ಪ್ರತ್ಯೇಕ ರಸ್ತೆ ಅಪಘಾತ: ಇಬ್ಬರು ಮೃತ್ಯು

Update: 2017-05-23 18:22 GMT

ಬೆಂಗಳೂರು, ಮೇ 23: ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿರುವ ಪ್ರಕರಣ ಯಶವಂತಪುರದಲ್ಲಿ ನಡೆದಿದೆ.

ಅಪ್ರಾಪ್ತ ಬಾಲಕನೊಂದಿಗೆ ಮಹಿಳೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ವಾಟರ್ ಟ್ಯಾಂಕರ್ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಯಶವಂತಪುರದ ಬಿಕೆ ನಗರದ 2ನೆ ಹಂತದ ಖಾದರ್ ಉನ್ನೀಸಾ ಮೃತಪಟ್ಟ ಮಹಿಳೆ ಎಂದು ಪೊಲೀಸರು ಗುರುತಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ 10ರ ಸುಮಾರಿಗೆ ಮಗನನ್ನು ಡಿವೈನ್ಸ್ ಸ್ಕೂಲ್‌ಗೆ ಸೇರಿಸಿ ಬೈಕ್‌ನಲ್ಲಿ ಅಪ್ರಾಪ್ತ ಬಾಲಕನೊಂದಿಗೆ ಹಿಂದೆ ಕುಳಿತುಕೊಂಡು ಹೋಗುತ್ತಿದ್ದಾಗ ಚೌಡೇಶ್ವರಿ ನಗರ ಕಡೆಯಿಂದ ಬರುತ್ತಿದ್ದ ವಾಟರ್ ಟ್ಯಾಂಕರ್ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಬಲಗಡೆ ಬಿದ್ದ ಉನ್ನೀಸಾ ಅವರ ಮೇಲೆ ಟ್ಯಾಂಕರ್ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪ್ರಾಪ್ತ ಬಾಲಕನಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಯಶವಂತಪುರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದಾಗ ಬೈಕ್‌ವೊಂದು ಢಿಕ್ಕಿ ಹೊಡೆದು ದಾಸರಹಳ್ಳಿಯ ಫಾತಿಮಾ (64) ಎಂಬುವರು ಸ್ಥಳದಲ್ಲೇ ಮೃತಪಟ್ಟಿರುವ ಪ್ರಕರಣ ತುಮಕೂರು ರಸ್ತೆಯ ಸಿಎಂಟಿಐ ಬಳಿ ನಡೆದಿದೆ.

ಮಂಗಳವಾರ ಬೆಳಗ್ಗೆ 9:30ರ ಸುಮಾರಿಗೆ ಫಾತಿಮಾ ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೋಗುತ್ತಿದ್ದಾಗ ತುಮಕೂರು ರಸ್ತೆಯ ಸಿಎಂಟಿಐ ಬಳಿ ರಸ್ತೆ ದಾಟುತ್ತಿದ್ದರು. ಆ ಸಂದರ್ಭದಲ್ಲಿ ವೇಗವಾಗಿ ಬಂದ ಬೈಕ್‌ವೊಂದು ಫಾತಿಮಾ ಅವರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಫಾತಿಮ ಸ್ಥಳದಲ್ಲೇ ಮೃತಪಟ್ಟದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News