ಬಿಬಿಎಂಪಿ ಮೈತ್ರಿ ಕುರಿತು ಶೀಘ್ರವೆ ತೀರ್ಮಾನ: ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಮೇ 21: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರೆಸಬೇಕೆ ಅಥವಾ ಬೇಡವೆ ಎಂಬುದರ ಕುರಿತು ಮುಂದಿನ ಅವಧಿಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ರವಿವಾರ ಬೆಂಗಳೂರು ಪ್ರೆಸ್‌ಕ್ಲಬ್ ಹಾಗೂ ವರದಿಗಾರರ ಕೂಟದ ವತಿಯಿಂದ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಬಿಎಂಪಿಯಲ್ಲಿ ಕಾಂಗ್ರೆಸ್ ಮೈತ್ರಿ ಧರ್ಮವನ್ನು ಪಾಲಿಸುತ್ತಿಲ್ಲ. ಜೆಡಿಎಸ್‌ನ ಅಧಿಕಾರವನ್ನು ಮೊಟಕುಗೊಳಿಸುತ್ತಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು.
ರಾಜರಾಜೇಶ್ವರಿ ನಗರದ ಲಗ್ಗೆರೆ ವಾರ್ಡ್‌ನ ಬಿಬಿಎಂಪಿ ಜೆಡಿಎಸ್ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಮೇಲೆ ಕಾಂಗ್ರೆಸ್ ಶಾಸಕ ಮುನಿರತ್ನ ಬೆಂಬಲಿಗರು ಹಲ್ಲೆ ಮಾಡಿರುವುದನ್ನು ನಾವು ಗಮನದಲ್ಲಿಟ್ಟುಕೊಂಡಿದ್ದೇವೆ. ಪ್ರಸ್ತುತ ಇರುವ ಮೇಯರ್ ಅಧಿಕಾರವಧಿಯು ನಾಲ್ಕೈದು ತಿಂಗಳಿದೆ. ಈ ಹಂತದಲ್ಲಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವಷ್ಟು ಸಂಖ್ಯಾಬಲ ನಮ್ಮಲ್ಲಿಲ್ಲ ಎಂದು ಅವರು ಹೇಳಿದರು.
ಮುಂದಿನ ಮೇಯರ್-ಉಪಮೇಯರ್ ಚುನಾವಣೆಗೆ ನಮ್ಮ ನಿಲುವನ್ನು ಪರಿಶೀಲಿಸುತ್ತೇವೆ. ಕಾಂಗ್ರೆಸ್ ಸರಿಯಾದ ನಿರ್ಧಾರ ಕೈಗೊಳ್ಳದಿದ್ದರೆ, ಕಾಂಗ್ರೆಸ್‌ಗೆ ನೀಡಿರುವ ಬೆಂಬಲವನ್ನು ಹಿಂಪಡೆಯಬೇಕಾಗುತ್ತದೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ತಿರುಪತಿ ಟ್ರಸ್ಟ್‌ನಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಕೋಟ್ಯಂತರ ರೂ. ಅವ್ಯವಹಾರ ಮಾಡಿದ್ದ ವ್ಯಕ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಕಾನೂನು ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿರುವ ಉದ್ದೇಶವೇನು. ರಾಜ್ಯದಲ್ಲಿ ಇವರಿಗಿಂತ ಉತ್ತಮ ವ್ಯಕ್ತಿ ಬೇರೆ ಯಾರೂ ಸಿಗಲಿಲ್ಲವೆ ಎಂದು ಪ್ರಶ್ನಿಸಿದ ಅವರು, ರಾಜ್ಯದ ಹಿಂದಿನ ರಾಜ್ಯಪಾಲರು ಬಿಜೆಪಿ ಸರಕಾರದ ಭ್ರಷ್ಟಾಚಾರವನ್ನು ಪತ್ತೆ ಹಚ್ಚಿ ಹಣ ವಸೂಲಿ ಮಾಡಲು ಈ ವ್ಯಕ್ತಿಯನ್ನು ಸಲಹೆಗಾರ ರನ್ನಾಗಿಟ್ಟುಕೊಂಡಿದ್ದರು ಎಂದು ಗಂಭೀರ ಆರೋಪ ಮಾಡಿದರು.