ದಲಿತರು ಪ್ರಧಾನಿ-ಸಿಎಂ ಆಗಲಿಲ್ಲ ಎಂಬ ನೋವಿದೆ: ಎಚ್.ಆಂಜನೇಯ
ಬೆಂಗಳೂರು, ಮೇ 20: ದಲಿತ ಸಮುದಾಯಕ್ಕೆ ಸೇರಿದಂತಹವರು ದೇಶದ ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿಲ್ಲ ಎಂಬ ನೋವು ತಮಗಿದೆ.
ನಮ್ಮ ದುಃಖ, ನೋವನ್ನು ಕೇಳುವವರು ಯಾರು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಪ್ರಶ್ನಿಸಿದ್ದಾರೆ. ಶನಿವಾರ ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್‌ಗೆ ಮತ ನೀಡಿ, ದಲಿತರು ಮುಖ್ಯಮಂತ್ರಿ ಆಗಬೇಕೆಂಬ ಅಭಿಪ್ರಾಯ ವ್ಯಕ್ತವಾದರೆ, ಅದನ್ನು ಆಧರಿಸಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ದಲಿತ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬಹುದಾಗಿದೆ ಎಂದರು.
ಬ್ರಿಟೀಷರ ಗುಂಡಿಗೆ ಎದೆಕೊಟ್ಟವರು ನಾವು, ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದವರು ನಾವು. ದೇಶಕ್ಕೆ ಅನ್ನಕೊಟ್ಟ ಶ್ರಮಜೀವಿಗಳೂ ನಾವೇ. ಆದರೆ, ಸ್ವಾತಂತ್ರ ಭಾರತದ ಇತಿಹಾಸದಲ್ಲಿ ಈವರೆಗೆ ದಲಿತರೊಬ್ಬರು ಪ್ರಧಾನಮಂತ್ರಿ ಆಗಲು ಸಾಧ್ಯವಾಗಿಲ್ಲ. ಬಾಬೂಜಗ ಜೀವನ ರಾಮ್‌ಗೆ ಅಂತಹ ಅವಕಾಶ ಒದಗಿ ಬಂದಿತ್ತು. ಬಹುಮತವು ಇತ್ತು. ಆದರೆ ಅಸ್ಪೃಶ್ಯರು ಎಂಬ ಕಾರಣಕ್ಕೆ ಕೊಳಕು ಮನಸ್ಸಿನವರು ಆ ಅವಕಾಶವನ್ನು ಕೊಡಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಉಪ ಪ್ರಧಾನಿಯಾದ ಬಾಬು ಜಗಜೀವನ್‌ರಾಮ್‌ಗೆ ಆಗಿನ ರಾಷ್ಟ್ರಪತಿಗಳು ಪ್ರಮಾಣ ವಚನ ಕೂಡ ಬೋಧಿಸಲಿಲ್ಲ. ಈವೆಲ್ಲ ಅನ್ಯಾಯ, ತಾರತಮ್ಯಗಳನ್ನು ನೆನಪು ಮಾಡಿಕೊಂಡರೆ ಕಣ್ಣಲ್ಲಿ ನೀರಲ್ಲ, ರಕ್ತ ಬರುತ್ತದೆ ಎಂದು ಆಂಜನೇಯ ನುಡಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿ, ನಮ್ಮ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ, ದಲಿತರೆ ಮುಖ್ಯಮಂತ್ರಿಯಾಗಲಿ. ಕಾಂಗ್ರೆಸ್ ಪಕ್ಷವು ದಲಿತರ ಕೈಯಲ್ಲಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಡಾ.ಜಿ.ಪರಮೇಶ್ವರ್ ಹಾಗೂ ಪ್ರಮುಖ ಖಾತೆಗಳ ಸಚಿವರು ದಲಿತರೆ ಆಗಿದ್ದಾರೆ ಎಂದು ಅವರು ಹೇಳಿದರು.
ದಲಿತ ಎಂಬುದು ಜಾತಿಯಲ್ಲ. ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಸೇರಿದಂತೆ ಎಲ್ಲ ಜನಾಂಗಗಳಲ್ಲಿ ಇರುವಂತಹ ಬಡವರು, ಅವಕಾಶ ವಂಚಿತ, ಶೋಷಿತರೆಲ್ಲರೂ ದಲಿತರೆ. ರಾಜ್ಯದಲ್ಲಿರುವುದು ದಲಿತರು ಹಾಗೂ ಶೋಷಿತರ ಕಲ್ಯಾಣದ ಪರವಾಗಿರುವ ಸರಕಾರ ಎಂದು ಆಂಜನೇಯ ತಿಳಿಸಿದರು.
ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕೆಂದು ಹಲವಾರು ಚರ್ಚೆಗಳು ನಡೆಯುತ್ತಿವೆ. 2008ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲೆ ಕಾಂಗ್ರೆಸ್ ಚುನಾವಣೆಯನ್ನು ಎದುರಿಸಿತು. ಆದರೆ, ನಮ್ಮ ಪಕ್ಷಕ್ಕೆ ಬಹುಮತ ಬಾರದ ಕಾರಣ, ಅವರು ಮುಖ್ಯಮಂತ್ರಿ ಆಗಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.