ಪತ್ನಿ, ಮಕ್ಕಳಿಗೆ ವಿಷ ನೀಡಿ ಆತ್ಮಹತ್ಯೆಗೆ ಯತ್ನಿಸಿದ ಪೇದೆ

Update: 2017-05-23 18:11 GMT

ಬೆಂಗಳೂರು, ಮೇ 23: ಪೊಲೀಸ್ ಪೇದೆಯೋರ್ವ ತನ್ನ ಮಕ್ಕಳಿಬ್ಬರಿಗೆ ಹಾಗೂ ಪತ್ನಿಗೆ ವಿಷ ಉಣಿಸಿ ಬಳಿಕ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಲ್ಲಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಟೆಲಿಫೋನ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಿಎಆರ್ ಪೊಲೀಸ್ ಪೇದೆ ಸುಭಾಷ್‌ಚಂದ್ರ (38) ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಅವರ ಪತ್ನಿ ವೀಣಾ(28), ಮಕ್ಕಳಾದ ಮಾನ್ಯ(3), ಒಂದೂವರೆ ವರ್ಷದ ಪೃಥ್ವಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂಲತಃ ಬಳ್ಳಾರಿಯವರಾದ ಸುಭಾಷ್ ಅವರು ಸಿಎಆರ್‌ನಲ್ಲಿ ಪೊಲೀಸ್ ಪೇದೆಯಾಗಿ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಂಪಿಗೆಹಳ್ಳಿ ಪೊಲೀಸ್ ಠಾಣೆ ಹಿಂಭಾಗದಲ್ಲಿರುವ ಪೊಲೀಸ್ ವಸತಿ ಗೃಹದಲ್ಲಿ ವಾಸವಾಗಿದ್ದರು.

ಸೋಮವಾರ ರಾತ್ರಿ 10ರ ಸುಮಾರಿಗೆ ಸಹೋದರನಿಗೆ ಮನೆಗೆ ಬರುವಂತೆ ಕರೆ ಮಾಡಿದ್ದಾರೆ. ನಂತರ ಮಕ್ಕಳಾದ ಮಾನ್ಯ, ಪೃಥ್ವಿ ಹಾಗೂ ವೀಣಾ ಅವರಿಗೆ ವಿಷವುಣಿಸಿ, ತಾನೂ ವಿಷ ಕುಡಿದಿದ್ದಾರೆ. ಅಲ್ಲದೆ, ಚಾಕುವಿನಿಂದ ತನ್ನ ಮೈಗೆ ಚುಚ್ಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸುಭಾಷ್ ಕರೆ ಮಾಡಿದ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿಯ ಸಕ್ರೆಹಳ್ಳಿಯಿಂದ ಮಂಗಳವಾರ ಬೆಳಗ್ಗೆ ಸುಭಾಷ್ ಅವರ ಅಣ್ಣ ಮನೆಗೆ ಬಂದು ಬಾಗಿಲು ಬಡಿದಾಗ ಎಷ್ಟು ಹೊತ್ತಾದರೂ ಬಾಗಿಲು ತೆರೆಯಲಿಲ್ಲವಾದರೂ ಒಳಗಡೆ ಶಬ್ದ ಕೇಳುತ್ತಿತ್ತು. ಸ್ಥಳೀಯರ ಸಹಾಯದೊಂದಿಗೆ ಬಾಗಿಲು ಮುರಿದು ಒಳಹೋಗಿ ನೋಡಿದಾಗ ಸುಭಾಷ್‌ಚಂದ್ರ ಅಸ್ವಸ್ಥ ಸ್ಥಿತಿಯಲ್ಲಿ ನರಳಾಡುತ್ತಿದ್ದು, ಅವರ ಪತ್ನಿ, ಮಕ್ಕಳು ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಸುಭಾಷ್ ಅವರನ್ನು ಹೆಬ್ಬಾಳದ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೀಣಾ, ಪೃಥ್ವಿ ಹಾಗೂ ಮಾನ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸಂಪಿಗೆಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News