ರೌಡಿಶೀಟರ್ ಹತ್ಯೆ
ಬೆಂಗಳೂರು, ಮೇ 21: ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ರೌಡಿಶೀಟರ್‌ನನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆಗೈದಿರುವ ಘಟನೆ ಇಲ್ಲಿನ ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಕೆಪಿ ಅಗ್ರಹಾರದ ರೌಡಿಶೀಟರ್ ಅರುಣ್ ಯಾನೆ ವಾಲೆ(26) ಎಂಬಾತನನ್ನು ಮೂವರು ಕೊಲೆಗೈದು ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ: ಗಂಗೊಂಡನಹಳ್ಳಿ 1ನೆ ಕ್ರಾಸ್‌ನಲ್ಲಿ ವಾಸಿಸುತ್ತಿದ್ದ ಅರುಣ್ ಶನಿವಾರ ಸಂಜೆ 4 ರಿಂದ ಗಂಗೊಂಡನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಬಾರ್‌ನಲ್ಲಿ ಸ್ನೇಹಿತರೊಂದಿಗೆ ಮದ್ಯ ಸೇವಿಸಿದ್ದು, ಮದ್ಯಕ್ಕೆ ಖರ್ಚು ಮಾಡಿದ್ದ 5 ಸಾವಿರ ರೂ. ನೀಡುವ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳ ಆರಂಭವಾಗಿ ಕೋಪಕ್ಕೆ ತಿರುಗಿದ್ದು, ಹಣ ನೀಡಲು ನಿರಾಕರಿಸಿದ ಅರುಣ್ ಮೇಲೆ ಮುಗಿ ಬಿದ್ದ ಮೂವರ ತಂಡ ಗಂಭೀರವಾಗಿ ಹಲ್ಲೆ ನಡೆಸಿದ್ದು ಇದರಿಂದ ಅರುಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.