನು ಅರಿತ ಬಳಿಕವೇ ಆತನಿಗೆ ಇಂತಹ ಔಷಧಿ ನೀಡಬಹುದೆಂದು ವೈದ್ಯ ನಿರ್ಧರಿಸುತ್ತಾನೆ. ಉದಾ: ಒಂದೇ ಮನೆಯಲ್ಲಿರುವ ಮೂರು ಸದಸ್ಯರಿಗೆ ಕೆಮ್ಮು ಕಫ ಇದೆಯೆಂದ ಮಾತ್ರಕ್ಕೆ ಮೂವರಿಗೂ ಒಂದೇ ವಿಧದ ಔಷಧಿ ಪರಿಣಾಮ ಬೀರುತ್ತದೆಯೆಂದು ಹೇಳಲಿಕ್ಕಾಗದು. ಅದನ್ನು ಪರೀಕ್ಷಿಸಿದ ವೈದ್ಯನೇ ತೀರ್ಮಾನಿಸಬೇಕಾಗುತ್ತದೆ. ಪ್ರತಿಯೊಂದು ಸೋಂಕಿಗೂ ಸೋಂಕು ನಿವಾರಕವನ್ನು ನೀಡಲೇಬೇಕೆಂದೇನಿಲ್ಲ. ಆತನ ಸೋಂಕಿನ ತೀವ್ರತೆಯ ಆಧಾರದ ಮೇಲೆ ವೈದ್ಯ ಅದನ್ನು ನಿರ್ಧರಿಸುತ್ತಾನೆ.

ವೈದ್ಯಕೀಯ ಪ್ರಯೋಗಾಲಯವೊಂದನ್ನು ನಡೆಸುತ್ತಿರುವವನಾಗಿ ಕಳೆದ 13 ವರ್ಷಗಳಲ್ಲಿ ನನ್ನ ಪರಿಸರದಲ್ಲಿ ಆಗುತ್ತಿರುವ ಔಷಧಿ ಪ್ರತಿರೋಧಕ ದರವನ್ನು ಗಮನಿಸುತ್ತಾ ಬಂದಿದ್ದೇನೆ. ಮೂತ್ರಕೋಶದ ಸೋಂಕಿನ ಹಲವಾರು ರೋಗಿಗಳು ನಮ್ಮ ಬಳಿಗೆ ಪರೀಕ್ಷೆಗೆ ಬರುತ್ತಾರೆ. ಮೂತ್ರದ ‘ಕಲ್ಚರ್ ಆ್ಯಂಡ್ ಸೆನ್ಸಿಟಿವಿಟಿ’ ಎಂಬ ಪರೀಕ್ಷೆಗೆ ನಾವು ಸೋಂಕು ನಿವಾರಕಗಳನ್ನು ಬಳಸುತ್ತೇವೆ. ಸಾಮಾನ್ಯವಾಗಿ ಓರ್ವ ರೋಗಿಯ ಮೂತ್ರ ಪರೀಕ್ಷೆಗೆ ಸುಮಾರು 20 ರಿಂದ 25 ವಿಧದ ಸೋಂಕು ನಿವಾರಕ ಬಳಸುತ್ತೇವೆ.

ಸುಮಾರು ಎಂಟು ವರ್ಷದ ಹಿಂದೆಲ್ಲಾ ಒಂದು ಮೂತ್ರಕೋಶದ ಸೋಂಕಿನ ಸದ್ರಿ ಪರೀಕ್ಷೆಯಲ್ಲಿ ಮೂರು-ನಾಲ್ಕು ಔಷಧಿಗಳು ಮಾತ್ರ ಪ್ರತಿರೋಧಕತೆಯನ್ನು ತೋರಿಸುತ್ತಿತ್ತು. ಆದರೆ ಇತ್ತೀಚಿನ ನಾಲ್ಕೈದು ವರ್ಷಗಳಲ್ಲಿ ಔಷಧಿ ಪ್ರತಿರೋಧಕ ಪ್ರಮಾಣ ಅಂದಿಗಿಂತ ನಾಲ್ಕು ಪಟ್ಟು ಹೆಚ್ಚಿದೆ. ಅಂದರೆ 12 ರಿಂದ 15 ವಿಧದ ಸೋಂಕು ನಿವಾರಕಗಳು ಪರಿಣಾಮ ಶೂನ್ಯವಾಗುತ್ತಿದೆ. ಇದು ಹೀಗೇ ಮುಂದುವರಿದರೆ ಯಾವುದೇ ವಿಧದ ಚಿಕ್ಕಪುಟ್ಟ ಸೋಂಕುಗಳೂ ಮದ್ದಿಲ್ಲದ ಖಾಯಿಲೆಗಳಾಗಿ ಪರಿಣಮಿಸುವ ದಿನ ದೂರವಿಲ್ಲ. ಸೋಂಕು ನಿವಾರಕಗಳನ್ನು ಇಂತಿಷ್ಟೇ ಪ್ರಮಾಣದಲ್ಲಿ, ಇಂತಿಷ್ಟು ದಿನ, ನಿಯಮಿತವಾಗಿ ಸೇವಿಸಬೇಕೆಂಬ ನಿಯಮಾವಳಿಯಿರುತ್ತದೆ. ಸಾಮಾನ್ಯವಾಗಿ ಯಾವುದೇ ಔಷಧಾಲಯಗಳವರು ಮೂರು ಮಾತ್ರೆ, ನಾಲ್ಕು ಮಾತ್ರೆ ಮಾತ್ರ ನೀಡುತ್ತಾರೆ. ಈ ರೀತಿ ಮಾಡುವುದರಿಂದ ಇವುಗಳನ್ನು ಸೇವಿಸಿದ ರೋಗಿಯ ದೇಹದೊಳಗಿನ ಸೂಕ್ಷ್ಮಾಣು ಜೀವಿ ಒಮ್ಮೆಗೆ ಪೆಟ್ಟು ತಿಂದು ಅದರ ಶಕ್ತಿ ಕುಂಠಿತಗೊಳ್ಳುತ್ತದಷ್ಟೆ.

ಆದರೆ ಸೋಂಕು ಉಂಟುಮಾಡುವ ಸೂಕ್ಷ್ಮಾಣುಜೀವಿ ಸಾಯುವುದಿಲ್ಲ. ಒಮ್ಮೆಗೆ ರೋಗಿಯ ಖಾಯಿಲೆ ಗುಣವಾಗುತ್ತದಾದರೂ ಸ್ವಲ್ಪದಿನದಲ್ಲೇ ಮತ್ತೆ ಮರುಕಳಿಸುತ್ತದೆ. ಒಂದು ಸೋಂಕು ನಿವಾರಕದ ಕೋರ್ಸ್ ಪೂರ್ತಿ ಮಾಡದ ರೋಗಿಗೆ ಪುನಃ ಖಾಯಿಲೆ ಮರುಕಳಿಸಿದಾಗ ಮೊದಲು ನೀಡಿದ ಸೋಂಕು ನಿವಾರಕವನ್ನು ಪುನಃ ನೀಡಿದರೆ ಖಾಯಿಲೆ ಗುಣವಾಗುವ ಸಾಧ್ಯತೆ ಕೆಲವು ಬಾರಿ ಕಡಿಮೆಯಿರುತ್ತದೆ. ಆಗ ಆತನಿಗೆ ಮುಂಚೆ ನೀಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದ ಬೇರೆ ಸೋಂಕು ನಿವಾರಕ ನೀಡಬೇಕಾಗುತ್ತದೆ. ಅರೆ ಪ್ರಮಾಣದ ಸೋಂಕು ನಿವಾರಕದಿಂದ ಪೆಟ್ಟು ತಿಂದ ಸೂಕ್ಷ್ಮಾಣುಜೀವಿ ಈ ಬಾರಿ ಸದ್ರಿ ಸೋಂಕು ನಿವಾರಕದೊಂದಿಗೆ ಹೋರಾಡಬಲ್ಲ ಪ್ರತಿರೋಧಕ ಶಕ್ತಿ ಪಡೆದಿರುತ್ತದೆ. ಇದು ಮುಂದುವರಿಯುತ್ತಾ ಮುಂದೆ ಒಂದೊಂದೇ ಸೋಂಕು ನಿವಾರಕದೊಂದಿಗೆ ಸೆಣಸಾಡಬಲ್ಲ ಪ್ರತಿರೋಧಕ ಶಕ್ತಿ ಪಡೆಯುತ್ತದೆ. ಸಂಬಂಧಪಟ್ಟ ಇಲಾಖೆಯು ಔಷಧಾಲಯಗಳೇ ಕ್ಲಿನಿಕ್/ಆಸ್ಪತ್ರೆ ಆಗುತ್ತಿರುವ ಇಂತಹ ಕೆಟ್ಟ ಬೆಳವಣಿಗೆಯನ್ನು ತಡೆಗಟ್ಟದಿದ್ದರೆ ಮುಂದೊಂದು ದಿನ ರೋಗಗ್ರಸ್ಥ ಸಮಾಜ ಸೃಷ್ಟಿಯಾಗುವ ಅಪಾಯ ತಪ್ಪಿದ್ದಲ್ಲ.

Writer - ಇಸ್ಮತ್ ಫಜೀರ್

contributor

Editor - ಇಸ್ಮತ್ ಫಜೀರ್

contributor

Similar News