‘ಧೋನಿಗಿಂತ ಸ್ಮಿತ್ ಬುದ್ದಿವಂತ ನಾಯಕ’

Update: 2017-05-20 05:09 GMT

 ಕೋಲ್ಕತಾ, ಮೇ 20: ಹತ್ತನೆ ಆವೃತ್ತಿಯ ಐಪಿಎಲ್ ಟೂರ್ನಿ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ರವಿವಾರ ಟ್ರೋಫಿ ಯಾರ ಮಡಿಲಿಗೆ ಸೇರಲಿದೆ ಎಂದು ಗೊತ್ತಾಗಲಿದೆ.

ಮಹಾರಾಷ್ಟ್ರದ ಎರಡು ತಂಡಗಳಾದ ಪುಣೆ ಸೂಪರ್‌ಜೈಂಟ್ ಹಾಗೂ ಮುಂಬೈ ಇಂಡಿಯನ್ಸ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದು, ಪುಣೆ ತಂಡದ ಮಾಲಕ ತನ್ನ ತಂಡದಲ್ಲಿ ಯಾರು ಶ್ರೇಷ್ಠರು ಎಂಬ ಬಗ್ಗೆ ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ. ಆರ್‌ಪಿಎಸ್ ಮಾಲಕ ಸಂಜೀವ್ ಗೊಯೆಂಕಾ ಪ್ರಕಾರ ಭಾರತ ಕಂಡ ಯಶಸ್ವಿ ನಾಯಕ ಎಂಎಸ್ ಧೋನಿಗಿಂತಲೂ ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್ ಮೆದುಳು ತುಂಬಾ ಚುರುಕಾಗಿದೆಯಂತೆ.

‘‘ಎಂಎಸ್ ಧೋನಿ ತುಂಬಾ ಬುದ್ದಿವಂತ ಆಟಗಾರ. ಅವರು ವಿಶ್ವದ ಶ್ರೇಷ್ಠ ವಿಕೆಟ್‌ಕೀಪರ್ ಪೈಕಿ ಒಬ್ಬರಾಗಿದ್ದಾರೆ. ಆದರೆ, ಧೋನಿಗಿಂತ ಸ್ಮಿತ್ ತುಂಬಾ ಬುದ್ದಿವಂತರು. ಸ್ಮಿತ್ ಈ ಬಾರಿ ನಮ್ಮ ತಂಡಕ್ಕೆ ಐಪಿಎಲ್ ಚಾಂಪಿಯನ್‌ಶಿಪ್‌ನ್ನು ಗೆದ್ದುಕೊಡುವುದು ನಿಶ್ಚಿತ’’ ಎಂದು ಗೊಯೆಂಕಾ ಹೇಳಿದ್ದಾರೆ.

ಈ ವರ್ಷದ ಐಪಿಎಲ್‌ನಲ್ಲಿ ಪುಣೆ ತಂಡದ ನಾಯಕ ಸ್ಟೀವ್ ಸ್ಮಿತ್ ಹಲವು ಸಂದರ್ಭದಲ್ಲಿ ಫೀಲ್ಡಿಂಗ್ ನಿಯೋಜಿಸುವಾಗ ಹಾಗೂ ರಣತಂತ್ರ ರೂಪಿಸುವಾಗ ವಿಕೆಟ್‌ಕೀಪರ್ ಧೋನಿಯ ಸಲಹೆ-ಸೂಚನೆಯನ್ನು ಪಡೆದಿದ್ದಾರೆ. ಸ್ಮಿತ್ ನಾಯಕತ್ವದ ಯಶಸ್ಸಿನ ಹಿಂದೆ ಧೋನಿಯ ನೆರವಿತ್ತು ಎಂದು ಪುಣೆ ತಂಡದ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅಭಿಪ್ರಾಯಪಟ್ಟಿದ್ದರು. ಆದರೆ, ತಂಡದ ಮಾಲಕ ಗೊಯೆಂಕಾ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.

‘‘ಕಠಿಣ ಪರಿಸ್ಥಿತಿಯಲ್ಲಿ ಸ್ಮಿತ್ ತೆಗೆದುಕೊಂಡಿರುವ ಕೆಲವು ನಿರ್ಧಾರ ನನಗೆ ನಂಬಲಸಾಧ್ಯವಾಗುತ್ತಿಲ್ಲ. ಸ್ಮಿತ್ ಒಮ್ಮೆ ಅನಾರೋಗ್ಯದಿಂದಾಗಿ ಪಂದ್ಯದಿಂದ ಹೊರಗುಳಿದಿದ್ದ ಸಂದರ್ಭದಲ್ಲಿ ತಂಡ ಹಿನ್ನಡೆ ಅನುಭವಿಸಿತ್ತು’’ ಎಂದು ಗೊಯೆಂಕಾ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News