ಕೇಜ್ರಿವಾಲ್ ವಿರುದ್ಧ ಇನ್ನೊಂದು 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಜೇಟ್ಲಿ

Update: 2017-05-22 07:56 GMT

ನವದೆಹಲಿ, ಮೇ. 22 : ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಇನ್ನೊಂದು 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಕೇಜ್ರಿವಾಲ್ ಅವರ ವಕೀಲರಾದ ರಾಮ್ ಜೇಠ್ಮಲಾನಿ ಕಳೆದ ವಾರ ನ್ಯಾಯಾಲಯದಲ್ಲಿ ಜೇಟ್ಲಿ ಅವರನ್ನು ‘ಕ್ರುಕ್’ (ವಂಚಕ) ಎಂದು ಸಂಬೋಧಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಡಿಡಿಸಿಎ ಪ್ರಕರಣ ಸಂಬಂಧಿಸಿದಂತೆ ಜೇಟ್ಲಿ ದಾಖಲಿಸಿದ್ದ ಮಾನನಷ್ಟ ಪ್ರಕರಣದ ವಿಚಾರಣೆ ಕಳೆದ ಬುಧವಾರ ನಡೆಯುತ್ತಿದ್ದಾಗ ಜೇಠ್ಮಲಾನಿ ಅವರು ಮೋದಿ ಸರಕಾರದ ಹಿರಿಯ ಸಚಿವರಾಗಿರುವ ಜೇಟ್ಲಿಯನ್ನು ‘ಕ್ರುಕ್’ ಎಂದಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ತಮ್ಮ ಕಕ್ಷಿಗಾರ ಕೇಜ್ರಿವಾಲ್ ಅವರ ಅಣತಿ ಮೇರೆಗೆ ಜೇಠ್ಮಲಾನಿ ತಮ್ಮನ್ನು ‘ಕ್ರುಕ್’ ಎಂದಿದ್ದರೆಂದು ಜೇಟ್ಲಿ ಆರೋಪಿಸಿದ್ದರು. ತಾವು ಮಾನನಷ್ಟ ಮೊತ್ತವನ್ನು ರೂ 10 ಕೋಟಿಗೆ ಏರಿಸುವುದಾಗಿಯೂ ಈ ಸಂದರ್ಭ ಜೇಟ್ಲಿ ಬೆದರಿಸಿದ್ದರು.

ಜೇಟ್ಲಿ ಅವರು ಜನರನ್ನು ವಂಚಿಸುತ್ತಿದ್ದಾರೆ ಹಾಗೂ ತಮ್ಮ ಅಪರಾಧ ಹಾಗೂ ವಂಚನೆಯನ್ನು ಮುಚ್ಚಿಟ್ಟಿದ್ದಾರೆ, ಎಂದು ಇದಕ್ಕೂ ಮುಂಚೆ ಜೇಠ್ಮಲಾನಿ ಆರೋಪಿಸಿದ್ದರು.

ಜೇಟ್ಲಿ ದಾಖಲಿಸಿದ್ದ ಸಿವಿಲ್ ಮಾನಹಾನಿ ಪ್ರಕರಣದ ವಿಚಾರಣೆ ವೇಳೆ ಜೇಠ್ಮಲಾನಿ ಮಾಡಿರುವ ಕೆಲವೊಂದು ಹೇಳಿಕೆಗಳು ‘‘ನಾಚಿಕೆಗೇಡು’’ ಎಂದು ದಿಲ್ಲಿ ಹೈಕೋರ್ಟ್ ನಂತರ ಹೇಳಿತ್ತು.

ದಿಲ್ಲಿ ಎಂಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಶನ್ (ಡಿಡಿಸಿಎ) ಅಧ್ಯಕ್ಷರಾಗಿ 2013ರ ತನಕ ಒಟ್ಟು 13 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾಗ ಜೇಟ್ಲಿ ಆರ್ಥಿಕ ಅವ್ಯವಹಾರ ನಡೆಸಿದ್ದಾರೆಂದು ಆರೋಪಿಸಿ ಕೇಜ್ರಿವಾಲ್ ಮತ್ತು ಐದು ಮಂದಿ ಇತರ ಎಎಪಿ ನಾಯಕರುಗಳು ಆರೋಪಿಸಿದ್ದರೆ ಇವರಿಂದ ರೂ 10 ಕೋಟಿ ಮಾನನಷ್ಟ ಮೊತ್ತ ಆಗ್ರಹಿಸಿ ಕೇಜ್ರಿವಾಲ್ ದಾವೆ ಹೂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News