ಬೌಲಿಂಗ್ ಕೋಚ್ ಹುದ್ದೆಗೆ ಝಹೀರ್ ಹೆಸರು ಶಿಫಾರಸು ಮಾಡಿದ ಕುಂಬ್ಳೆ

Update: 2017-05-25 06:42 GMT

ಮುಂಬೈ, ಮೇ 25: ಭಾರತದ ಮಾಜಿ ವೇಗದ ಬೌಲರ್ ಝಹೀರ್ ಖಾನ್ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗುವ ಮೂಲಕ ಎರಡನೆ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಸ್ಪಿನ್ ದಂತಕತೆ ಅನಿಲ್ ಕುಂಬ್ಳೆ ಬೌಲಿಂಗ್ ಕೋಚ್ ಹುದ್ದೆಗೆ ತನ್ನ ಮಾಜಿ ಸಹ ಆಟಗಾರ ಝಹೀರ್ ಹೆಸರನ್ನು ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.

ಐಪಿಎಲ್ ಫೈನಲ್ ಪಂದ್ಯಕ್ಕೆ ಮೊದಲು ಹೈದರಾಬಾದ್‌ನಲ್ಲಿ ಭಾರತದ ಹಾಲಿ ಕೋಚ್‌ಗಳು, ಬಿಸಿಸಿಐ ಪದಾಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರೊಂದಿಗೆ ನಡೆಸಿದ್ದ ಸಭೆಯಲ್ಲಿ ಕುಂಬ್ಳೆ ಅವರು ಝಹೀರ್ ಹೆಸರನ್ನು ಬೌಲಿಂಗ್ ಕೋಚ್ ಹುದ್ದೆಗೆ ಶಿಫಾರಸು ಮಾಡಿದ್ದರು ಎಂದು ವರದಿಯಾಗಿದೆ.

 ‘‘ಟೀಮ್ ಇಂಡಿಯಾದ ಕೋಚ್ ಕುಂಬ್ಳೆ ಬೌಲಿಂಗ್ ಕೋಚ್ ನೇಮಕ ಮಾಡುವ ಬಗ್ಗೆ ಪ್ರಸ್ತಾವಿಸಿದ್ದರು. ಈ ಹುದ್ದೆಗೆ ಝಹೀರ್ ಹೆಸರನ್ನು ಶಿಫಾರಸು ಮಾಡಿದ್ದರು. ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಕುಂಬ್ಳೆ ಅವರ ಪ್ರಸ್ತಾವದ ಬಗ್ಗೆ ಸರಿಯಾದ ಸಮಯದಲ್ಲಿ ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದಾರೆ’’ ಎಂದು ಮೂಲಗಳು ತಿಳಿಸಿವೆ.

92 ಟೆಸ್ಟ್‌ಗಳಲ್ಲಿ 311 ವಿಕೆಟ್ ಹಾಗೂ 200 ಏಕದಿನಗಳಲ್ಲಿ 282 ವಿಕೆಟ್‌ಗಳನ್ನು ಉರಳಿಸಿದ್ದ ಝಹೀರ್ ಖಾನ್ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೆ ಮೊದಲು ಟೀಮ್ ಇಂಡಿಯಾದ ಕೋಚಿಂಗ್ ಸ್ಟಾಫ್‌ನ್ನು ಸೇರ್ಪಡೆಯಾಗಲಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟವಾಗಿಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News