ಮೇ 21: ಬಿಬಿಎಂಪಿ ಗ್ರೀನ್ ಆ್ಯಪ್ ಬಿಡುಗಡೆ
ಬೆಂಗಳೂರು, ಮೇ 20: ಬೆಂಗಳೂರು ನಗರವನ್ನು ಹಸಿರು ಮಯವನ್ನಾಗಿಸಲು ಬಿಬಿಎಂಪಿ ತಯಾರಿಸಿರುವ ಬಿಬಿಎಂಪಿ ಗ್ರೀನ್ ಆ್ಯಪ್‌ನ್ನು ಮೇ 21ರಂದು ನಗರದ ಕಬ್ಬನ್ ಉದ್ಯಾನವನದಲ್ಲಿ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಬಿಡುಗಡೆ ಮಾಡಲಿದ್ದಾರೆ ಎಂದು ಮೇಯರ್ ಪದ್ಮಾವತಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಅರಣ್ಯ ಘಟಕದ ವತಿಯಿಂದ 2017-18ನೆ ಸಾಲಿನಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಸಸಿಗಳನ್ನು ವಿತರಿಸುವ ಸಲುವಾಗಿ ಈಗಾಗಲೇ ಬಿಬಿಎಂಪಿಯ 8 ವಲಯಗಳಲ್ಲಿ 1 ಲಕ್ಷ ಸಸಿಗಳನ್ನು ನೆಡಲಾಗಿದೆ.
ಯಲಹಂಕ, ರಾಜರಾಜೇಶ್ವರಿ ನಗರ ಹಾಗೂ ಬೊಮ್ಮನಹಳ್ಳಿ ವಲಯಗಳಲ್ಲಿ ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಸಸಿಗಳು ಲಭ್ಯವಿದ್ದು, ಅವುಗಳನ್ನು ಗ್ರೀನ್ ಆ್ಯಪ್ ಮೂಲಕ ಸಾರ್ವಜನಿಕರಿಗೆ ವಿತರಿಸಲಾಗುವುದು ಎಂದು ತಿಳಿಸಿದರು.
198 ವಾರ್ಡ್‌ಗಳಲ್ಲಿ ಪ್ರತಿ ವಾರ್ಡ್‌ಗೆ ಒಂದು ಉದ್ಯಾನವನ್ನು ಆಯ್ಕೆ ಮಾಡಿಕೊಂಡು ಸಸಿಗಳನ್ನು ನರ್ಸರಿಯಿಂದ ಪ್ರತಿ ವಾರ್ಡ್‌ಗಳಿಗೆ ಪೂರೈಸಿ ಸಾರ್ವಜನಿಕರಿಗೆ ವಿತರಿಸಲಾಗುವುದು. ಶಾಲಾ ಆವರಣ, ರಸ್ತೆ ಬದಿಗಳು, ಖಾಲಿ ಸ್ಥಳಗಳಲ್ಲಿ ಒಂದು ಲಕ್ಷ ಸಸಿಗಳನ್ನು ನೆಟ್ಟು ಬೆಳೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಸಸಿಗಳ ರಕ್ಷಣೆಗೆ ಅದರ ಸುತ್ತಲು ಬೊಂಬು ಕವಚಗಳನ್ನು ಅಳವಡಿಸಿ ರಕ್ಷಣೆ ಮಾಡಲಾಗುವುದು. ಹೊಂಗೆ, ಮಹಾಗನಿ, ಕಾಡುಬಾದಾಮಿ, ತಪಸಿ, ನೇರಳೆ, ನೆಲ್ಲಿ, ಬೇವು ಸೇರದಂತೆ ಹಲವು ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಗುವುದು ಎಂದು ಅವರು ತಿಳಿಸಿದರು.
ಹೊಸದಾಗಿ ಮೈಲಸಂದ್ರ (ಕೆಂಗೇರಿ) ಕೆರೆಯ ಅಂಗಳ, ಎಚ್. ಗೊಲ್ಲಹಳ್ಳಿ, ನೈಸ್ ರಸ್ತೆ ಕೆರೆ ಅಂಗಳ, ಯಲಹಂಕ ಕೆರೆ ಅಂಗಳ, ರಾಚೇನಹಳ್ಳಿ ಕೆರೆ ಅಂಗಳದಲ್ಲಿ ಹೊಸದಾಗಿ ಸಸಿಗಳನ್ನು ನೆಟ್ಟು ಅಭಿವೃದ್ಧಿಪಡಿಸಲಾಗುವುದು. ಈ ಸಸ್ಯ ಕ್ಷೇತ್ರದಲ್ಲಿ ಕೊಳವೆ ಬಾವಿ, ಪೈಪ್‌ಲೈನ್ ಅಳವಡಿಕೆ, ತಂತಿಬೇಲೆ ಅಳವಡಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಈ ವೇಳೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ಬಿಬಿಎಂಪಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಪ್ಪೂರಾವ್ ಮತ್ತಿತರರು ಉಪಸ್ಥಿತರಿದ್ದರು.