ಕಲಬುರ್ಗಿಯನ್ನು ‘ತೊಗರಿ ಕಣಜ’ ಘೋಷಣೆಗೆ ಚಿಂತನೆ: ಟಿ.ಬಿ.ಜಯಚಂದ್ರ

Update: 2017-05-23 14:07 GMT


ಬೆಂಗಳೂರು, ಮೇ 23: ದೇಶದಲ್ಲೇ ಅತಿ ಹೆಚ್ಚು ಹಾಗೂ ಉತ್ಕೃಷ್ಟ ಗುಣಮಟ್ಟದ ತೊಗರಿಯನ್ನು ಬೆಳೆಯುವ ಕಲಬುರ್ಗಿ ಜಿಲ್ಲೆಯನ್ನು ತೊಗರಿಯ ಕಣಜ ಎಂದು ಘೋಷಣೆ ಮಾಡುವ ಮೂಲಕ ವಿಶಿಷ್ಟ ಮಾನ್ಯತೆಯನ್ನು ಕೊಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ಪಾದನೆಯಾಗುವ ತೊಗರಿಯಲ್ಲಿ ಶೇ.50ರಷ್ಟು ಕಲಬುರ್ಗಿ ಜಿಲ್ಲೆವೊಂದರಲ್ಲಿಯೇ ಬೆಳೆಯಲಾಗುತ್ತದೆ. ಹಾಗೂ ಇಲ್ಲಿ ಬೆಳೆಯುವ ತೊಗರಿ ದೇಶ ಹಾಗೂ ವಿದೇಶದಲ್ಲಿ ಉತ್ತಮ ಬೇಡಿಕೆಯಿದೆ ಎಂದು ತಿಳಿಸಿದರು.
ಕಲಬುರ್ಗಿಯನ್ನು ‘ತೊಗರಿ ಕಣಜ’ವೆಂದು ಘೋಷಣೆ ಮಾಡುವ ಸಂಬಂಧ ನೀತಿಯೊಂದನ್ನು ರೂಪಿಸಲಾಗುವುದು. ಆ ಮೂಲಕ ಕಲಬುರ್ಗಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ತೊಗರಿಗೆ ದೇಶ-ವಿದೇಶ ಉತ್ತಮ ಬೇಡಿಕೆ ಬರುವಂತೆ ಮಾಡಲಾಗುವುದು ಎಂದು ಸಚಿವ ಜಯಚಂದ್ರ ವಿಶ್ವಾಸ ವ್ಯಕ್ತಪಡಿಸಿದರು.

 ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ 101ಲಕ್ಷ ಕ್ವಿಂಟಾಲ್ ತೊಗರಿ ಉತ್ಪಾದನೆಯಾಗಿದೆ. ಇದರಲ್ಲಿ 31.32ಲಕ್ಷ ಕ್ವಿಂಟಾಲ್ ತೊಗರಿಯನ್ನು ರಾಜ್ಯ ಸರಕಾರ ಒಂದು ಕ್ವಿಂಟಾಲ್‌ಗೆ 5500ರಂತೆ ರಿಯಾಯಿತಿ ದರದಲ್ಲಿ ಖರೀದಿಸಿದೆ. ಇನ್ನು ರಾಜ್ಯದ ರೈತರಲ್ಲಿ 42ಲಕ್ಷ ಕ್ವಿಂಟಾಲ್ ತೊಗರಿ ಉಳಿದಿದ್ದು, ಅದನ್ನು ಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

 ಅನ್ನಭಾಗ್ಯದ ಜೊತೆಗೆ ತೊಗರಿ: ಅನ್ನಭಾಗ್ಯದಡಿ ನೀಡಲಾಗುತ್ತಿರುವ ಅಕ್ಕಿಯಲ್ಲಿ ಪೌಷ್ಟಿಕಾಂಶ ಕೊರತೆಯಿದೆ. ಇದರಿಂದಾಗಿ ಜನತೆ ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅನ್ನಭಾಗ್ಯದ ಜೊತೆಗೆ ಪ್ರತಿಕುಟುಂಬಕ್ಕೆ ಕನಿಷ್ಠ ಒಂದು ಕೆಜಿ ಮಟ್ಟಿಗಾದರು ತೊಗರಿಯನ್ನು ವಿತರಿಸುವ ಚಿಂತನೆಯಿದೆ. ಇದನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಪಾಲಿಶ್ ಅಕ್ಕಿಗೆ ಕಡಿವಾಣ ಅಗತ್ಯ

ರಾಜ್ಯದಲ್ಲಿ ಪಾಲಿಶ್ ಅಕ್ಕಿಯನ್ನು ತಿನ್ನುವವರ ಸಂಖ್ಯೆ ಹೆಚ್ಚಿದೆ. ಇದರಿಂದ ಮಧುಮೇಹ ರೋಗಿಗಳ ಸಂಖ್ಯೆಯಲ್ಲಿ ವಿಪರೀತವಾಗಿ ಹೆಚ್ಚಳವಾಗಿದೆ. ಹೀಗಾಗಿ ಪಾಲಿಶ್ ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

-ಟಿ.ಬಿ.ಜಯಚಂದ್ರ ಸಚಿವ, ಕಾನೂನು ಮತ್ತು ಸಂಸದೀಯ ವ್ಯವಹಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News