ಮ್ಯಾಂಚೆಸ್ಟರ್‌ನ ಪಾಪ್ ಸಂಗೀತ ಕಾರ್ಯಕ್ರಮದಲ್ಲಿ ಭಾರೀ ಸ್ಫೋಟ

Update: 2017-05-23 12:47 GMT

ಲಂಡನ್,ಮೇ 23: 2005ರಲ್ಲಿ ಲಂಡನ್ನಿನ ಸಾರಿಗೆ ವ್ಯವಸ್ಥೆಯ ಮೇಲೆ ಆತ್ಮಹತ್ಯಾ ಬಾಂಬರ್‌ಗಳ ದಾಳಿಯ ನಂತರದ ಅತ್ಯಂತ ಮಾರಣಾಂತಿಕ ಭಯೋತ್ಪಾದಕ ದಾಳಿಗೆ ಬ್ರಿಟನ್ ಸೋಮವಾರ ತಡರಾತ್ರಿ ಸಾಕ್ಷಿಯಾಗಿದೆ. ಪ್ರಮುಖ ಕೈಗಾರಿಕಾ ನಗರ ಮ್ಯಾಂಚೆಸ್ಟರ್‌ನ ಅರೆನಾವೊಂದರಲ್ಲಿ ಅಮೆರಿಕದ ಖ್ಯಾತ ಪಾಪ್ ಗಾಯಕಿ ಅರಿಯಾನಾ ಗ್ರಾಂಡೆ ಅವರ ಸಂಗೀತ ಕಾರ್ಯಕ್ರಮದ ಅಂತ್ಯದಲ್ಲಿ ಆತ್ಮಹತ್ಯಾ ಬಾಂಬರ್‌ನೋರ್ವ ತನ್ನನ್ನೇ ಸ್ಫೋಟಿಸಿಕೊಂಡ ಪರಿಣಾಮ ಮಕ್ಕಳು ಸೇರಿದಂತೆ ಕನಿಷ್ಠ 22 ಜನರು ಸಾವನ್ನಪ್ಪಿ ದ್ದಾರೆ ಮತ್ತು ಕನಿಷ್ಠ 50 ಜನರು ಗಾಯಗೊಂಡಿದ್ದಾರೆ. ದಾಳಿಗೆ ಸಂಬಂಧಿಸಿದಂತೆ 23ರ ಹರೆಯದ ಯುವಕನೋರ್ವನನ್ನು ಇಂದು ಬೆಳಿಗ್ಗೆ ದಕ್ಷಿಣ ಮ್ಯಾಂಚೆಸ್ಟರ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದೊಂದು ಹೇಡಿತನದ ಕೃತ್ಯವೆಂದು ಬ್ರಿಟನ್ ಪ್ರಧಾನಿ ಥೆರೆಸಾ ಮೇ ಅವರು ಬಣ್ಣಿಸಿದ್ದಾರೆ.

ಕಳೆದ ರಾತ್ರಿ ನಡೆದ ದಾಳಿ ಒಬ್ಬನೇ ವ್ಯಕ್ತಿಯ ಕೃತ್ಯವೆಂದು ನಾವು ಸದ್ಯಕ್ಕೆ ಭಾವಿಸಿದ್ದೇವೆ ಎಂದು ಮ್ಯಾಂಚೆಸ್ಟರ್ ಪೊಲೀಸ್ ಮುಖ್ಯಸ್ಥ ಇಯಾನ್ ಹಾಪ್‌ಕಿನ್ಸ್ ಹೇಳಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಆತನೇ ಒಬ್ಬನೇ ಈ ಕೃತ್ಯವೆಸಗಿದ್ದಾನೆಯೇ ಅಥವಾ ಗುಂಪೊಂದರ ಸದಸ್ಯನಾಗಿದ್ದನೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಿದೆ. ದಾಳಿಕೋರ ಸ್ಥಳದಲ್ಲಿಯೇ ಮೃತನಾಗಿದ್ದಾನೆ ಎನ್ನುವುದನ್ನು ನಾನು ಖಚಿತಪಡಿಸಬಲ್ಲೆ. ಆತ ಸುಧಾರಿತ ಸ್ಫೋಟಕ ಸಾಧನವೊಂದನ್ನು ಹೊಂದಿದ್ದ ಮತ್ತು ಅರೆನಾದ ಪ್ರವೇಶದ್ವಾರ ಪ್ರದೇಶದಲ್ಲಿ ಆತ ಅದನ್ನು ಸ್ಫೋಟಿಸಿದ್ದಾನೆ ಎಂದು ಹಾಪ್‌ಕಿನ್ಸ್ ತಿಳಿಸಿದರು.

  ಮ್ಯಾಂಚೆಸ್ಟರ್ ಅರೆನಾದಲ್ಲಿ ಪಾಪ್ ಸಂಗೀತ ಕಾರ್ಯಕ್ರಮಕ್ಕೆ ಸಾವಿರಾರು ಜನರು ಸೇರಿದ್ದು, ಈ ಪೈಕಿ ಹದಿಹರೆಯದವರು ಮತ್ತು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ರಾತ್ರಿ 10.30ಕ್ಕೆ (ಭಾರತೀಯ ಕಾಲಮಾನ ಮಂಗಳವಾರ ನಸುಕಿನ ಮೂರು ಗಂಟೆ) ಕಾರ್ಯಕ್ರಮ ಮುಗಿದು ಜನರೆಲ್ಲ ಹೊರಬರುತ್ತಿದ್ದಾಗ ಆತ್ಮಹತ್ಯಾ ಬಾಂಬ್ ದಾಳಿ ನಡೆದಿತ್ತು.

2005,ಜುಲೈನಲ್ಲಿ ಲಂಡನ್ನಿನ ಸಾರಿಗೆ ವ್ಯವಸ್ಥೆಯ ಮೇಲೆ ನಾಲ್ವರು ಬ್ರಿಟಿಷ್ ಮುಸ್ಲಿಮರು ಆತ್ಮಹತ್ಯಾ ಬಾಂಬ್ ದಾಳಿಗಳನ್ನು ನಡೆಸಿ 52 ಜೀವಗಳನ್ನು ಬಲಿ ತೆಗೆದುಕೊಂಡಿದ್ದರು. ಸೋಮವಾರ ರಾತ್ರಿ ನಡೆದಿರುವುದು ಆನಂತರದ ಅತ್ಯಂತ ಮಾರಣಾಂತಿಕ ದಾಳಿಯಾಗಿದೆ.

ದಾಳಿಗೆ ಆಯ್ಕೆ ಮಾಡಿಕೊಂಡಿರುವ ಸ್ಥಳ, ಸಮಯ ಮತ್ತು ದಾಳಿ ನಡೆಸಿದ ರೀತಿ ಇವೆಲ್ಲವೂ ಇದೊಂದು ಭಯೋತ್ಪಾದನೆ ಕೃತ್ಯ ಎನ್ನುವುದನ್ನು ಸೂಚಿಸುತ್ತಿವೆ ಎಂದು ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಯೋರ್ವರು ತಿಳಿಸಿದರು.

ಮ್ಯಾಂಚೆಸ್ಟರ್ ಅರೆನಾದಲ್ಲಿ 21,000 ಜನರಿಗೆ ಸ್ಥಳಾವಕಾಶವಿದ್ದು, ಸೋಮವಾರ ರಾತ್ರಿ ಸೇರಿದ್ದ ಸಭಿಕರಲ್ಲಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

 ಸ್ಫೋಟ ಸಂಭವಿಸಿದ ಬೆನ್ನಿಗೇ ಸಮೀಪದ ಮ್ಯಾಂಚೆಸ್ಟರ್ ವಿಕ್ಟೋರಿಯಾ ರೈಲು ನಿಲ್ದಾಣವನ್ನು ಮುಚ್ಚಲಾಗಿದ್ದು, ಎಲ್ಲ ರೈಲುಗಳನ್ನು ರದ್ದುಗೊಳಿಸಲಾಗಿತ್ತು. ಕಿಕ್ಕಿರಿದು ತುಂಬಿದ್ದ ಸಂಗೀತ ಕಾರ್ಯಕ್ರಮದಲ್ಲಿ ನಡೆದ ಸ್ಫೋಟವನ್ನು ಮತ್ತು ಅದಕ್ಕೆ ಜನರ ಪ್ರತಿಕ್ರಿಯೆಯನ್ನು ತೋರಿಸುವ ವೀಡಿಯೊ ತುಣುಕುಗಳು ಶೀಘ್ರವೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡತೊಡಗಿದ್ದವು.

30 ಮೀ.ದೂರಕ್ಕೆ ಎಸೆಯಲ್ಪಟ್ಟಿದ್ದೆ

ಸಂಗೀತ ಕಾರ್ಯಕ್ರಮಕ್ಕೆ ತೆರಳಿದ್ದ ಪತ್ನಿ ಮತ್ತು ಪುತ್ರಿಯನ್ನು ಕರೆತರಲು ಅರೆನಾಕ್ಕೆ ತೆರಳಿದ್ದ ಆ್ಯಂಡಿ ಹೋಲಿ ಹೊರಗೆ ಕಾಯುತ್ತ ನಿಂತಿದ್ದಾಗ ಸ್ಫೋಟ ಸಂಭವಿಸಿತ್ತು. ಸ್ಫೋಟದ ರಭಸಕ್ಕೆ ತಾನು ನಿಂತಿದ್ದ ಸ್ಥಳದಿಂದ ಸುಮಾರು 30 ಮೀ.ದೂರದ ಇನ್ನೊಂದು ಪ್ರವೇಶ ದ್ವಾರದತ್ತ ಎಸೆಯಲ್ಪಟ್ಟಿದ್ದೆ ಎಂದ ಅವರು, ಸಾವರಿಸಿಕೊಂಡು ಎದ್ದು ನೋಡಿದಾಗ ತನ್ನ ಸುತ್ತಲೂ ಶವಗಳು ಹರಡಿ ಬಿದ್ದಿದ್ದವು. ಅರೆನಾದೊಳಗೆ ಹೋಗಿ ಪತ್ನಿ ಮತ್ತು ಮಗಳನ್ನು ಹುಡುಕುವುದು ತನ್ನ ಮೊದಲ ಯೋಚನೆಯಾಗಿತ್ತು. ಆದರೆ ಅವರನ್ನು ಹುಡುಕಲು ಸಾಧ್ಯವಾಗದಿದ್ದಾಗ ಪೊಲೀಸರೊಂದಿಗೆ ಹೊರಗೆ ತೆರಳಿ ಶವಗಳ ನಡುವೆಯೂ ಹುಡುಕಿದ್ದೆ. ಕೊನೆಗೂ ಅವರು ಸುರಕ್ಷಿತವಾಗಿ ಪತ್ತೆಯಾದರು ಎಂದರು.

ಗ್ರಾಂಡೆ ವಿಷಾದ

ಪಾಪ್ ಗಾಯಕಿ ಅರಿಯಾನಾಗ್ರಾಂಡೆ (23) ಸುರಕ್ಷಿತವಾಗಿದ್ದಾರೆ ಎಂದು ಅವರ ವಕ್ತಾರರು ತಿಳಿಸಿದರು. ಗಂಟೆಗಳ ಬಳಿಕ ಅರಿಯಾನಾ,‘ಘಟನೆಯಿಂದಾಗಿ ನನ್ನ ಹೃದಯ ಒಡೆದಿದೆ. ನನಗೆ ತೀವ್ರ ವಿಷಾದವಾಗಿದೆ, ನನ್ನ ದುಃಖವನ್ನು ಬಣ್ಣಿಸಲು ಶಬ್ದಗಳಿಲ್ಲ ’ಎಂದು ಟ್ವೀಟಿಸಿದ್ದಾರೆ.

ಹೇಡಿತನದ ಕೃತ್ಯ

ಮಂಗಳವಾರ ಬೆಳಿಗ್ಗೆ ಸರಕಾರದ ಕೋಬ್ರಾ ತುರ್ತು ಸಮಿತಿಯ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೇ, ದಾಳಿಕೋರ ಗರಿಷ್ಠ ಪ್ರಮಾಣದಲ್ಲಿ ಸಾವುನೋವುಗಳನ್ನುಂಟು ಮಾಡಲು ಉದ್ದೇಶಪೂರ್ವಕವಾಗಿ ಅರೆನಾವನ್ನು ಆಯ್ಕೆ ಮಾಡಿಕೊಂಡಿದ್ದ ಎಂದು ಹೇಳಿದರು. ಇದೊಂದು ಹೇಡಿತನದ ಕೃತ್ಯ ಎಂದು ಖಂಡಿಸಿದ ಅವರು, ‘‘ಭಯೋತ್ಪಾದಕರು ಎಂದಿಗೂ ನಮ್ಮನ್ನು ಮತ್ತು ನಮ್ಮ ವೌಲ್ಯಗಳನ್ನು ನಾಶಗೊಳಿಸಲು ಸಾಧ್ಯವಿಲ್ಲ. ನಮ್ಮ ದೇಶ ಮತ್ತು ನಮ್ಮ ಜೀವನ ವಿಧಾನ ಎಂದೆಂದಿಗೂ ಉಳಿಯಲಿವೆ ’’ಎಂದರು.

ಅಮರಿಕದಿಂದ ಸಹಕಾರ

ಭೀತಿವಾದ ನಿಗ್ರಹ ಕುರಿತು ನಾವು ಇತರ ರಾಷ್ಟ್ರಗಳೊಂದಿಗೆ ಚರ್ಚಿಸುತ್ತಿದ್ದು, ದೇಶದಲ್ಲಿಯ ಎಲ್ಲ ಸಾರ್ವಜನಿಕ ಸ್ಥಳಗಳು ಮತ್ತು ಕಾರ್ಯಕ್ರಮಗಳಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗುತ್ತಿದೆ. ಬ್ರಿಟನ್ನಿಗೆ ನೆರವಾಗಲು ನಾವು ಸಿದ್ಧರಿದ್ದೇವೆ. ತನಿಖೆಯಲ್ಲಿ ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇವೆ ಎಂದು ಅಮೆರಿಕದ ತಾಯ್ನಿಡು ಭದ್ರತಾ ಸಚಿವಾಲಯವು ತಿಳಿಸಿದೆ.

ಪ್ರಚಾರ ಸ್ಥಗಿತ

ಸೋಮವಾರದ ಸ್ಫೋಟದ ಬಳಿಕ ಆಡಳಿತ ಕನ್ಸರ್ವೇಟಿವ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ಜೂ.8ರ ಚುನಾವಣೆಗೆ ತಮ್ಮ ಪ್ರಚಾರ ಅಭಿಯಾನವನ್ನು ಸ್ಥಗಿತಗೊಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News