ಭಾರತ ಮೂಲದ ಇಂಜಿನಿಯರ್ ವಿದ್ಯಾರ್ಥಿ ಅಮೆರಿಕದಲ್ಲಿ ಶವವಾಗಿ ಪತ್ತೆ

Update: 2017-05-20 07:49 GMT

 ನ್ಯೂಯಾರ್ಕ್, ಮೇ 20: ಕಳೆದ ವಾರ ನಾಪತ್ತೆಯಾಗಿದ್ದ ಕಾರ್ನೆಲ್ ವಿಶ್ವವಿದ್ಯಾನಿಲಯದ ಇಂಜಿನಿಯರ್ ವಿದ್ಯಾರ್ಥಿ 20ರ ಹರೆಯದ ಅಲಾಪ್ ನರಸೀಪುರ ಶವವಾಗಿ ಪತ್ತೆಯಾಗಿದ್ದಾರೆ.

ನರಸೀಪುರ ಅವರು ಕಾರ್ನೆಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಿರಿಯ ಎಲೆಕ್ಟ್ರಿಕ್ ಇಂಜಿನಿಯರ್ ವಿದ್ಯಾರ್ಥಿಯಾಗಿದ್ದರು. ಕಳೆದ ಬುಧವಾರದಿಂದ ನಾಪತ್ತೆಯಾಗಿದ್ದರು.

ಕಾರ್ನೆಲ್ ವಿವಿಯ ಪೊಲೀಸರು ನ್ಯೂಯಾರ್ಕ್ ರಾಜ್ಯ ಪೊಲೀಸರು, ಇಥಾಕ ಪೊಲೀಸ್ ಇಲಾಖೆ ಹಾಗೂ ಇಥಾಕ ಅಗ್ನಿಶಾಮಕ ದಳದ ನೆರವಿನಿಂದ ಇಥಾಕ ಫಾಲ್ಸ್‌ನ ಸಮೀಪ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ.

ಕಾರ್ನೆಲ್ ವಿವಿ ಪೊಲೀಸರು ನರಸೀಪುರ ಮೃತದೇಹವನ್ನು ಗುರುತಿಸಿದ್ದು, ನರಸೀಪುರ ಸಾವಿಗೆ ಕಾರಣವೇನೆಂಬ ಬಗ್ಗೆ ತನಿಖೆ ಮುಂದುವರಿಯುತ್ತಿದೆ. ಯಾವುದೇ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಐದಡಿ ಆರು ಇಂಚು ಎತ್ತರದ ಕಪ್ಪುವರ್ಣದ ನರಸೀಪುರ ಮೇ 17ರ ಬೆಳಗ್ಗೆ ಕಾರ್ನೆಲ್ ವಿವಿ ಕ್ಯಾಂಪಸ್‌ನಲ್ಲಿದ್ದರು. ಆಗ ಅವರು ಶಾರ್ಟ್ಸ್ ಹಾಗೂ ಶರ್ಟ್‌ನ್ನು ಧರಿಸಿದ್ದರು. ನೀಲಿ ಸಾಕ್ಸ್‌ನೊಂದಿಗೆ ಚರ್ಮದ ಸ್ಯಾಂಡಲ್ಸ್‌ನ್ನು ಧರಿಸಿದ್ದರು.

"ನರಸೀಪುರ ಓರ್ವ ಉತ್ತಮ ವಿದ್ಯಾರ್ಥಿಯಾಗಿದ್ದು, ಈ ವರ್ಷದ ಡಿಸೆಂಬರ್‌ನಲ್ಲಿ ತನ್ನ ಪದವಿಯನ್ನು ಮುಗಿಸಬೇಕಾಗಿತ್ತು. ತುಂಬಾ ಚಟುವಟಿಕೆಯಿಂದಿದ್ದ ಆತನಿಗೆ ಫೋಟೊಗಳನ್ನು ತೆಗೆಯುವ ಹವ್ಯಾಸವಿದೆ. ಕಾರ್ನೆಲ್ ವಿವಿಯಲ್ಲಿ ಇಂಜಿನಿಯರಿಂಗ್‌ನಲ್ಲಿ ಮಾಸ್ಟರ್ ಡಿಗ್ರಿ ಪಡೆಯುವ ಯೋಜನೆ ಹಾಕಿಕೊಂಡಿದ್ದ'' ಎಂದು ವಿದ್ಯಾರ್ಥಿ ಸಂಘಟನೆಯ ಉಪಾಧ್ಯಕ್ಷ ರಿಯನ್ ಲಾಂಬರ್ಡಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News