ಡ್ರಗ್ಸ್ ಸಾಗಿಸುತ್ತಿದ್ದ ಪಾರಿವಾಳ ಸೆರೆ ಹಿಡಿದ ಕುವೈತ್ ಕಸ್ಟಮ್ಸ್ ಅಧಿಕಾರಿಗಳು

Update: 2017-05-25 08:17 GMT

ಕುವೈತ್ ,ಮೇ 25 : ಹಿಂದಿನ ಕಾಲದ ರಾಜರು ಹಾಗೂ ಪ್ರೇಮಿಗಳು ತಮ್ಮ ಪತ್ರಗಳು ಹಾಗೂ ಸಂದೇಶಗಳನ್ನು ಪಾರಿವಾಳಗಳ ಮೂಲಕ ಕಳುಹಿಸುತ್ತಿದ್ದರೆ ಇದೀಗ ಈ ಪಾರಿವಾಳಗಳನ್ನು ಡ್ರಗ್ಸ್ ಸಾಗಾಟಕ್ಕೆ ಬಳಸಲಾಗುತ್ತಿದೆ. ಕುವೈತ್ ನಗರದಲ್ಲಿ ಸೆರೆ ಹಿಡಿಯಲಾದ ಪಾರಿವಾಳವೊಂದರ ಬೆನ್ನಿಗೆ ಸಿಕ್ಕಿಸಲಾಗಿದ್ದ ಚೀಲವೊಂದರಲ್ಲಿ ಡ್ರಗ್ಸ್ ಪತ್ತೆಯಾಗಿದೆ.

ಈ ಪಾರಿವಾಳ ಇರಾಕ್ ನಿಂದ ಕುವೈತ್ ನತ್ತ ಹಾರುತ್ತಿರುವಾಗ ಕುವೈತ್ ಕಸ್ಟಮ್ಸ್ ಅಧಿಕಾರಿಗಳ ಕಣ್ಣಿಗೆ ಬಿದ್ದು ಅದನ್ನು ಸೆರೆ ಹಿಡಿಯಲಾಗಿದೆ.

ಅದರ ಬೆನ್ನಿಗೆ ಕಟ್ಟಲಾಗಿದ್ದ ಬೂದು ಬಣ್ಣದ ಚೀಲವೊಂದರಲ್ಲಿ 178 ಅಮಲು ಬರಿಸುವ ಮಾತ್ರೆಗಳು ಪತ್ತೆಯಾಗಿವೆ.

ಒಂದು ಸುದ್ದಿ ಸಂಸ್ಥೆಯ ಪ್ರಕಾರ ಈ ಪಾರಿವಾಳವನ್ನು ಅಬ್ದಾಲಿ ಪ್ರಾಂತ್ಯದ ಕಸ್ಟಮ್ಸ್ ಇಲಾಖೆಯ ಕಟ್ಟಡದ ಮೇಲೆ ಸೆರೆ ಹಿಡಿಯಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಪಾರಿವಾಳ ಭಾರೀ ಸದ್ದು ಮಾಡುತ್ತಿದೆ. ಡ್ರಗ್ಸ್ ಸ್ಮಗ್ಲರುಗಳು ಪಾರಿವಾಳಗಳನ್ನು ಉಪಯೋಗಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. 2016ರಲ್ಲಿ ಪಾರಿವಾಳವೊಂದು ಕೊಸ್ಟಾ ರಿಕಾದ ಕಾರಾಗೃಹವೊಂದಕ್ಕೆ ಡ್ರಗ್ಸ್ ಸಾಗಿಸಲು ಯತ್ನಿಸಿದಾಗ ಸಿಕ್ಕಿ ಬಿದ್ದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News