ಜಿಎಸ್‌ಟಿ ಲಾಭ: ಫ್ಲ್ಯಾಟ್ ಬೆಲೆ ಇಳಿಕೆ ಸಾಧ್ಯತೆ

Update: 2017-05-23 03:51 GMT

ಹೊಸದಿಲ್ಲಿ, ಮೇ 23: ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ಪದ್ಧತಿ ಅನುಷ್ಠಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜಿಎಸ್‌ಟಿ ಮಂಡಳಿ ಗೃಹನಿರ್ಮಾಣ ಕ್ಷೇತ್ರದ ಮೇಲಿನ ತೆರಿಗೆಯನ್ನು ಶೇಕಡ 12ಕ್ಕೆ ಮಿತಿಗೊಳಿಸಿರುವ ಹಿನ್ನೆಲೆಯಲ್ಲಿ ಮನೆ ಹಾಗೂ ಫ್ಲ್ಯಾಟ್ ಶೇಕಡ 5ರಷ್ಟು ಅಗ್ಗವಾಗುವ ನಿರೀಕ್ಷೆ ಇದೆ.

ಮನೆ ನಿರ್ಮಾಣ ಸಾಧನಗಳಾದ ಸಿಮೆಂಟ್, ಸ್ಟೀಲ್, ಪೈಂಟ್ ಹಾಗೂ ಇತರ ವಸ್ತುಗಳ ಮೇಲಿನ ತೆರಿಗೆಯೂ ಕಡಿಮೆಯಾಗುವುದರಿಂದ ವಾಸ್ತವವಾಗಿ ವೆಚ್ಚದ ಹೊರೆ ಕಡಿಮೆಯಾಗಲಿದೆ. ಇದರಿಂದಾಗಿ ಒಂದು ಕೋಟಿ ರೂ. ಬೆಲೆಯ ಅಪಾರ್ಟ್‌ಮೆಂಟ್ ಬೆಲೆ 3-5 ಲಕ್ಷ ರೂ.ನಷ್ಟು ಇಳಿಯಲಿದೆ. ಕೈಗೆಟುಕುವ ಬೆಲೆಯ ಮನೆಗಳ ಅಂದರೆ 30 ಲಕ್ಷ ಮಿತಿಯೊಳಗಿನ ಮನೆಗಳ ನಿವ್ವಳ ದರ ಶೇಕಡ 5ರಷ್ಟು ಕಡಿಮೆಯಾಗಲಿದೆ. ಜಿಎಸ್‌ಟಿ ಜಾರಿಗೆ ಬಂದ ಬಳಿಕ, ಮನೆ ಖರೀದಿಸುವವರು ಹಾಲಿ ಇರುವ ಶೇಕಡ 4.5ರ ಸೇವಾ ತೆರಿಗೆಯನ್ನು ಪಾವತಿಸಬೇಕಿಲ್ಲ.

ಈ ಹಿನ್ನೆಲೆಯಲ್ಲಿ ಗೃಹ ವಹಿವಾಟು ಮೇಲಿನ ತೆರಿಗೆಯನ್ನು ಶೇಕಡ 12ಕ್ಕೆ ನಿಗದಿಪಡಿಸಿರುವುದು ಬಳಕೆದಾರ ಸ್ನೇಹಿ ಕ್ರಮ ಎಂದು ತೆರಿಗೆ ಸಲಹೆಗಾರರು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳು ಅಭಿಪ್ರಾಯಪಡುತ್ತಾರೆ. ಕ್ರೆಡೈ ಅಧ್ಯಕ್ಷ ಹಾಗೂ ಎಟಿಎಸ್ ಇನ್‌ಫ್ರಾಸ್ಟ್ರಕ್ಚರ್‌ನ ಸಿಎಂಡಿ ಗೀತಾಂಬರ ಆನಂದ್ ಅವರ ಪ್ರಕಾರ, ಶೇಕಡ 12ರ ಜಿಎಸ್‌ಟಿಯಿಂದಾಗಿ ಚದರ ಅಡಿಗೆ 6,000 ರೂಪಾಯಿವರೆಗಿನ ವೆಚ್ಚದ ಅಪಾರ್ಟ್‌ಮೆಂಟ್ ಖರೀದಿದಾರರಿಗೆ ಲಾಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News