ಕಾಂಗ್ರೆಸ್‌ನಲ್ಲಿ ಅರ್ಹ ಮುಸ್ಲಿಮ್ ನಾಯಕರೇ ಇಲ್ಲವೇ?

Update: 2017-05-21 18:34 GMT

ಮಾನ್ಯರೆ,

ಕರ್ನಾಟಕದಲ್ಲಿ ದಲಿತರು ಮುಖ್ಯಮಂತ್ರಿಯಾಗಬೇಕು ಎಂಬ ಕೂಗು ಇಂದು ನಿನ್ನೆಯದಲ್ಲ. ಈ ಕೂಗಿಗೆ ಅರ್ಥವೂ ಇದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರಾಗಿದ್ದರೂ ಮುಸ್ಲಿಮರು ಇಂತಹ ಒಂದು ಬೇಡಿಕೆಯನ್ನು ರಾಜ್ಯದಲ್ಲಿ ಯಾಕೆ ಎತ್ತುತ್ತಿಲ್ಲ ಎನ್ನುವ ಪ್ರಶ್ನೆ ಮಹತ್ವದ್ದಾಗಿದೆ. ಮುಸ್ಲಿಮರು ತಲೆತಲಾಂತರಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ನೀಡುತ್ತಾ ಬಂದಿದ್ದಾರಾದರೂ, ವಿಧಾನಸಭೆಯಲ್ಲಿ ಅವರ ಪ್ರಾತಿನಿಧ್ಯ ಇಳಿಯುತ್ತಾ ಬಂದಿದೆ.

ಅತ್ಯುನ್ನತ ನಾಯಕತ್ವಕ್ಕೆ ಏರುವ ಸಾಮರ್ಥ್ಯವಿರುವ ಮುಸ್ಲಿಮ್ ಮುಖಂಡರನ್ನು ಕಾಂಗ್ರೆಸ್‌ನ ವರಿಷ್ಠರು ಉಪಾಯದಿಂದ ಬದಿಗೆ ಸರಿಸುತ್ತಾ, ದುರ್ಬಲ ನಾಯಕರನ್ನು ಅಥವಾ ಹಿಂಬಾಲಕರನ್ನು ಮಾತ್ರ ಪೋಷಿಸುತ್ತಾ ಬರುತ್ತಿದ್ದಾರೆ. ಪ್ರತಿಷ್ಠಿತ ನಾಯಕರಿದ್ದರೂ ಅವರಿಗೆ ಟಿಕೆಟ್ ನೀಡುವ ಸಂದರ್ಭದಲ್ಲಿ ಗೆಲ್ಲಲಾಗದ ಕ್ಷೇತ್ರವನ್ನೇ ಕೊಡಲಾಗುತ್ತದೆ ಅಥವಾ ಇನ್ನೊಬ್ಬ ಪ್ರಬಲ ಮುಸ್ಲಿಮ್ ಅಭ್ಯರ್ಥಿಯ ಎದುರು ಕಣಕ್ಕಿಳಿಸಿ ಇಬ್ಬರನ್ನೂ ಸೋಲಿಸುವ ಸಂಚು ಮಾಡುತ್ತಾ ಬಂದಿದ್ದಾರೆ ಕಾಂಗ್ರೆಸ್ ವರಿಷ್ಠರು. ಈ ಹಿಂದೆ ಜನಾರ್ದನ ಪೂಜಾರಿಯವರು ಇಂತಹದೇ ತಂತ್ರ ಮಾಡಿ ದಿವಂಗತ ಬಿ.ಎ.ಉಮರಬ್ಬ ಅವರಿಗೆ ಟಿಕೆಟ್ ತಪ್ಪಿಸಿದ್ದರು.

ದುರ್ಬಲ ನಾಯಕನಿಗೆ ಟಿಕೆಟ್ ಕೊಟ್ಟು ತಮ್ಮ ರಾಜಕೀಯ ಬೇಳೆ ಬೇಯಿಸಲು ನೋಡಿದರು. ಆದರೆ ಅದರ ಫಲವನ್ನು ಜನಾರ್ದನ ಪೂಜಾರಿಯವರು ಇಂದಿಗೂ ಉಣ್ಣುತ್ತಿದ್ದಾರೆ.ಆಸ್ಕರ್‌ರಂತಹ ನಾಯಕರಿಗೆ ಸುಲಭದಲ್ಲಿ ರಾಜ್ಯಸಭೆಯ ಸ್ಥಾನ ಸಿಗುತ್ತದೆ. ಇದೇ ಸಂದರ್ಭದಲ್ಲಿ ಮುಸ್ಲಿಮರು ಚುನಾವಣೆಯಲ್ಲಿ ಸೋತರೆ ಅವರಿಗೆ ರಾಜ್ಯಸಭೆ, ವಿಧಾನಪರಿಷತ್ ಸ್ಥಾನ ಸಿಗುವುದು ಅಪರೂಪ. ಇಂದು ಕಾಂಗ್ರೆಸ್‌ನಲ್ಲಿರುವ ಮುಸ್ಲಿಮ್ ನಾಯಕತ್ವವೇ ಕೀಳರಿಮೆಯಿಂದ ನರಳುತ್ತಿದೆ. ಯಾರಿಗೂ ‘ಮುಖ್ಯಮಂತ್ರಿ ಸ್ಥಾನ’ವನ್ನು ಕೇಳುವಂತಹ ಧೈರ್ಯವಿಲ್ಲದಂತಾಗಿದೆ. ಸಿಕ್ಕಿದ ಸ್ಥಾನದಲ್ಲಿ ತೃಪ್ತಿ ಪಟ್ಟುಕೊಳ್ಳುತ್ತಿದ್ದಾರೆ.

ಸರಿ. ಮುಖ್ಯಮಂತ್ರಿ ಸ್ಥಾನ ಬೇಡ. ಕನಿಷ್ಠ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನಾದರೂ ಯಾಕೆ ಮುಸ್ಲಿಮರು ಕೇಳಬಾರದು? ಅಷ್ಟು ಅರ್ಹತೆಯಿರುವ ಮುಸ್ಲಿಮ್ ನಾಯಕರೂ ಕಾಂಗ್ರೆಸ್‌ನಲ್ಲಿ ಇಲ್ಲವೇ? ಅಥವಾ ಅವರನ್ನು ನಿಕೃಷ್ಟರು ಎಂದು ಕಾಂಗ್ರೆಸ್ ವರಿಷ್ಠರು ಗುರುತಿಸಿದ್ದಾರೆಯೇ? ಮುಸ್ಲಿಮರನ್ನು ಕಾಂಗ್ರೆಸ್ ಪಕ್ಷ ಸಮರ್ಥವಾಗಿ ಪ್ರತಿನಿಧಿಸದೇ ಇದ್ದರೆ, ಮುಂದೊಂದು ದಿನ ದಲಿತರು-ಮುಸ್ಲಿಮರು-ಹಿಂದುಳಿದವರ್ಗದವರು ಜೊತೆಯಾಗಿ ತಮ್ಮದೇ ಪಕ್ಷ ಕಟ್ಟಿಕೊಂಡು ಈ ನಾಡನ್ನು ಆಳುವುದೇ ಹೆಚ್ಚು ಒಳ್ಳೆಯದಲ್ಲವೇ?

Writer - -ಸಂಜೀವ ಉಳೆಪಾಡಿ, ಉಳ್ಳಾಲ

contributor

Editor - -ಸಂಜೀವ ಉಳೆಪಾಡಿ, ಉಳ್ಳಾಲ

contributor

Similar News