ಅನುರಾಗ್ ತಿವಾರಿ ಸಾವಲ್ಲ, ಪೂರ್ವ ನಿಯೋಜಿತ ಕೊಲೆ: ನಿವೃತ್ತ ಅಧಿಕಾರಿ ವಿಜಯ್‌ಕುಮಾರ್

Update: 2017-05-23 18:17 GMT

ಬೆಂಗಳೂರು, ಮೇ 23: ರಾಜ್ಯ ಸರಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರಾಗಿದ್ದ ಅನುರಾಗ್ ತಿವಾರಿ ಸಾವು ಅಸಹಜವಾಗಿದ್ದು, ಇದೊಂದು ವ್ಯವಸ್ಥಿತ ಪೂರ್ವ ನಿಯೋಜಿತ ಕೊಲೆಯಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಂ.ಎನ್. ವಿಜಯ್‌ಕುಮಾರ್ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ದೇಶದಲ್ಲಿ ಪ್ರಾಮಾಣಿಕ, ದಕ್ಷ ಅಧಿಕಾರಿಗಳಿಗೆ ಬೆಲೆ ಇಲ್ಲದಂತಾಗಿದ್ದು, ಸರಕಾರದ ವಲಯದಲ್ಲಿ ಐಎಎಸ್ ಮಾಫಿಯಾ ನಿರ್ಮಾಣವಾಗಿದೆ. ಇವರು ಪ್ರಾಮಾಣಿಕ ಸೇವೆ ಮಾಡಲು ಬಿಡುವುದಿಲ್ಲ. ಹೀಗಾಗಿ ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳು ಭ್ರಷ್ಟರಾಗಬೇಕು ಇಲ್ಲವೇ ಜೀವ ಕಳೆದುಕೊಳ್ಳಬೇಕು ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಅನುರಾಗ್ ತಿವಾರಿ ಸಾವಿನ ಪ್ರಕರಣವನ್ನು ಉತ್ತರ ಪ್ರದೇಶ ಸರಕಾರ ಸಿಬಿಐ ತನಿಖೆಗೆ ವಹಿಸಿದರೂ ನಿಷ್ಪಕ್ಷಪಾತವಾಗಿ ತನಿಖೆ ನಡೆಯುವ ಬಗ್ಗೆ ಅನುಮಾನವಿದೆ. ಈ ಹಿಂದೆ ದಕ್ಷರಾಗಿದ್ದ ಜಿಲ್ಲಾಧಿಕಾರಿ ಡಿ.ಕೆ.ರವಿ, ಪೊಲೀಸ್ ಅಧಿಕಾರಿ ಕಲ್ಲಪ್ಪ ಹಂಡಿಬಾಗ್‌ರ ಕೊಲೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದರೂ, ಅವರಿಗೆ ನ್ಯಾಯ ಸಿಗಲಿಲ್ಲ. ಇದೇ ವೇಳೆ ಇವರ ಸಾವು ಸಂಭವಿಸಿದ್ದು, ಈಗಾಗಲೇ ಉತ್ತರ ಪ್ರದೇಶದ ಪೊಲೀಸರ ತನಿಖಾ ಕ್ರಮ ನೋಡಿದರೆ ಈ ಪ್ರಕರಣವನ್ನು ಮುಚ್ಚಿಹಾಕುವ ವ್ಯವಸ್ಥಿತ ಹುನ್ನಾರ ನಡೆಸಲಾಗುತ್ತಿದೆ ಎಂಬ ಅನುಮಾನ ಕಾಡುತ್ತಿದೆ. ಹೀಗಾಗಿ ಸಿಬಿಐ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿದಾಗ ಮಾತ್ರ ತಿವಾರಿ ಸಾವಿನ ಸತ್ಯ ಹೊರಬೀಳಲಿದೆ ಎಂದರು.

ನಾನು ರಾಜ್ಯ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತನಾಗಿದ್ದ ಸಂದರ್ಭದಲ್ಲಿ ಮೂರು ಬಾರಿ ನನ್ನ ಮೇಲೆ ಕೊಲೆ ಪ್ರಯತ್ನ ಮಾಡಲಾಗಿತ್ತು. ಅನಂತರ ಇಲಾಖೆಯಲ್ಲಿನ ಅವ್ಯವಹಾರಗಳನ್ನು ಬಯಲಿಗೆಳೆಯಲು ಪ್ರಯತ್ನಿಸಿದೆ. ಆದರೆ, ಇಲಾಖೆಯಲ್ಲಿರುವ ಐಎಎಸ್ ಮಾಫಿಯಾ ಅದಕ್ಕೆ ಅವಕಾಶ ನೀಡಲಿಲ್ಲ. ಅಲ್ಲದೆ, ಭ್ರಷ್ಟರಾಗುವಂತೆ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿದರು.

ಇದೇ ವೇಳೆ ರಾಜ್ಯದಲ್ಲಿ ಅನ್ನಭಾಗ್ಯ ಹಗರಣ ಕುರಿತು 2014ರಲ್ಲಿ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನ ಆಗಲಿಲ್ಲ. ತಿವಾರಿ ಅದನ್ನು ಬಹಿರಂಗ ಪಡಿಸಲು ಮುಂದಾಗಿದ್ದಕ್ಕೆ ಅವರನ್ನು ಕೊಲೆ ಮಾಡಿದ್ದಾರೆ ಎಂದ ಅವರು, ದೇಶದಲ್ಲಿಯೇ ಕರ್ನಾಟಕ ಭ್ರಷ್ಟಾಚಾರಕ್ಕೆ ಮೊದಲನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ನಡೆಯುವ ಐಎಎಸ್ ಅಧಿಕಾರಿಗಳ ಸಾವಿಗೆ ಐಎಎಸ್ ಮಾಫಿಯಾನೇ ಕಾರಣ ಎಂದು ದೂರಿದರು.

ಅನುರಾಗ್ ತಿವಾರಿ ಸಾವಿನ ಪ್ರಕರಣ ಸೂಕ್ತ ತನಿಖೆ ನಡೆಸುವ ಕುರಿತು ಉತ್ತರ ಪ್ರದೇಶ ಸರಕಾರಕ್ಕೆ ದೀರ್ಘ ಪತ್ರ ಬರೆದಿದ್ದು, ಅದರಲ್ಲಿ ತಾಂತ್ರಿಕ ಅಂಶಗಳು ಹಾಗೂ ಐಎಎಸ್ ಮಾಫಿಯಾ ಕುರಿತು ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ 2016ರಲ್ಲಿ ಐಎಎಸ್ ಅಧಿಕಾರಿಗಳ ಕುಂದು, ಕೊರತೆ ಅಹವಾಲು ಕೇಳಲು ಒಂದು ಸಮಿತಿ ರಚನೆ ಮಾಡಲು ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿತ್ತು. ಆದರೆ, ಇದುವರೆಗೂ ಯಾವ ರಾಜ್ಯದಲ್ಲೂ ಸ್ಥಾಪನೆಗೊಂಡಿಲ್ಲ. ನಿಷ್ಠಾವಂತ ಐಎಎಸ್ ಅಧಿಕಾರಿಗಳು ಇನ್ನುಮುಂದೆ ಉಳಿಯಬೇಕಾದರೆ, ಕೂಡಲೇ ಪ್ರತಿ ರಾಜ್ಯದಲ್ಲಿಯೂ ಸಮಿತಿ ರಚನೆ ಮಾಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ತಿವಾರಿಯ ಕಾಲೇಜು ಸ್ನೇಹಿತರಾದ ರಶ್ಮಿ ಮಿಶ್ರಾ, ಆಶಿಶ್, ಪವನ್ ಉಪಸ್ಥಿತರಿದ್ದರು.

ಬೆಂಗಳೂರಿನಲ್ಲಿದ್ದಾಗ ರಜೆಯಿಲ್ಲದೆ ನಿರಂತರವಾಗಿ ದುಡಿಯುತ್ತಿದ್ದ ವ್ಯಕ್ತಿ ಅನುರಾಗ್ ತಿವಾರಿ. ಅಂತಹ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಅಲ್ಲದೆ, ಅವರ ಸಾವಿನ ನಂತರ ಮೊಬೈಲ್‌ನಲ್ಲಿದ್ದ ದಾಖಲೆಗಳನ್ನು ಅಳಿಸಿ ಹಾಕಲಾಗಿದೆ. ಇದು ಅಮಾನುಷವಾದ ಕೃತ್ಯವಾಗಿದ್ದು, ತಪ್ಪು ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.

-ಮಯಾಂಕ್, ಅನುರಾಗ್ ತಿವಾರಿ ಸಹೋದರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News