×
Ad

ರಾಹುಲ್‌ ಗಾಂಧಿ ಜೊತೆ ಸತೀಶ್ ಜಾರಕಿಹೊಳಿ ಚರ್ಚೆ

Update: 2017-05-23 23:27 IST

ಬೆಂಗಳೂರು, ಮೇ 23: ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಪಾರುಪತ್ಯ ಸ್ಥಾಪಿಸಲು ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ನಡುವೆ ನಡೆಯುತ್ತಿರುವ ಪೈಪೋಟಿಯು ಇದೀಗ ಹೈಕಮಾಂಡ್ ಅಂಗಳಕ್ಕೆ ತಲುಪಿದೆ.

ಮಂಗಳವಾರ ಮಹತ್ವದ ಬೆಳವಣಿಗೆಯೊಂದರಲ್ಲಿ ಸತೀಶ್ ಜಾರಕಿಹೊಳಿ, ಹೊಸದಿಲ್ಲಿಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ನಿನ್ನೆಯಷ್ಟೇ ನಡೆದ ಬೆಳಗಾವಿ ಜಿಲ್ಲಾ ಮುಖಂಡರ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾರಕಿಹೊಳಿ ಸಹೋದರರ ವರ್ತನೆಯಿಂದ ಬೆಳಗಾವಿಯಲ್ಲಿ ಕಾರ್ಯಕರ್ತರಲ್ಲಿ ಮೂಡುತ್ತಿರುವ ಗೊಂದಲ ಹಾಗೂ ಪಕ್ಷ ಸಂಘಟನೆ ಮೇಲೆ ಬೀರುತ್ತಿರುವ ವ್ಯತಿರಿಕ್ತ ಪರಿಣಾಮದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.ಅಲ್ಲದೆ, ಇಬ್ಬರೂ ಸಹೋದರರು ಪರಸ್ಪರ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಒಗ್ಗಟ್ಟಾಗಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಕುರಿತು ಗಮನ ಹರಿಸುವಂತೆ ವೇಣುಗೋಪಾಲ್ ಹಾಗೂ ಸಿದ್ದರಾಮಯ್ಯ ಸೂಚನೆ ನೀಡಿದ್ದರು.

ಒಬ್ಬರು ಸರಕಾರ ಹಾಗೂ ಮತ್ತೊಬ್ಬರು ಪಕ್ಷದ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಜವಾಬ್ದಾರಿಯನ್ನು ನಿರ್ವಹಿಸುವಂತೆ ಇಬ್ಬರು ಸಹೋದರರ ನಡುವೆ ಸಂಧಾನ ಸೂತ್ರವನ್ನು ಏರ್ಪಡಿಸಲಾಗಿತ್ತು. ಇದಕ್ಕೆ ರಮೇಶ್ ಹಾಗೂ ಸತೀಶ್ ಜಾರಕಿಹೊಳಿ ಸಹಮತ ವ್ಯಕ್ತಪಡಿಸಿದ್ದರು.2018ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯು ಪಕ್ಷದ ಪಾಲಿಗೆ ಅತ್ಯಂತ ಮಹತ್ವದ್ದು. ಅದರಲ್ಲೂ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಅತಿದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ನಮ್ಮ ಪಾಲಿಗೆ ಪ್ರಮುಖವಾದದ್ದು. ಆದಷ್ಟು ಬೇಗ ಪರಸ್ಪರ ಇರುವ ಅಪನಂಬಿಕೆಗಳನ್ನು ದೂರ ಮಾಡಿಕೊಂಡು ಒಂದಾಗಿ, ಪಕ್ಷದ ಸಂಘಟನೆಗೆ ಗಮನ ಹರಿಸಿ ಎಂದು ವೇಣುಗೋಪಾಲ್ ತಾಕೀತು ಮಾಡಿದ್ದರು. ಅಲ್ಲದೆ, ಬಹಿರಂಗವಾಗಿ ಇಬ್ಬರೂ ಮುಖಂಡರು ಭಿನ್ನಮತೀಯ ಹೇಳಿಕೆಗಳನ್ನು ನೀಡಬಾರದು. ಒಂದು ವೇಳೆ ಸಮಸ್ಯೆ ಹೆಚ್ಚಿದ್ದರೆ, ಮೇ 28ರಂದು ಹೈಕಮಾಂಡ್ ಭೇಟಿ ಮಾಡಿ ಸಮಸ್ಯೆ ಸರಿಪಡಿಸಿಕೊಳ್ಳಿ ಎಂದು ವೇಣುಗೋಪಾಲ್ ಸೂಚಿಸಿದ್ದರು. ಆದರೆ, ಐದು ದಿನ ಮುಂಚಿತವಾಗಿ ಸತೀಶ್ ಜಾರಕಿಹೊಳಿ, ರಾಹುಲ್‌ ಗಾಂಧಿಯನ್ನು ಭೇಟಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News