“2 ನಿಮಿಷಗಳಲ್ಲಿ ಪತಿ ಮರಳುತ್ತಾರೆ ಎಂದಿದ್ದರು, ಅದಾಗಿ 30 ವರ್ಷಗಳೇ ಸಂದಿವೆ”

Update: 2017-05-22 16:03 GMT

ಹಾಶಿಮ್ ಪುರ, ಮೇ 22: 80ರ ಹರೆಯದ ಜಮಾಲುದ್ದೀನ್ ರಿಗೆ ವಯೋಸಹಜವೆಂಬಂತೆ ಜ್ಞಾಪಕಶಕ್ತಿ ಕುಂದುತ್ತಿದೆ. ಆದರೆ 1987 ಮೇ 22ರ ಭೀಕರ ನೆನಪುಗಳು ಇನ್ನೂ ಮಾಸುತ್ತಿಲ್ಲ.

“ಆ ದಿನ ನನಗೆ ಹಾಗೂ ನನ್ನ ಮಕ್ಕಳಿಗೆ ವಿನಾಶದ ದಿನವಾಗಿತ್ತು” ಎನ್ನುತ್ತಾರೆ 30 ವರ್ಷಗಳ ಹಿಂದೆ ಪ್ರಾಂತೀಯ ಸಶಸ್ತ್ರ ಪಡೆ(ಪಿಎಸಿ)ಯ ಗನ್ ಗಳಿಂದ ಹೊರಟ ಬುಲೆಟ್ ಗಳಿಂದ ತನ್ನ ಹಿರಿಯ ಪುತ್ರ ಕಮರುದ್ದೀನ್ ರನ್ನು ಕಳೆದುಕೊಂಡ ಜಮಾಲುದ್ದೀನ್.

ಜಮಾಲುದ್ದೀನ್

ಎರಡು ನಿಮಿಷಗಳಲ್ಲಿ ಬರುತ್ತಾರೆ ಎಂದವರು ಇನ್ನೂ ಮರಳಿಲ್ಲ

“ನನ್ನ ಪತಿ ಕುರ್ ಆನ್ ಪಠಿಸುತ್ತಿದ್ದರು. ಈ ಸಂದರ್ಭ ಆಗಮಿಸಿದ ಪೊಲೀಸರು ಕುರ್ ಆನನ್ನು ಕಿತ್ತು, ಮನೆಯಿಂದ ಹೊರಬರುವಂತೆ ಹೇಳಿದರು. 2 ನಿಮಿಷಗಳಲ್ಲಿ ಅವರು ಮರಳುತ್ತಾರೆ ಎಂದು ಪೊಲೀಸರು ಹೇಳಿದ್ದರು. ಅದಾಗಿ 30 ವರ್ಷಗಳೇ ಸಂದಿವೆ” ಎಂದು ಗದ್ಗದಿತರಾಗುತ್ತಾರೆ 68 ವರ್ಷದ ಝರೀನಾ ಬಾನು. ಪೊಲೀಸರ ಗುಂಡು ಝರೀನಾರ ಪತಿ ಹಾಗೂ ಎಳೆ ಮಗನ ಎದೆ ಸೀಳಿತ್ತು.

“ಕ್ರೂರ ಕಸ್ಟಡಿಯಲ್ ದೌರ್ಜನ್ಯ”: ಮೀರತ್ ನ ಹಾಶಿಂಪುರ ವ್ಯಾಪ್ತಿಯಲ್ಲಿ ನೂರಾರು ಮುಸ್ಲಿಂ ಯುವಕರನ್ನು ಸುತ್ತುವರಿದ ಪೊಲೀಸರ ತಂಡ ಕೆಲವರನ್ನು ಟ್ರಕ್ ನಲ್ಲಿ ಕರೆದೊಯ್ದು ಒಬ್ಬೊಬ್ಬರನ್ನು ಗುಂಡಿಟ್ಟು ಕೊಂದಿತ್ತು. ಭಾರತದ ಇತಿಹಾಸದಲ್ಲಿ ಅತಿ ಘೋರ ಘಟನೆಯಾದ ಹಾಶಿಂಪುರ ಹತ್ಯಾಕಾಂಡವನ್ನು ಇತಿಹಾಸಕಾರರು ಭಾರತ ಕಂಡ “ಕ್ರೂರ ಕಸ್ಟಡಿಯಲ್ ದೌರ್ಜನ್ಯ” ಎಂದು ವ್ಯಾಖ್ಯಾನಿಸಿದರು.

ಆದರೆ ಈ ಭೀಕರ ಪ್ರಕರಣದ ವಿಚಾರಣೆ ಆರಂಭವಾದದ್ದು ಮಾತ್ರ 1996ರಲ್ಲಿ. ಪ್ರಕರಣದ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯ ಎಲ್ಲಾ ಆರೋಪಿಗಳ ವಿರುದ್ಧದ ಪ್ರಕರಣವನ್ನು ಕೈಬಿಟ್ಟಿತು. “ತೀರ್ಪು ಹೊರಬರಲು 28 ವರ್ಷಗಳೇ ಬೇಕಾಯಿತು. ಆದರೆ ಎಲ್ಲರನ್ನೂ ಪ್ರಕರಣದಿಂದ ಕೈಬಿಡಲಾಯಿತು. ಆ ದಿನ ನಮ್ಮೆಲ್ಲರಿಗೂ ಭೀಕರವಾಗಿತ್ತು” ಎನ್ನುತ್ತಾರೆ ತನ್ನ ಹಿರಿಯ ಪುತ್ರನನ್ನು ಕಳೆದುಕೊಂಡ 72ರ ಹರೆಯದ ಹಾಝಿರಾ.

ಹಾಶಿಂಪುರ ಮುಸ್ಲಿಮ್ ಬಾಹುಳ್ಯವುಳ್ಳ ಮೀರತ್ ನ ಹೃದಯಭಾಗದಲ್ಲಿರುವ ಪ್ರದೇಶ. ಟಿಂಬರ್ ಶಾಪ್ ಗಳು ಹಾಗೂ ಬಟ್ಟೆ ಕೈಗಾರಿಕೆಗಳ ಇಲ್ಲಿನ ಮುಖ್ಯ ಉದ್ಯಮವಾಗಿತ್ತು. “ಅವರು ಟ್ರಕ್ ನಿಂದ ವ್ಯಕ್ತಿಯೊಬ್ಬನನ್ನು ಹೊರಗೆಳೆದು ಗುಂಡಿಕ್ಕಿದರು. ಆನಂತರ ನಮ್ಮನ್ನು ಕೊಲ್ಲಲೆಂದೇ ಕರೆ ತಂದಿದ್ದಾರೆ ಎನ್ನುವುದು ನಮಗೆ ತಿಳಿಯಿತು. ಟ್ರಕ್ ನಿಂದ ಹೊರಗಿಳಿಯಲು ನಾವು ನಿರಾಕರಿಸಿದಾಗ ಗುಂಡಿನ ಮಳೆಗರೆಯಲಾಯಿತು. ಆ ಘಟನೆ ‘ರಕ್ತಸ್ನಾನ’ದಂತಿತ್ತು” ಎನ್ನುತ್ತಾರೆ 40 ವರ್ಷದ ಬಾಬುದ್ದೀನ್.

ಬಾಬುದ್ದೀನ್

ಆ ಸಮಯದಲ್ಲಿ ಯುವಕನಾಗಿದ್ದ ಬಾಬುದ್ದೀನ್ ಬಿಹಾರದ ದರ್ಭಾಂಗದಿಂದ ಇಲ್ಲಿಗೆ ಆಗಮಿಸಿದ್ದರು. ದೇಶದ ಇತಿಹಾಸದ ಭೀಕರ ಘಟನೆಯಲ್ಲಿ ಬದುಕುಳಿದ ಕೆಲವರಲ್ಲಿ ಬಾಬುದ್ದೀನ್ ಕೂಡ ಒಬ್ಬರು. “ತನಿಖಾ ಸಂಸ್ಥೆಗಳ ಕಾರ್ಯ ಹಾಶಿಂಪುರ ಘಟನೆಗೆ ಕಾರಣಕರ್ತರಾದವರನ್ನು ರಕ್ಷಿಸುವಂತಿತ್ತು” ಎಂದು ಘಟನೆಯ ಬಗ್ಗೆ ಪುಸ್ತಕವೊಂದನ್ನು ಬರೆದ ಅಂದಿನ ಮೀರತ್ ಸುಪರಿಟೆಂಡೆಂಟ್ ಆಫ್ ಪೊಲೀಸ್ ವಿಭುತಿ ನಾರಾಯಣ್ ರೈ ಅಭಿಪ್ರಾಯಪಡುತ್ತಾರೆ.

ನೂರಾರು ಯುವಕರನ್ನು ಜೈಲಿಗಟ್ಟಿ ಅಲ್ಲಿ ವಿಚಾರಣೆಯ ನೆಪದಲ್ಲಿ ದೌರ್ಜನ್ಯ ನಡೆಸಲಾಯಿತು ಎಂದು ಸಾಕ್ಷಿಗಳು ಹೇಳುತ್ತಾರೆ. “ನಮ್ಮ ಯಾರ ಮೇಲೂ ಯಾವುದೇ ಪ್ರಕರಣಗಳಿರಲಿಲ್ಲ. ನಾವು ಮುಸ್ಲಿಮರು ಎಂಬ ಕಾರಣಕ್ಕಾಗಿಯೇ ಅವರು ನಮ್ಮ ಮೇಲೆ ಹಲ್ಲೆ ನಡೆಸಿದರು” ಎನ್ನುತ್ತಾರೆ ಘಟನೆಯ ಜೀವಂತ ಸಾಕ್ಷಿಯಾಗಿರುವ ರಿಯಾಝುದ್ದೀನ್.

ತನ್ನ ಎದೆಗೂ ಗುಂಡು ತಗಲಿತ್ತು ಎನ್ನುವ ಬಾಬುದ್ದೀನ್, ಅದೃಷ್ಟವಶಾತ್ ನಾನು ಸಾವಿನದವಡೆಯಿಂದ ಪಾರಾಗಿದ್ದೆ. ನದಿಗೆಸೆದ ವೇಳೆ ನಾನು ಜೀವಂತವಾಗಿದ್ದೆ. ಈಜು ಗೊತ್ತಿದ್ದರಿಂದ ಅಲ್ಲಿಯೇ ಇದ್ದ ಬಂಡೆಕಲ್ಲೊಂದರ ಹಿಂದೆ ಅಡಗಿಕೊಂಡೆ. ಅಲ್ಲಿಂದ ಪೊಲೀಸ್ ಪಡೆಗಳು ನಮ್ಮವರನ್ನು ಕೊಲ್ಲುತ್ತಿದ್ದುದನ್ನು ಕಣ್ಣಾರೆ ಕಂಡೆ” ಎನ್ನುತ್ತಾರೆ.

ನ್ಯಾಯಾಲಯದ ತೀರ್ಪಿನ ಹೊರತಾಗಿಯೂ ಹಾಶಿಂಪುರದ ಜನರಲ್ಲಿ ಭರವಸೆಯೊಂದು ಈಗಲೂ ಇದೆ. “ಅಲ್ಲಾಹನು ಎಲ್ಲವನ್ನೂ ನೋಡುತ್ತಿದ್ದಾನೆ, ತಪ್ಪೆಸಗಿದವರಿಗೆ ಅವರ ಕಾರ್ಯದ ಬಗ್ಗೆ ಗೊತ್ತಿದೆ. ಒಂದು ದಿನ ಸತ್ಯ ಹೊರಬರಲಿದೆ” ಎನ್ನುತ್ತಾರೆ ಝರೀನಾ.

ಕೃಪೆ: ಹಿಂದೂಸ್ತಾನ್ ಟೈಮ್ಸ್ ಡಾಟ್ ಕಾಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News