ಇವರು ಹೇಳಿದ್ದು ‘ಬಾಂಬೆ ’...ಅವರಿಗೆ ಕೇಳಿದ್ದು ‘ಬಾಂಬ್ ’

Update: 2017-05-23 08:56 GMT

ಮುಂಬೈ,ಮೇ 23: ಕೇರಳದಿಂದ ಅದೇ ತಾನೇ ರೈಲಿನಲ್ಲಿ ಬಂದಿಳಿದಿದ್ದ ಕೇರಳದ ಆರು ಯುವಕರ ಗುಂಪು ಸಿಎಸ್‌ಟಿ ರೈಲುನಿಲ್ದಾಣದಲ್ಲಿ ನಿಂತು ಮಾತನಾಡುತ್ತಿದ್ದಾಗ ‘ಬಾಂಬೆ ’ಎಂದು ಹೇಳಿದ ತಪ್ಪಿಗಾಗಿ ರೈಲ್ವೆ ಪೊಲೀಸರ ಅತಿಥಿಗಳಾದ ಘಟನೆ ನಿನ್ನೆ ನಡೆದಿದೆ.

 ನಿನ್ನೆ ಮಧ್ಯಾಹ್ನ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಂದು ಪನ್ವೇಲ್ ನಿಲ್ದಾಣದಲ್ಲಿ ಇಳಿದಿದ್ದ ಕೇರಳದ ಯುವಕರ ಗುಂಪು ಛತ್ರಪತಿ ಶಿವಾಜಿ ಟರ್ಮಿನಸ್‌ಗೆ ತೆರಳಲು ಬೇರೊಂದು ರೈಲನ್ನು ಹತ್ತಿತ್ತು. ರೈಲು ಮುಂದಕ್ಕೆ ಚಲಿಸಿದಾಗ ಸಹಜವಾಗಿಯೇ ಅವರೆಲ್ಲ ಮಾತಿನಲ್ಲಿ ತೊಡಗಿದ್ದರು. ಅವರ ಮಾತಿನಲ್ಲಿ ‘ಬಾಂಬೆ ’ಶಬ್ದ ಪ್ರಸ್ತಾಪವಾಗಿದ್ದು, ಸಹ ಪ್ರಯಾಣಿಕರು ಅದನ್ನು ‘ಬಾಂಬ್’ಎಂದು ಗ್ರಹಿಸಿದ್ದರು. ಈ ಸಹಪ್ರಯಾಣಿಕರ ಪೈಕಿ ಓರ್ವ ಕುರ್ಲಾದಲ್ಲಿ ಇಳಿದು ಯುವಕರ ಗುಂಪು‘ಬಾಂಬ್’ ಬಗ್ಗೆ ಮಾತನಾಡುತ್ತಿತ್ತು ಎಂದು ಅಲ್ಲಿಯ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಅಧಿಕಾರಿ ಯುವಕರಿದ್ದ ಬೋಗಿಯ ಬಳಿಗೆ ಧಾವಿಸುವಷ್ಟರಲ್ಲಿ ಅದು ಮುಂದಕ್ಕೆ ಚಲಿಸಿತ್ತು. ಹೀಗಾಗಿ ಆತ ಸಿಎಸ್‌ಟಿಯಲ್ಲಿನ ರೈಲ್ವೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದ.

 ರೈಲು ಸಿಎಸ್‌ಟಿ ತಲುಪಿದಾಗ ಬೋಗಿಯ ಬಳಿ ಧಾವಿಸಿದ್ದ ಅಲ್ಲಿಯ ರೈಲ್ವೆ ಪೊಲೀಸರು ಎಲ್ಲ ಆರೂ ಯುವಕರನ್ನು ವಶಕ್ಕೆ ತೆಗೆದುಕೊಂಡು ವಾಶಿ ರೈಲ್ವೆ ಪೊಲೀಸರಿಗೆ ಹಸ್ತಾಂತರಿ ಸಿದ್ದರು. ಯುವಕರು ರೈಲು ಹತ್ತಿದ್ದ ಪನ್ವೇಲ್ ನಿಲ್ದಾಣ ವಾಶಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದೆ.

ಕೇರಳದಿಂದ ಸ್ನೇಹಿತನೋರ್ವ ದೂರವಾಣಿ ಕರೆ ಮಾಡಿ ಎಲ್ಲಿದ್ದೀರಿ ಎಂದು ವಿಚಾರಿಸಿದ್ದ, ಬಾಂಬೆ ಎಂದು ಉತ್ತರಿಸಿದ್ದೆ ಎಂದು ಯುವಕನೋರ್ವ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದ.

ಈ ಹುಡುಗ ಬಾಂಬೆ ಎಂದು ಹೇಳಿದ್ದ. ಅವರು(ಸಹಪ್ರಯಾಣಿಕರು) ಅದನ್ನು ಬಾಂಬ್ ಎಂದು ತಪ್ಪಾಗಿ ಗ್ರಹಿಸಿದ್ದು ಗೊಂದಲಕ್ಕೆ ಕಾರಣವಾಗಿತ್ತು ಎಂದು ಸೀನಿಯರ್ ರೈಲ್ವೆ ಪೊಲೀಸ್ ಇನ್‌ಸ್ಪೆಕ್ಟರ್ ಸುರೇಶ ಪಾಟೀಲ್ ಸುದ್ದಿಗಾರರಿಗೆ ತಿಳಿಸಿದರು.

ಯುವಕರ ಗುಂಪು 23 ದಿನಗಳ ಉರ್ದು ತರಬೇತಿಗಾಗಿ ರತ್ನಾಗಿರಿಯ ರಾಜಾಪುರಕ್ಕೆ ತೆರಳಲಿತ್ತು. ಅದಕ್ಕೂ ಮುನ್ನ ಮುಂಬೈಗೆ ಭೇಟಿ ನೀಡಿ ಜೆಜೆ ಆಸ್ಪತ್ರೆ ಸಮೀಪದ ಮದ್ರಸದಲ್ಲಿ ಉಳಿದುಕೊಳ್ಳಲು ನಿರ್ಧರಿಸಿದ್ದರು. ಮಂಗಳವಾರ ಅವರು ನಗರದಿಂದ ನಿರ್ಗಮಿಸಲಿದ್ದರು ಎಂದರು.

 ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್) ಕೂಡ ಈ ಯುವಕರನ್ನು ವಿಚಾರಣೆಗೊಳ ಪಡಿಸಿತ್ತು. ಔಪಚಾರಿಕತೆಗಳನ್ನು ಪೂರೈಸಿದ ಬಳಿಕ ಇಂದು ಈ ಯುವಕರನ್ನು ಬಿಡುಗಡೆಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News