ಮದುವೆಯ ರಾತ್ರಿ ಊಟಕ್ಕೆ ದುಡ್ಡು ಸಾಕಾಗಲಿಲ್ಲ, ಅದಕ್ಕೆ ಐಸ್ ಕ್ರೀಮ್ ತಿಂದೆವು : ನೂರುಲ್ ಇಸ್ಲಾಂ

Update: 2017-05-20 06:30 GMT

ರಾತ್ರಿ 9 ಗಂಟೆಯಾಗಿತ್ತು. ಎಲ್ಲಿಗೆ ಹೋಗುವುದೆಂದು ನಮಗೆ ತಿಳಿಯದಾಗಿತ್ತು. ನಮ್ಮ ಮದುವೆಯ ಉಡುಗೊರೆಯಾಗಿ ನಾನು ನೀಡಿದ್ದ ಕೆಂಪು ಸೀರೆಯನ್ನು ಆಕೆ ಉಟ್ಟಿದ್ದಳು. ಆ ಸೀರೆ ಹಾಗೂ ಸ್ವಲ್ಪ ಹೂವು ಖರೀದಿಸಿದ ನಂತರ ನನ್ನ ಕಿಸೆಯಲ್ಲಿ ಐವತ್ತು ಟಕಾ ಉಳಿದಿತ್ತು. ಆ ಹಣದಿಂದ ರಾತ್ರಿಯೂಟ ಖರೀದಿಸಲು ಸಾಧ್ಯವಿರಲಿಲ್ಲ. ಊಟದ ಬದಲು ನಾನು ಮತ್ತು ಝೊರ್ನ ಐಸ್ ಕ್ರೀಮ್ ತಿಂದೆವು.

ಆ ರಾತ್ರಿ ಎಲ್ಲಿ ಉಳಿದುಕೊಳ್ಳುವುದೆಂದು ನಮಗೆ ತಿಳಿದಿರಲಿಲ್ಲ. ಆ ಚಳಿಯ ರಾತ್ರಿಯಲ್ಲಿ ವೃದ್ಧೆಯೊಬ್ಬಳು ತನ್ನ ಗುಡಿಸಲಿನ ಬಳಿ ಬೆಂಕಿ ಕಾಯಿಸುತ್ತಾ ಕುಳಿತಿರುವುದನ್ನು ನೋಡಿದೆವು. ನಾವು ಒಬ್ಬರನ್ನೊಬ್ಬರ ಕೈ ಹಿಡಿದುಕೊಂಡು ಗಂಟೆಗಟ್ಟಲೆ ಅಲ್ಲಿ ಕುಳಿತೆವು.

ಮದುವೆಯಾಗಿ ಎಷ್ಟು ಸಮಯವಾಯಿತೆಂದು ಆಕೆ ನಮ್ಮನ್ನು ಕೇಳಿದಳು. ‘‘ಆರು ಗಂಟೆ’’ ಎಂದು ನಾವು ಹೇಳಿದೆವು. ಆ ಅಪರಿಚಿತ ವೃದ್ಧೆ ಆ ರಾತ್ರಿ ನಮ್ಮನ್ನು ಆಕೆಯ ಜತೆ ತಂಗಲು ಅವಕಾಶ ಮಾಡಿಕೊಟ್ಟಳು, ರಾತ್ರಿಯಿಡೀ ಎಚ್ಚರದಿಂದಿದ್ದು ವಿವಾಹದ ಬಗ್ಗೆ ನಮಗೆ ಉಪಯುಕ್ತ ಸಲಹೆಗಳನ್ನು ನೀಡಿದಳು. ಈ ನಡುವೆ ಝೋರ್ನ ನಿದ್ದೆಗೆ ಜಾರಿ ನನ್ನ ಭುಜಕ್ಕೊರಗಿದಳು.

ಸ್ವಲ್ಪ ಸಮಯದ ನಂತರ ಹಾಸಿಗೆಯ ಇನ್ನೊಂದು ತುದಿಯಲ್ಲಿ ಆ ವೃದ್ಧೆ ಕುಳಿತುಕೊಂಡೇ ಗೊರಕೆ ಹೊಡೆಯಲಾರಂಭಿಸಿದಳು. ಮರು ದಿನ ಏನು ಮಾಡುವುದೆಂದು ತಿಳಿಯದೆ ಮದುವೆಯ ರಾತ್ರಿ ನಾನು ಇಬ್ಬರು ಮಹಿಳೆಯರೊಂದಿಗೆ ನಿದ್ದೆಯಿಲ್ಲದೆ ಕಳೆದೆ.

ಮದುವೆಯಾಗಿ ಏಳು ವರ್ಷಗಳನ್ನು ಅನಿಶ್ಚಿತತೆಯ ನಡುವೆ ಆದರೆ ಬಹಳಷ್ಟು ಪ್ರೀತಿಯೊಂದಿಗೆ ಹೇಗೆ ಕಳೆದೆವೆಂದೇ ನಮಗೆ ತಿಳಿಯದು. ನಾವು ಪ್ರತ್ಯೇಕಗೊಂಡರೆ ಮಾತ್ರ ನಮ್ಮನ್ನು ಬರಮಾಡಿಕೊಳ್ಳುವುದಾಗಿ ನಮ್ಮ ಹೆತ್ತವರು ಹೇಳಿದ್ದರು. ಕಳೆದ ಈದ್ ದಿನ ನನಗೆ ಅಪಘಾತವಾಗಿ ಮನೆಗೆ ಆಹಾರ ಕೊಂಡು ಹೋಗಲು ಸಾಧ್ಯವಾಗಲಿಲ್ಲ. ನನ್ನ ಪತ್ನಿ ನಮಗಾಗಿ ಬನ್ ಖರೀದಿಸಿದಳು. ನಾವು ನಾಲ್ವರೂ ಬನ್ ತಿಂದು ನೀರು ಕುಡಿದೆವು.

ಆ ದಿನ ಒಮ್ಮೆಗೇ ನನ್ನ ಹಿರಿಯ ಮಗ ನನ್ನ ಕಿಸೆಗೆ ಕೈಹಾಕಿ ನನ್ನ ಕಿಸೆ ಖಾಲಿಯಾಗಿದೆ ಎಂದು ಆಶ್ಚರ್ಯದಿಂದ ತನ್ನ ತಾಯಿಗೆ ಹೇಳಿದ. ನನಗೆ ತುಂಬಾ ನಾಚಿಕೆಯಾಯಿತು. ಇದನ್ನು ನೋಡಿದ ಝೊರ್ನ, ನಿನ್ನ ತಂದೆ ಕಿಸೆಯಲ್ಲಿ ಕೇವಲ ಹಣ ಇಡುವುದಿಲ್ಲ, ಅಲ್ಲಿ ಪ್ರೀತಿಯನ್ನೂ ಇಡುತ್ತಾನೆ ಎಂದು ಆತನಿಗೆ ಹೇಳಿದಳು. ಹಣದ ಬದಲು ಪ್ರೀತಿಯನ್ನು ನೀಡಲು ಆತನಿಗೆ ನಾನು ಅಸಂಖ್ಯಾತ ಮುತ್ತುಗಳನ್ನು ನೀಡಬೇಕಾಯಿತು.

ಕೆಲ ದಿನಗಳ ಹಿಂದೆ ನಮ್ಮ ನೆರೆಮನೆಯವರೊಬ್ಬರು ನಮ್ಮ ಮಕ್ಕಳ ಮೇಲೆ ಕಿಡಿಕಾರುತ್ತಾ ನಾವೆಷ್ಟು ಬಡವರಾಗಿದ್ದೇವೆ ಹಾಗೂ ನಮ್ಮ ಕಿಸೆಗಳೆಷ್ಟು ಖಾಲಿಯಾಗಿವೆ ಎಂದರು. ಇದನ್ನು ಕೇಳಿದ ನನ್ನ ಮಗ ‘‘ಅಬ್ಬಾ ಬಳಿ ಪ್ರೀತಿಯಿದೆ,’’ ಎಂದು ಬಿಟ್ಟ. ನೆರೆಮನೆಯವರಲ್ಲಿ ಕೋಪಗೊಳ್ಳುವ ಬದಲು ನಾನು ಮತ್ತು ನನ್ನ ಪತ್ನಿ ಜೋರಾಗಿ ನಕ್ಕುಬಿಟ್ಟೆವು. ತಮ್ಮ ಅಜ್ಜ ಅಜ್ಜಿ ತಮ್ಮನ್ನು ನೋಡಲು ಏಕೆ ಬರುತ್ತಿಲ್ಲವೆಂದು ಕೆಲವೊಮ್ಮೆ ನನ್ನ ಮಕ್ಕಳು ನಮ್ಮಲ್ಲಿ ಕೇಳುತ್ತಾರೆ.

ನಮ್ಮ ಹೆತ್ತವರು ನಮ್ಮ ಮೇಲೆ ಕೋಪದಿಂದಿದ್ದಾರೆ ಹಾಗೂ ನಮ್ಮನ್ನು ತುಂಬಾ ಪ್ರೀತಿಸುವವರು ನಮ್ಮ ಮೇಲೆ ತುಂಬಾ ಸಿಟ್ಟಾಗುತ್ತಾರೆ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟೆ. ಒಂದು ದಿನ ಅವರ ಅಜ್ಜ ಅಜ್ಜಿ ನಮ್ಮನ್ನು ನೋಡಲು ಖಂಡಿತಾ ಬರುತ್ತಾರೆ, ಏಕೆಂದರೆ ಅಂತಿಮವಾಗಿ ಕೇವಲ ಪ್ರೀತಿ ಗೆಲ್ಲುತ್ತದೆ.

- ನೂರ್ ಇಸ್ಲಾಂ

Full View

Writer - ಜಿಎಂಬಿ ಆಕಾಶ್

contributor

Editor - ಜಿಎಂಬಿ ಆಕಾಶ್

contributor

Similar News